ADVERTISEMENT

ಯಾದಗಿರಿ | ಮಕ್ಕಳ ಆರೈಕೆಗೆ ಕೂಸಿನ ಮನೆ ಪೂರಕ

ಕೂಸಿನ ಮನೆಗೆ ಇಂಡಿಯನ್ ಏಷಿಯನ್ ಬ್ಯಾಂಕ್ ಸಿಬ್ಬಂದಿ ಭೇಟಿ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2025, 15:48 IST
Last Updated 5 ಏಪ್ರಿಲ್ 2025, 15:48 IST
ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ರಸ್ತಾಪುರ ಗ್ರಾಮ ಪಂಚಾಯಿತಿಯ ಕೂಸಿನ ಮನೆಗೆ ಇಂಡಿಯನ್ ಏಷಿಯನ್ ಬ್ಯಾಂಕ್ ಸಿಬ್ಬಂದಿ ತಂಡ ಭೇಟಿ ನೀಡಿ, ಪರಿಶೀಲಿಸಿತು
ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ರಸ್ತಾಪುರ ಗ್ರಾಮ ಪಂಚಾಯಿತಿಯ ಕೂಸಿನ ಮನೆಗೆ ಇಂಡಿಯನ್ ಏಷಿಯನ್ ಬ್ಯಾಂಕ್ ಸಿಬ್ಬಂದಿ ತಂಡ ಭೇಟಿ ನೀಡಿ, ಪರಿಶೀಲಿಸಿತು   

ಯಾದಗಿರಿ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ಮಾಡುವ ಗ್ರಾಮೀಣ ಮಹಿಳಾ ಕೂಲಿಕಾರರ ಮಕ್ಕಳನ್ನು ಸುರಕ್ಷಿತ ಆರೈಕೆ ಮಾಡುವಲ್ಲಿ ಕೂಸಿನ ಮನೆ ಪೂರಕ ಎಂದು ಇಂಡಿಯನ್ ಏಷಿಯನ್ ಬ್ಯಾಂಕ್ ಸಿಬ್ಬಂದಿ ತಂಡ ಅಭಿಪ್ರಾಯ ವ್ಯಕ್ತಪಡಿಸಿತು. 

ಶಹಾಪುರ ತಾಲ್ಲೂಕಿನ ರಸ್ತಾಪುರ ಗ್ರಾಮ ಪಂಚಾಯಿತಿಯ ರಸ್ತಾಪುರ ಗ್ರಾಮದಲ್ಲಿ ಅನುಷ್ಠಾನಗೊಳಿಸಿದ ಕೂಸಿನ ಮನೆಯ ನಿರ್ವಹಣಾ ಕ್ರಮದ ಕುರಿತು ಅಧ್ಯಯನ ಮಾಡಲು ಇಂಡಿಯನ್ ಏಷಿಯನ್ ಬ್ಯಾಂಕ್ ಸಿಬ್ಬಂದಿ ತಂಡ ಭೇಟಿ ನೀಡಿ, ಪರಿಶೀಲಿಸಿತು.

ಕೂಸಿನ ಮನೆಯ ಮಕ್ಕಳ ದಾಖಲಾತಿ, ಹಾಜರಾತಿ, ಮಕ್ಕಳ ಆರೈಕೆದಾರರ ಹಾಜರಾತಿ, ವೇತನ ಪಾವತಿ, ಮಕ್ಕಳ ಆಹಾರ ವಿತರಣೆ, ಆರೋಗ್ಯ ತಪಾಸಣೆ, ರೋಗ ನಿರೋಧಕ ಲಸಿಕಾ ವಿತರಣೆ, ಪೀಠೋಪಕರಣ, ಮಕ್ಕಳ ಆಟದ ಸಾಮಗ್ರಿಗಳ ದಾಸ್ತಾನು, ಖರ್ಚು ವೆಚ್ಚಗಳು, ಸಂದರ್ಶಕರ ವಹಿ ಸೇರಿದಂತೆ ಕೂಸಿನ ಮನೆ ಮೇಲ್ವಿಚಾರಣಾ ಸಮಿತಿಯ ಸಭಾ ನಡುವಳಿ ಕಡತಗಳ ಕ್ರಮಬದ್ದತೆಯನ್ನು ಪರಿಶೀಲಿಸಿತು.

ADVERTISEMENT

ಜಿಲ್ಲೆಯಲ್ಲಿ 122 ಗ್ರಾಮ ಪಂಚಾಯಿತಿಗಳಿದ್ದು, ಸುಸಜ್ಜಿತ ಕಟ್ಟಡದ ಲಭ್ಯತೆಗೆ ಅನುಸಾರ ಗ್ರಾಮ ಪಂಚಾಯಿತಿಗೆ ಒಂದರಂತೆ 117 ಕೂಸಿನ ಮನೆಗಳನ್ನು ಆರಂಭಿಸಿದ್ದು, ಕೂಸಿನ ಮನೆಯಲ್ಲಿ ಕೆಲಸ ಮಾಡುವ ಶಿಶು ಆರೈಕೆದಾರರಿಗೆ ಮಕ್ಕಳ ಲಾಲನೆ-ಪಾಲನೆ ಮಾಡುವ ಕುರಿತು ತರಬೇತಿ ನೀಡಲಾಗಿದೆ.ಕೂಸಿನ ಮನೆಗೆ ದಾಖಲಾಗುವ ಮಗುವಿಗೆ ಒಂದು ದಿನಕ್ಕೆ ₹12 ಗಳಂತೆ ಖರ್ಚು ಮಾಡಿ, ಪೌಷ್ಟಿಕ ಆಹಾರದ ಚಾರ್ಟ್ ಪ್ರಕಾರ ಆಹಾರ ನೀಡಲಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಡಿಯಾ  ಅವರು ಅಧ್ಯಯನ ತಂಡಕ್ಕೆ ಮಾಹಿತಿ ನೀಡಿದರು.

 ಗ್ರಾಮೀಣ ಕೂಲಿ ಕಾರ್ಮಿಕ ಮಹಿಳೆಯರ 6 ತಿಂಗಳಿಂದ 3 ವರ್ಷದೊಳಗಿನ ಪುಟ್ಟ ಮಕ್ಕಳ ಆರೋಗ್ಯ, ಸುರಕ್ಷತೆ ಪಾಲನೆಗೆ ಸರ್ಕಾರ ಆರಂಭಿಸಿದ ಕೂಸಿನ ಮನೆಯಲ್ಲಿ ಮಕ್ಕಳಿಗೆ ಪೌಷ್ಟಿಕ ಊಟ, ಆಟ-ಪಾಠದ ಪರಿಕರದ ಜತೆಗೆ ಲಾಲನೆ-ಪಾಲನೆ ಮಾಡಲಾಗುತ್ತದೆ. ನರೇಗಾ ಕೆಲಸಕ್ಕೆ ಹೋದ ಮಗುವಿನ ತಾಯಿ ಕೆಲಸ ಮಾಡಿ, ಬರುವವರೆಗೂ ಮಗುವನ್ನು ಸುರಕ್ಷಿತವಾಗಿ ಆರೈಕೆ ಮಾಡಿ, ಮಗುವಿನ ಪಾಲಕರಿಗೆ ಒಪ್ಪಿಸಲಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಉಪನಿರ್ದೇಶಕಿ ಗೀತಾ ಶಂಕರ್, ಸಹಾಯಕ ನಿರ್ದೇಶಕ ಕೆ.ಎಸ್.ಜಗದೀಶ, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಸಿ.ಬಿ.ದೇವರಮನಿ, ಶಹಾಪುರ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಬಸವರಾಜ ಶರಬೈ, ಸಹಾಯಕ ನಿರ್ದೇಶಕ ಶಾರದಮ್ಮ, ರಸ್ತಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀದೇವಿ, ಉಪಾಧ್ಯಕ್ಷ ಭೀಮಣ್ಣ, ಸದಸ್ಯ ಭೀಮರಾಯ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.