ADVERTISEMENT

ಕೋವಿಡ್ ಲಸಿಕೆಯ 2ನೇ ಹಂತದ ಡೋಸ್‌ ಹೆಚ್ಚಿಸಲು ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2021, 3:24 IST
Last Updated 17 ಫೆಬ್ರುವರಿ 2021, 3:24 IST
ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಟಾಸ್ಕ್ ಪೋರ್ಸ್ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಮಾತನಾಡಿದರು
ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಟಾಸ್ಕ್ ಪೋರ್ಸ್ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಮಾತನಾಡಿದರು   

ಯಾದಗಿರಿ: ಆರೋಗ್ಯ ಇಲಾಖೆ ಸಿಬ್ಬಂದಿ, ಕಂದಾಯ, ಪೊಲೀಸ್, ಪಂಚಾಯತ್ ರಾಜ್ ಇಲಾಖೆಗಳು ಸೇರಿದಂತೆ ಇತರ ಇಲಾಖೆಯ ಸಿಬ್ಬಂದಿಗಳಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಎರಡನೇ ಡೋಸ್ (ಲಸಿಕೆ) ಪಡೆಯುವವರ ಸಂಖ್ಯೆ ಹೆಚ್ಚಿಸಲು ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಎರಡನೇ ಹಂತದ ಡೋಸ್ (ಲಸಿಕೆ) ವಿತರಣೆಗೆ ಕುರಿತು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಟಾಸ್ಕ್ ಪೋರ್ಸ್ ಸಮಿತಿ ಸಭೆಯಲ್ಲಿಅವರು ಮಾತನಾಡಿದರು.

ಕೋವಿಡ್-19 ಲಸಿಕೆಗೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕು ಆರೋಗ್ಯಾಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಲಸಿಕಾ ಕೇಂದ್ರಗಳಲ್ಲಿ ಜನಸಂದಣಿ ಉಂಟಾಗದಂತೆ ಲಸಿಕಾ ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ವಿತರಣೆಗೆ ವ್ಯವಸ್ಥಿತ ಯೋಜನೆ ರೂಪಿಸಿಕೊಳ್ಳಬೇಕು ಎಂದರು.

ADVERTISEMENT

ಲಸಿಕೆ ಸಂಗ್ರಹಿಸಿಡಲು ಜಿಲ್ಲೆಯಲ್ಲಿ ದಾಸ್ತಾನು ಕೇಂದ್ರ ತೆರೆಯಲಾಗಿದ್ದು, ಲಸಿಕೆ ಪೂರೈಕೆ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಉಂಟಾಗಬಾರದು. ವ್ಯವಸ್ಥಿತವಾಗಿ ಲಸಿಕೆ ಪೂರೈಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದುಮತಿ ಕಾಮಶೆಟ್ಟಿ ಮಾತನಾಡಿ, ಎರಡನೇ ಡೋಸ್ (ಲಸಿಕೆ) ನೀಡಲು 15 ಸೆಷನ್‌ಗಳನ್ನು ಮಾಡಲಾಗಿದ್ದು, ಒಂದು ಕೇಂದ್ರದಲ್ಲಿ ದಿನಕ್ಕೆ 150 ಜನ ಲಸಿಕೆ ಪಡೆಯಬಹುದು. ಜಿಲ್ಲೆಯ 53 ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೋವಿಡ್ ಲಸಿಕೆ ಪಡೆದವರಿಗೆ ವೇಟಿಂಗ್ ಹಾಲ್, ಲಸಿಕಾ ಕೊಠಡಿ, ನಿಗಾವಣೆ ಕೊಠಡಿ ಸೇರಿದಂತೆ ಲಸಿಕೆಗಾಗಿ ಮೂರು ಕೊಠಡಿಗಳು ಬೇಕಾಗುತ್ತವೆ. ಈ ನಿಟ್ಟಿನಲ್ಲಿ ಕಿರಿಯ ಆರೋಗ್ಯ ಸಹಾಯಕಿಯರಿಗೆ, ಆಶಾ ಕಾರ್ಯಕರ್ತೆಯರಿಗೆ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಕೋವಿಡ್ ಲಸಿಕೆ ದಾಸ್ತಾನುಕೇಂದ್ರದಲ್ಲಿ ಸುಮಾರು 24 ಲಕ್ಷ ಡೋಸ್ ಸಂಗ್ರಹಿಸುವ ಅವಕಾಶವಿದೆ ಎಂದು ತಿಳಿಸಿದರು.

ಇದೇವೇಳೆಹೆಚ್ಚುವರಿಜಿಲ್ಲಾಧಿಕಾರಿ ಪ್ರಕಾಶ ಜಿ.ರಜಪೂತ,ಉಪವಿಭಾಗಾಧಿಕಾರಿಶಂಕರಗೌಡ ಸೋಮನಾಳ, ವಿಶ್ವ ಆರೋಗ್ಯ ಸಂಸ್ಥೆಯ ಎನ್‌ಪಿಎಸ್ ಅಧಿಕಾರಿ ಅನಿಲ ಕುಮಾರ್ ತಾಳಿಕೋಟಿ, ಆರ್‌ಸಿಎಚ್ ಡಾ.ಸೂರ್ಯಪ್ರಕಾಶ ಕಂದಕೂರ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ರಾಜು, ಕಾರ್ಮಿಕ ಇಲಾಖೆಯ ಸಹಾಯಕ ನಿರ್ದೇಶಕಿ ಶ್ವೇತಾ, ಮಹೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.