
ಯಾದಗಿರಿ: ‘ಮಕ್ಕಳ ಆರೋಗ್ಯ, ಗುಣಾತ್ಮಕ ಶಿಕ್ಷಣ, ಹಾಜರಾತಿ ಹೆಚ್ಚಳ ಹಾಗೂ ಶೈಕ್ಷಣಿಕ ವ್ಯವಸ್ಥೆ ಸುಧಾರಣೆಗೆ ಪೋಷಕರ ಮತ್ತು ಶಿಕ್ಷಕರ ಮಹಾಸಭೆ ಸಹಕಾರಿಯಾಗಿದೆ’ ಎಂದು ಶಾಲಾ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ ರಾಹುಲ್ ಪಾಂಡ್ವೆ ಹೇಳಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಜವಾಹರಲಾಲ್ ನೆಹರೂ ಅವರ ಜಯಂತಿ ಅಂಗವಾಗಿ ಮಕ್ಕಳ ದಿನಾಚರಣೆ ಹಾಗೂ ಪೋಷಕರು- ಶಿಕ್ಷಕರ ಮಹಾಸಭೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಸರ್ಕಾರವು ಶೈಕ್ಷಣಿಕ ವ್ಯವಸ್ಥೆ ಸುಧಾರಣೆಗೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಭವಿಷ್ಯದಲ್ಲಿ ಗುಣಾತ್ಮಕ ಶಿಕ್ಷಣ ಒದಗಿಸುವುದು, ಈಗಿರುವ ವ್ಯವಸ್ಥೆಗಳ ಬಗ್ಗೆ ಚರ್ಚೆಗಾಗಿ ಪೋಷಕರು ಹಾಗೂ ಶಿಕ್ಷಕರ ಮಹಾಸಭೆ ಏರ್ಪಡಿಸಿದೆ. ಇದರ ಸದುಪಯೋಗ ಪಡೆಯಬೇಕು. ಸರ್ಕಾರದ ಸೌಲಭ್ಯಗಳ ಲಾಭ ಪಡೆಯುವುದರ ಜೊತೆಗೆ ಶಿಕ್ಷಣದಲ್ಲಿ ಶಿಸ್ತುಬದ್ಧತೆ ತರಬೇಕು’ ಎಂದರು.
ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಮಾತನಾಡಿ, ‘ಶಿಕ್ಷಣ ಕ್ಷೇತ್ರದ ಸುಧಾರಣೆ, ಬದಲಾವಣೆಯ ಮುಖ್ಯ ಭಾಗವಾಗಿ ಈ ಮಹಾಸಭೆ ನಡೆದಿದೆ. ಶಿಕ್ಷಕರು, ಪೋಷಕರು, ಮಕ್ಕಳ ಮಧ್ಯೆ ಸಮನ್ವಯತೆ ಸಾಧಿಸಿ ಗುಣಾತ್ಮಕ ಶಿಕ್ಷಣಕ್ಕೂ ನೆರವಾಗಲಿದೆ’ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಡಿಯಾ ಮಾತನಾಡಿ, ‘ಶಿಕ್ಷಕರು, ಪೋಷಕರು ಹಾಗೂ ಸಮುದಾಯದ ಎಲ್ಲರೂ ಕೂಡಿ ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಮುಂದಾಗಬೇಕು’ ಎಂದು ಸಲಹೆ ನೀಡಿದರು.
ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಮರಿಯಪ್ಪ ಮಾತನಾಡಿ, ‘ಅತ್ಯಂತ ಸೌಮ್ಯ ವರ್ಗಗಳಾದ ಮಹಿಳೆಯರು ಹಾಗೂ ಮಕ್ಕಳ ಮೇಲೆ ಹೆಚ್ಚು ದೌರ್ಜನ್ಯ ನಡೆಯುತ್ತಿವೆ. ಇದಕ್ಕಾಗಿ ಭ್ರೂಣ ಹತ್ಯೆ ಹಾಗೂ ಪತ್ತೆ ನಿಷೇಧ ಕಾಯ್ದೆ, ಮಕ್ಕಳ ಜನನ ಮರಣ ನೋಂದಣಿ ಕಾಯ್ದೆ, ಉಚಿತ ಹಾಗೂ ಕಡ್ಡಾಯ ಶಿಕ್ಷಣದ ಹಕ್ಕು ಕಾಯ್ದೆ, ಮಕ್ಕಳ ಹಕ್ಕುಗಳ ರಕ್ಷಣಾ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆಗಳು ಜಾರಿಯಲ್ಲಿವೆ’ ಎಂದರು.
‘ಪೋಷಕರನ್ನು ಭಯದ ವಾತಾವರಣದಿಂದ ಹೊರತರಲು ಮಕ್ಕಳು ಅತ್ಯುತ್ತಮ ವಿದ್ಯಾರ್ಥಿಗಳಾಗಿ ಸಾಧನೆಗೈಯ್ಯಬೇಕು. ಮೊಬೈಲ್ ವ್ಯಸನದಿಂದ ದೂರ ಇರಬೇಕು’ ಎಂದು ಹೇಳಿದರು.
ಮುಖ್ಯಮಂತ್ರಿಗಳು ಬೆಂಗಳೂರಲ್ಲಿ ನಡೆದ ಮಕ್ಕಳ ದಿನಾಚರಣೆ ಹಾಗೂ ಪೋಷಕರ-ಶಿಕ್ಷಕರ ಮಹಾಸಭೆ ಉದ್ಘಾಟಿಸಿದರು. ರಾಜ್ಯದ ಎಲ್ಲ ಶಾಲಾ, ಕಾಲೇಜು ಪೋಷಕರ-ಶಿಕ್ಷಕರ ಮಹಾಸಭೆ ಅಂಗವಾಗಿ ಆನ್‌ಲೈನ್ ಮೂಲಕ ಪಾಲಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಡಿಡಿಪಿಯು ಪಂಡಿತರಾವ್ ಪವಾರ್, ಮಕ್ಕಳ ರಕ್ಷಣಾಧಿಕಾರಿ ನಿರ್ಮಲಾ ಮಾತನಾಡಿದರು. ಡಯಟ್ ಪ್ರಾಂಶುಪಾಲ ವೃಷಬೇಂದ್ರ, ಎಸ್‌ಡಿಎಂಸಿ ಅಧ್ಯಕ್ಷ ರಾಠೋಡ ಉಪಸ್ಥಿತರಿದ್ದರು. ಡಿಡಿಪಿಐ ಚನ್ನಬಸಪ್ಪ ಮುಧೋಳ ಸ್ವಾಗತಿಸಿದರು. ಶಿಕ್ಷಕಿ ಎಲಿಜಾ ಬ.ಬಳಿಗೇರಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.