ADVERTISEMENT

ಯಾದಗಿರಿ: ಅವ್ಯವಸ್ಥೆಯ ಆಗರ ಮೈಲಾಪುರ

ಧಾರ್ಮಿಕ ಕ್ಷೇತ್ರದಿಂದ ವಾರ್ಷಿಕ ಕೋಟ್ಯಂತರ ರೂಪಾಯಿ ಆದಾಯ ಇದ್ದರೂ ಮೂಲಸೌಕರ್ಯಗಳ ಕೊರತೆ

ಮಲ್ಲಿಕಾರ್ಜುನ ನಾಲವಾರ
Published 13 ಅಕ್ಟೋಬರ್ 2025, 6:39 IST
Last Updated 13 ಅಕ್ಟೋಬರ್ 2025, 6:39 IST
ಯಾದಗಿರಿ ತಾಲ್ಲೂಕಿನ ಮೈಲಾಪುರದ ಕೆರೆಯ ಬದಿಯಲ್ಲಿ ಬಿದ್ದಿರುವ ಹಳೇ ಬಟ್ಟೆಗಳ ರಾಶಿ
ಯಾದಗಿರಿ ತಾಲ್ಲೂಕಿನ ಮೈಲಾಪುರದ ಕೆರೆಯ ಬದಿಯಲ್ಲಿ ಬಿದ್ದಿರುವ ಹಳೇ ಬಟ್ಟೆಗಳ ರಾಶಿ   

ಯಾದಗಿರಿ: ಜಿಲ್ಲೆಯ ಪ್ರಮುಖ ಧಾರ್ಮಿಕ ಕೇಂದ್ರವಾದ ಮೈಲಾಪುರ ಗ್ರಾಮವೂ ಅವ್ಯವಸ್ಥೆಯ ಆಗರವಾಗಿದೆ. ಪುಣ್ಯಸ್ನಾನದ ಹೊನ್ನಕೆರೆಯ ಸುತ್ತಲೂ ಸ್ವಚ್ಛತೆ ಮರಿಚೀಕೆಯಾಗಿದ್ದು, ಎಲ್ಲೆಂದರಲ್ಲಿ ಹಳೇ ಬಟ್ಟೆಗಳು ಬಿದ್ದಿವೆ.

ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಮೈಲಾರಲಿಂಗೇಶ್ವರ ದೇವಸ್ಥಾನವು ‘ಎ’ ವರ್ಗದ ದೇವಸ್ಥಾನಗಳ ಸಾಲಿನಲ್ಲಿ ಸ್ಥಾನ ಪಡೆದಿದೆ. ಆದರೆ, ಮೂಲಸೌಕರ್ಯಗಳು ಪಡೆಯುವಲ್ಲಿ ಮಾತ್ರ ಹಿಂದಿದೆ. ವಾರ್ಷಿಕ ಸುಮಾರು ₹ 1.50 ಕೋಟಿಯಷ್ಟು ಆದಾಯವೂ ಸರ್ಕಾರದ ಖಜಾನೆಗೆ ಸೇರಿದರೂ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ.

ಸುಪ್ರಸಿದ್ಧ ಕ್ಷೇತ್ರವಾದ ಮೈಲಾಪುರದ ಮೈಲಾರಲಿಂಗೇಶ್ವರ ದರ್ಶನಕ್ಕೆ ಪ್ರತಿ ಭಾನುವಾರ ಹಾಗೂ ಅಮಾವಾಸ್ಯೆಗೆ ಸಾವಿರಾರು ಭಕ್ತರು ಬರುತ್ತಾರೆ. ತಗ್ಗು ಗುಂಡಿಗಳಿಂದ ಆವೃತ್ತವಾದ ಗ್ರಾಮದ ಕೆಸರು ಮತ್ತು ದೂಳಿನ ರಸ್ತೆಗಳನ್ನು ಹಾದು ಕೆರೆಯನ್ನು ತಲುಪುತ್ತಾರೆ.

ADVERTISEMENT

ಕೆರೆಯಲ್ಲಿ ಪುಣ್ಯಸ್ನಾನ ಮಾಡಿದ ಬಳಿಕ ಕೆಲವರು ಹಳೇ ಬಟ್ಟೆಗಳನ್ನು ನೀರಲ್ಲಿ, ಕೆರೆಯ ಬದಿಯಲ್ಲಿ ಎಸೆಯುತ್ತಾರೆ. ಇದರಿಂದ ಕೆರೆಯ ಪರಿಸರಕ್ಕೆ ಧಕ್ಕೆ ಆಗುತ್ತಿದೆ. ಹಳೇ ಬಟ್ಟೆಗಳನ್ನು ಹಾಕು ಗುಂಡಿಗಳನ್ನು ತೋಡಿದ್ದರೂ ಭಕ್ತರು ಅವುಗಳತ್ತ ಸುಳಿಯುವುದಿಲ್ಲ. ಕೆರೆಯ ಬದಿಯಲ್ಲಿ ಬಟ್ಟೆಗಳ ರಾಶಿ ಹಾಕಿ, ಪವಿತ್ರ ಕ್ಷೇತ್ರವನ್ನು ಮಲಿನ ಮಾಡುತ್ತಿದ್ದಾರೆ ಎನ್ನುತ್ತಾರೆ ಅಧಿಕಾರಿಗಳು.

ಕೆರೆಯಿಂದ ಬೆಟ್ಟ ಹತ್ತುವ ಬದಿಯಲ್ಲಿ ಮಹಿಳೆ ಮತ್ತು ಪುರುಷರಿಗಾಗಿ ಸುಸಜ್ಜಿತವಾದ ಶೌಚಾಲಯ ನಿರ್ಮಿಸಲಾಗಿದೆ. ಅದು ಸದ್ಬಳಕೆಯಾಗದೆ ಬೀಗ ಹಾಕಲಾಗಿದೆ. ಶೌಚಾಲಯ ಬಳಕೆ ಆಗದೆ ಬಯಲಿನಲ್ಲಿ ಬಹಿರ್ದೆಸೆ ಮಾಡುವಂತ ಪರಿಸ್ಥಿತಿ ಇದ್ದು, ಮೂಗು ಮುಚ್ಚಿಕೊಂಡು ಓಡಾಡು ಅನಿವಾರ್ಯತೆ ನಿರ್ಮಾಣವಾಗಿದೆ.

ಗ್ರಾಮದ ಪ್ರಮುಖ ರಸ್ತೆಗಳು ಗುಂಡಿಗಳಿಂದ ಕೂಡಿವೆ. ಮಳೆಯಾದರೆ ಕೆಸರು, ಮಳೆ ಇರದಿದ್ದರೆ ದೂಳಿನ ಕೂಡಿರುತ್ತವೆ. ಚರಂಡಿಯ ನೀರು ಸಹ ರಸ್ತೆಗಳಲ್ಲಿ ಹರಿದಾಡುತ್ತದೆ. ಎಲ್ಲೆಂದರಲ್ಲಿ ತ್ಯಾಜ್ಯವೂ ಬಿದ್ದಿರುತ್ತದೆ. ಭಕ್ತರು, ಗ್ರಾಮಸ್ಥರು ಈ ಅವ್ಯವಸ್ಥೆಯ ನಡುವೆ ನಿತ್ಯ ಓಡಾಡಬೇಕಿದೆ.

ಶಾಶ್ವತ ಬ್ಯಾರಿಕೇಡ್ ಹಾರಿ ದೇವರ ದರ್ಶನ: ಭಾನುವಾರ ಹಾಗೂ ಅಮಾವಾಸ್ಯೆ ದಿನದಂದು ಸಾವಿರಾರು ಭಕ್ತರು ಮಲ್ಲಯ್ಯನ ದರ್ಶನಕ್ಕೆ ಬರುತ್ತಾರೆ. ಕೆರೆ ಬದಿಯ ಮೆಟ್ಟಿಲು ಹಾಗೂ ಬೆಟ್ಟದ ಮುಂಭಾಗದಿಂದ ಶಾಶ್ವತ ಬ್ಯಾರಿಕೇಡ್‌ಗಳನ್ನು ಹಾಕಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಆದರೆ, ಟಿಕೆಟ್‌ ಕೊಡಲು ನಿಯೋಜನೆಗೊಂಡವರು ಕೆಲವೊಮ್ಮೆ ಬೀಗ ಹಾಕಿಕೊಂಡು ಹೋಗುತ್ತಾರೆ.

ಉದ್ದದ ಸರತಿ ಸಾಲಿನಲ್ಲಿ ನಿಲ್ಲಲು ಆಗದ ವೃದ್ಧರು, ಮಕ್ಕಳೊಂದಿಗೆ ಬಂದವರಿಗೆ ಇದರಿಂದ ನಿರಾಸೆ ಆಗುತ್ತಿದೆ. ಕೆಲವು ಯುವಕರು, ಯುವತಿಯರು ಬ್ಯಾರಿಕೇಡ್‌ಗಳನ್ನು ಹಾರಿ ದೇವರ ದರ್ಶನ ಮಾಡುವುದು ಸಾಮಾನ್ಯವಾಗಿದೆ.

ಯಾದಗಿರಿ ತಾಲ್ಲೂಕಿನ ಮೈಲಾಪುರದ ಕೆರೆ ಬದಿಯ ರಸ್ತೆಯ ಅವ್ಯವಸ್ಥೆ
ಯಾದಗಿರಿ ತಾಲ್ಲೂಕಿನ ಮೈಲಾಪುರದ ಮೈಲಾರಲಿಂಗೇಶ್ವರ ದರ್ಶನಕ್ಕಾಗಿ ಶಾಶ್ವತ ಬ್ಯಾರಿಕೇಡ್‌ಗಳನ್ನು ಹಾರಿದ ಭಕ್ತರು

‘ವಾರಕ್ಕೊಮ್ಮೆ ಬಂದು ಬಟ್ಟೆಗಳು ಸುಡುತ್ತಾರೆ’

‘ಯಾದಗಿರಿ ನಗರದಿಂದ ಇಬ್ಬರು ಕಾರ್ಮಿಕರು ವಾರಕ್ಕೊಮ್ಮೆ ಬಂದು ಕೆರೆಯ ಸುತ್ತಲೂ ಬಿದ್ದ ಬಟ್ಟೆಗಳನ್ನು ಗುಡ್ಡೆಹಾಕಿ ಬೆಂಕಿ ಹಚ್ಚಿ ಸುಡುತ್ತಾರೆ’ ಎಂದು ಕೆರೆ ಬದಿಯ ತೆಂಗಿನ ವ್ಯಾಪಾರಸ್ಥ ಮಹಿಳೆಯೊಬ್ಬರು ತಿಳಿಸಿದರು. ‘ಹಳೇ ಬಟ್ಟೆಗಳನ್ನು ಎಸೆಯದಂತೆ ಸ್ಪೀಕರ್ ಮೂಲಕ ಅನೌನ್ಸ್‌ ಮಾಡಿ ತಿಳಿದರೂ ಭಕ್ತರು ಕೇಳುವುದಿಲ್ಲ. ಬಳಸಿ ಹರಿದ ಬಟ್ಟೆಗಳನ್ನು ಬಿಸಾಡಿ ಇಡೀ ಕ್ಷೇತ್ರವನ್ನು ಮಲಿನ ಮಾಡುತ್ತಿದ್ದಾರೆ. ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡರೆ ನಿಯಂತ್ರಣಕ್ಕೆ ಬರುತ್ತದೆ’ ಎಂದರು.

‘ಐವರು ಸಿಬ್ಬಂದಿ ನೇಮಿಸಿಕೊಂಡು ಸ್ವಚ್ಛತೆ’

‘ಸರಿಯಾಗಿ ಕೆಲಸ ಮಾಡದಕ್ಕೆ ಈ ಹಿಂದೆ ಇದ್ದವರನ್ನು ತೆಗೆದುಹಾಕಲಾಗಿದೆ. ಮೂವರು ಸ್ವಚ್ಛತಾ ಹಾಗೂ ಇಬ್ಬರು ಭದ್ರತಾ ಸಿಬ್ಬಂದಿಯನ್ನು ಹೊಸದಾಗಿ ನೇಮಕ ಮಾಡಿಕೊಂಡು ಕ್ಷೇತ್ರವನ್ನು ಸ್ವಚ್ಛಗೊಳಿಸುತ್ತೇವೆ’ ಎಂದು ಯಾದಗಿರಿ ತಹಶೀಲ್ದಾರ್ ಸುರೇಶ ರಾಣಪ್ಪ ಅಂಕಲಗಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ದೀಪಾವಳಿಗೆ ಸಣ್ಣ ಜಾತ್ರೆಯಾಗುತ್ತದೆ. ಅಷ್ಟೊತ್ತಿಗೆ ಸ್ವಚ್ಛತೆಯನ್ನು ಮಾಡಿಸುತ್ತೇವೆ. ಹಾಳು ಬಿದ್ದಿರುವ ಕಲ್ಯಾಣ ಮಂಟಪದ ದುರಸ್ತಿಗೆ ₹ 15 ಲಕ್ಷ ಬೇಕಾಗುತ್ತದೆ. ಈ ಬಗ್ಗೆ ಚರ್ಚೆಯೂ ನಡೆಯುತ್ತಿದೆ.‌ ಜಿಲ್ಲಾಧಿಕಾರಿಗಳು ಕ್ಷೇತ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಎರಡು ಹೈಟೆಕ್ ಶೌಚಾಲಯ ಹಾಗೂ ನೀರು ಶುದ್ಧೀಕರಣ ಘಟಕ ನಿರ್ಮಾಣಕ್ಕೆ ಸೂಚಿಸಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.