ಶಹಾಪುರ: ‘ಕನ್ನಡದ ಪ್ರಮುಖ ಸಾಹಿತಿಗಳಲ್ಲಿ ಮೊಗಳ್ಳಿ ಗಣೇಶ ಕೂಡ ಒಬ್ಬರು. ಕಥಾ ಲೋಕಕ್ಕೆ ಹೊಸ ದಾರಿ ತೆರೆದವರು. ಅವರ ನಿರೂಪಣೆಯ ಶೈಲಿಯು ಅದ್ಭುತವಾಗಿತ್ತು’ ಎಂದು ಸಾಹಿತಿ ದೇವು ಪತ್ತಾರ ತಿಳಿಸಿದರು.
ನಗರದ ಕಸಾಪ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮೊಗಳ್ಳಿ ಗಣೇಶ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಾಹಿತಿ ದೇವನೂರು ಮಹದೇವ ಅವರನ್ನು ಬಿಟ್ಟರೆ ದಲಿತ ಬದುಕಿನ ಸಂಕಟದ ಅನುಭವ ಲೋಕವನ್ನು ಅತ್ಯಂತ ಸೂಕ್ಷ್ಮವಾಗಿ ಹಾಗೂ ಕಲಾತ್ಮಕವಾಗಿ ತಮ್ಮ ಕಥೆಗಳಲ್ಲಿ ಅಭಿವ್ಯಕ್ತ ಪಡಿಸಿದ್ದಾರೆ’ ಎಂದರು.
‘ತಕರಾರಿನಿಂದ ಆರಂಭವಾದ ಅವರ ವಿಮರ್ಶಾಪ್ರಜ್ಞೆ ಅಂದಿನ ಕಾಲದಲ್ಲಿ ಜಡಗೊಂಡಂತಿದ್ದ ಕನ್ನಡ ವಿಮರ್ಶೆಗೆ ಶಾಕ್ ನೀಡಿತ್ತು. ಮೊಗಳ್ಳಿ ಅವರ ನಿರ್ಗಮನ ನಿಜವಾಗಿಯೂ ಕನ್ನಡ ಭಾಷೆ, ಸಂಸ್ಕೃತಿಗೆ ದೊಡ್ಡ ನಷ್ಟ’ ಎಂದರು.
ಹಿರಿಯ ಸಾಹಿತಿ ಸಿದ್ಧರಾಮ ಹೊನ್ಕಲ್ ಮಾತನಾಡಿದರು.
ಉಪನ್ಯಾಸಕಿ ನಿರ್ಮಲಾ ತುಂಬುಗಿ, ಅಂಬ್ಲಯ್ಯ ಸೈದಾಪೂರ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ರವೀಂದ್ರನಾಥ ಹೊಸಮನಿ, ಬಸವರಾಜ ಹಿರೇಮಠ, ಶರಣಬಸವ ಪೊಲೀಸ್ ಬಿರಾದಾರ, ಸುರೇಶ ಅರುಣಿ, ಶಂಕರ ಹುಲಕಲ್, ದೇವಿಂದ್ರಪ್ಪ ವಿಶ್ವಕರ್ಮ, ಸಾಯಬಣ್ಣ ಪುರ್ಲೆ, ಭೀಮಪ್ಪ ಭಂಡಾರಿ, ರಾಘವೇಂದ್ರ ಹಾರಣಗೇರಾ ಭಾಗವಹಿಸಿದ್ದರು.