ADVERTISEMENT

ಜೆಸ್ಕಾಂ ಅಧಿಕಾರಿಗಳು ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಡಿಸಿ ಸೂಚನೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2021, 3:02 IST
Last Updated 15 ಜೂನ್ 2021, 3:02 IST
ಯಾದಗಿರಿಯಲ್ಲಿ ಜೆಸ್ಕಾಂ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಸಭೆ ನಡೆಸಿ ಮಾತನಾಡಿದರು
ಯಾದಗಿರಿಯಲ್ಲಿ ಜೆಸ್ಕಾಂ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಸಭೆ ನಡೆಸಿ ಮಾತನಾಡಿದರು   

ಯಾದಗಿರಿ: ಜಿಲ್ಲೆಯಲ್ಲಿ ಮಳೆಗಾಲ ಶುರುವಾಗಿದ್ದು, ರೈತರು ಮುಂಗಾರಿನ ಬೆಳೆಯ ಅಪೇಕ್ಷೆಯಲ್ಲಿದ್ದಾರೆ. ವಿದ್ಯುತ್ ಕೊರತೆಯಾಗದಂತೆ ನೋಡಿಕೊಳ್ಳಿ. ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ, ಮುಂಗಾರು ಪ್ರವಾಹ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿರಿ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್‌. ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜೆಸ್ಕಾಂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

ಲೈನ್‌ಮೆನ್‌ಗಳು ತಮ್ಮ ವಲಯಗಳಲ್ಲಿ ವಾಟ್ಸ್‌ ಆ್ಯಪ್ ಗ್ರೂಪ್‌ಗಳನ್ನು ರಚಿಸಿ ಅದರಲ್ಲಿ ರೈತರನ್ನು ಸೇರಿಸಿ ಅವರ ಸಮಸ್ಯೆಗಳನ್ನು ಆಲಿಸಿ ತಕ್ಷಣ ಸ್ಪಂದಿಸಿ ಎಂದು ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಮುಂಗಾರು ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಜೆಸ್ಕಾಂ ಸಿಬ್ಬಂದಿ ಸನ್ನದ್ದರಾಗಿರಬೇಕು. ವಿದ್ಯುತ್ ತಂತಿಗಳಿಗೆ ಅಪಾಯಕಾರಿಯಾಗುವ ಮರದ ಕೊಂಬೆಗಳನ್ನು ಕಡಿಯಲು ಜಂಗಲ್ ಕಟಿಂಗ್ ಸಿಬ್ಬಂದಿಗೆ ಸೂಕ್ತ ಸಲಹೆ ನೀಡಿ ಎಂದು ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

‘ಜಿಲ್ಲೆಯಲ್ಲಿ 900 ವಿದ್ಯುತ್ ಕಂಬಗಳು, ಸುಮಾರು 350 ಟಿ.ಸಿಗಳು ಗೋದಾಮಿನಲ್ಲಿ ಹೆಚ್ಚುವರಿಯಾಗಿ ಕ್ರೂಢೀಕರಿಸಿದ್ದೇವೆ. ಆದರೆ, ಟಿ.ಸಿಗಳಿಗೆ ತೈಲ ವ್ಯವಸ್ಥೆ ಮಾಡಬೇಕಾಗಿದೆ ಎಂದು ಜೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್‌ ರಾಘವೇಂದ್ರ ಅವರು ಮಾಹಿತಿ ನೀಡಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಟಿ.ಸಿಗಳಿಗೆ ತಕ್ಷಣ ತೈಲ ಪೂರೈಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಕೃಷಿ ಉಪನಿರ್ದೇಶಕ ಡಾ.ಬಾಲರಾಜ ರಂಗರಾವ, ಜೆಸ್ಕಾಂ ಎಂಜಿನಿಯರ್‌ಗಳಾದ ಈರಣ್ಣ, ಶಿವಪ್ಪ, ರಫೀಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.