ADVERTISEMENT

ಯಾದಗಿರಿ | ದೇವರಾಜ ಅರಸು ಜನಮಾನಸದ ನಾಯಕ: ಜಿಲ್ಲಾಧಿಕಾರಿ ಹರ್ಷಲ್ ಭೋಯರ್

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 6:37 IST
Last Updated 21 ಆಗಸ್ಟ್ 2025, 6:37 IST
ಯಾದಗಿರಿಯಲ್ಲಿ ಬುಧವಾರ ಡಿ. ದೇವರಾಜ ಅರಸು ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರು ಪೂಜೆ ಸಲ್ಲಿಸಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಕಾಡ್ಲೂರ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ವಿಜಯ ಕುಮಾರ ಮಡ್ಡೆ ಉಪಸ್ಥಿತರಿದ್ದರು
ಯಾದಗಿರಿಯಲ್ಲಿ ಬುಧವಾರ ಡಿ. ದೇವರಾಜ ಅರಸು ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರು ಪೂಜೆ ಸಲ್ಲಿಸಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಕಾಡ್ಲೂರ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ವಿಜಯ ಕುಮಾರ ಮಡ್ಡೆ ಉಪಸ್ಥಿತರಿದ್ದರು   

ಯಾದಗಿರಿ: ‘ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ಭೂಒಡೆತನದಲ್ಲಿ ಬಹುದೊಡ್ಡ ಸುಧಾರಣೆ ತಂದರು. ತಮ್ಮ ಎಂಟು ವರ್ಷಗಳ ಆಡಳಿತದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿ, ಜನಮಾನಸದ ನಾಯಕರಾಗಿ ಗುರುತಿಸಿಕೊಂಡಿದ್ದಾರೆ’ ಎಂದು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಹೇಳಿದರು.

‌ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯೋಜಿಸಿದ್ದ ಡಿ.ದೇವರಾಜ ಅರಸು ಅವರ 110ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಾಮಾಜಿಕ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯ ಅರಸು ಅವರಲ್ಲಿರುವ ವಿಶೇಷ ವ್ಯಕ್ತಿತ್ವವಾಗಿತ್ತು. ಕೆಲವರಿಗೆ ಒಳ್ಳೆಯ ಸಾಮಾಜಿಕ ಚಿಂತನೆ ಇರುತ್ತದೆ. ಆದರೆ, ಅದನ್ನು ಕಾರ್ಯಗತಗೊಳಿಸಲು ಆಗುವುದಿಲ್ಲ. ಆದರೆ, ಅರಸು ಅವರಿಗೆ ಒಳ್ಳೆಯ ಚಿಂತನೆ ಹಾಗೂ ಆ ಚಿಂತನೆಯನ್ನು ಅನುಷ್ಠಾನಕ್ಕೆ ತರುವ ಶಕ್ತಿಯೂ ಇತ್ತು. ಹೀಗಾಗಿ, ಅವರು ಮಾಡಿರುವ ಕೆಲಸಗಳು ರಾಜ್ಯದಲ್ಲಿ ಬಹಳಷ್ಟು ಪ್ರಭಾವ ಬೀರಿವೆ’ ಎಂದರು.

ADVERTISEMENT

‘ಭೂಸುಧಾರಣೆ ಕಾಯ್ದೆಗೆ ದೊಡ್ಡ ಕೊಡುಗೆ ನೀಡಿ, ಬಡತನ ನಿರ್ಮೂಲನೆಗಾಗಿ ಕೆಲಸ ಮಾಡಿದ್ದರು. ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಆಯೋಗಗಳನ್ನು ರಚಿಸಿ, ಅಲೆಮಾರಿ ಜನಾಂಗಕ್ಕೆ ಸಾಕಷ್ಟು ಯೋಜನೆಗಳನ್ನು ಕೊಟ್ಟಿದ್ದಾರೆ. ಬಿಸಿಎಂ ಹಾಸ್ಟೆಲ್‌ಗಳು ತೆರೆದಿದ್ದರಿಂದ ಗ್ರಾಮೀಣ ಭಾಗದ ಮಕ್ಕಳು ಉತ್ತಮವಾದ ಶಿಕ್ಷಣ ಪಡೆದರು. ಕರ್ನಾಟಕದಲ್ಲಿ ಹಾಸ್ಟೆಲ್‌ಗಳ ಸ್ಥಾಪನೆಯು ಬಹುದೊಡ್ಡ ಯಶಸ್ವಿ ಯೋಜನೆ’ ಎಂದು ಹೇಳಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸದಾಶಿವ ಎಂ.ನಾರಾಯಣಕರ್ ಮಾತನಾಡಿ, ‘ಸರ್ಕಾರ ಹಲವು ಯೋಜನೆಗಳನ್ನು ಅರಸು ಅವರ ಹೆಸರಿನಲ್ಲಿ ಜಾರಿಗೊಳಿಸುವ ಮೂಲಕ ಅನೇಕರಿಗೆ ಉಪಯೋಗ ಆಗುವಂತಹ ಕೆಲಸ ಮಾಡಿದೆ’ ಎಂದರು.

ನಿವೃತ್ತ ಪ್ರಾಂಶುಪಾಲ ಅಶೋಕ ವಾಟ್ಕರ್ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಕಾಡ್ಲೂರ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ವಿಜಯ ಕುಮಾರ ಮಡ್ಡೆ, ಡಿವೈಎಸ್‌ಪಿ ನಾಯಕ, ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಅಪ್ಪಣ್ಣ ಚಿನ್ನಾಕರ್, ಭೀಮಣ್ಣ ಮೇಟಿ, ಶರಣಪ್ಪ ಮಾನೇಗಾರ, ಮೌಲಾಲಿ ಅನಪುರ, ನಾಗರತ್ನ ಮೂರ್ತಿ ಅನಪುರ, ಮರೇಪ್ಪ ಚಟ್ಟರಕರ್, ಉಮೇಶ ಮುದ್ನಾಳ, ಬಾಷು ಮೀಯಾ ವಡಗೇರಾ, ಯಾದವ ಸಮಾಜದ ಜಿಲ್ಲಾಧ್ಯಕ್ಷ ತಾಯಪ್ಪ ಯಾದವ, ಮಡಿವಾಳಪ್ಪ ಬಿಜಾಸಪೂರ್, ಹಣಮಂತ ಗಣಪೂರ್ ಉಪಸ್ಥಿತರಿದ್ದರು. 

ನಿಲಯ ಪಾಲಕ ಉಮೇಶ ಪೂಜಾರ ಸ್ವಾಗತಿಸಿದರು. ಜ್ಯೋತಿ ಲತಾ ತಡಿಬಿಡಿ ನಿರೂಪಿಸಿ, ವಂದಿಸಿದರು.

ಯಾದಗಿರಿಯ ಬಿಜೆಪಿ ಕಚೇರಿಯಲ್ಲಿ ಬುಧವಾರ ಡಿ. ದೇವರಾಜ ಅರಸು ಜಯಂತಿ ಆಚರಿಸಲಾಯಿತು
ಬಡವರು ಶೋಷಿತರು ಹಿಂದುಳಿದ ವರ್ಗಗಳ ಜನರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದು ಹೊಸ ಕಾನೂನು ಮತ್ತು ಕಾಯ್ದೆಗಳನ್ನು ಜಾರಿ ಮಾಡುವಲ್ಲಿ ದಿಟ್ಟ ಹೆಜ್ಜೆ ಇರಿಸಿ  ಹೊಸ ಬದುಕಿಗೆ ದಾರಿದೀಪವಾಗಿದ್ದರು
ಹರ್ಷಲ್ ಭೋಯರ್ ಜಿಲ್ಲಾಧಿಕಾರಿ
‘ಅರಸು ಕೊಡುಗೆ ಅಪಾರ’
ಯಾದಗಿರಿ: ‘ಪರಿವರ್ತನೆಯ ಹರಿಕಾರರಾದ ದೇವರಾಜ ಅರಸು ಅವರ ಆಡಳಿತದಲ್ಲಿ ಹಲವು ಸುಧಾರಣೆ ಕಾರ್ಯಕ್ರಮಗಳಿಂದ ರಾಜ್ಯದಲ್ಲಿ ಸುವರ್ಣ ಯುಗವಾಗಿತ್ತು. ರಾಜ್ಯಕ್ಕೆ ಅವರು ನೀಡಿದ ಕೊಡುಗೆಗಳು ಅಪಾರ’ ಎಂದು ಬಿಜೆಪಿ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಕಟ್ಟಿಮನಿ ಹೇಳಿದರು. ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಡಿ.ದೇವರಾಜ ಅರಸು ಅವರ ಭಾವಚಿತ್ರಕ್ಕೆ ಪೂಜೆ ಮಾಡಿ ಅವರು ಮಾತನಾಡಿದರು. ‘ಉಳುವವನೇ ಭೂಮಿಯ ಒಡೆಯ ಜೀತ ಪದ್ಧತಿ ನಿರ್ಮೂಲನೆ ಮಾಡಿ ಸರ್ವರಿಗೂ ಸಮಪಾಲು ನೀಡುವ ಚಿಂತನೆ ಮಾಡಿ ಅದನ್ನು ದಿಟ್ಟತನದಿಂದ ಜಾರಿಗೆಯೂ ತಂದಿದ್ದರು.ಅವರಿಂದಾಗಿ ಹಿಂದುಳಿದ ವರ್ಗದವರು ರಾಜಕೀಯವಾಗಿ ಮೇಲೆ ಬರುವಂತೆ ಆಗಿದೆ’ ಎಂದರು. ನಗರ ಬಿಜೆಪಿ ಉಪಾಧ್ಯಕ್ಷ ಕಾಶಿರಾವ್ ಶಿರಸಾಗರ್ ರೈತ ಮೋರ್ಚಾ ಅಧ್ಯಕ್ಷ ಶಿವಣ್ಣ ವಿಶ್ವಕರ್ಮ ಪ್ರಮುಖರಾದ ಸಾಬಣ್ಣ ವೆಂಕಟೇಶ್ ಹಣಮಂತ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.