ADVERTISEMENT

‘ಜಿಲ್ಲಾ ಸ್ಲಂ ಜನರ ಹಬ್ಬ’ ನಾಳೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2019, 20:27 IST
Last Updated 23 ಜುಲೈ 2019, 20:27 IST

ಯಾದಗಿರಿ: ‘ಸ್ಲಂ ಜನರು ಒಂದೆಡೆ ಸೇರಿ ಹಾಡಿ ಕುಣಿಯಲು ನಗರದ ಚರ್ಚ್‌ ಸಭಾಂಗಣದಲ್ಲಿ ಜುಲೈ 25 ರಂದು ಬೆಳಿಗ್ಗೆ 10.30ಕ್ಕೆ ಸ್ಲಂ ಜನರ ಹಬ್ಬ ಆಯೋಜಿಸಲಾಗಿದೆ’ ಎಂದು ಸ್ಲಂ ಜನಾಂದೋಲನ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರೇಣುಕಾ ಸರಡಗಿ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಹಬ್ಬದಲ್ಲಿ ನಗರದ ವಂಚಿತ ಸಮುದಾಯಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಶೋಷಣೆ ಪ್ರತಿರೋಧಿಸುವಸಾಂಸ್ಕೃತಿಕ ಆಯಾಮ ಪ್ರದರ್ಶಿಸಲಾಗುತ್ತದೆ. ನಾಳೆಯ ಭವಿಷ್ಯಕ್ಕೆ ಒಂದೆಡೆ ಸೇರಿ ನಗರ ವಂಚಿತ ಸಮುದಾಯಗಳ ಸಾಂಸ್ಕೃತಿಕ ಶ್ರೀಮಂತಿಕೆ ಪ್ರದರ್ಶಿಸುವ ಉದ್ದೇಶ ಹೊಂದಲಾಗಿದೆ’ ಎಂದು ತಿಳಿಸಿದರು.

‘ನಗರಗಳ ಆರ್ಥಿಕ ಅಭಿವೃದ್ಧಿಗೆ ಮತ್ತು ಸಾಮಾಜಿಕ ಚಲನೆಗೆ ಅಗತ್ಯವಿರುವ ಮಾನವ ಸಂಪತ್ತು ನಗರದ ವಂಚಿತ ಸಮುದಾಯಗಳಲ್ಲಿ ಇರುವುದನ್ನು ಸರ್ಕಾರಕ್ಕೆ ಸೂಕ್ಷ್ಮವಾಗಿ ಅರ್ಥೈಸಿಕೊಳ್ಳಬೇಕಾಗಿದೆ’ ಎಂದರು.

ADVERTISEMENT

‘ನಗರದ ವಡ್ಡರ ಗಲ್ಲಿ, ಕನಕ ನಗರ, ಮೌನೇಶ್ವರ ನಗರ, ತಪ್ಪಡಗೇರಾ ಮತ್ತು ಶಾಸ್ತ್ರಿ ನಗರವನ್ನು ಸ್ಲಂಗಳನ್ನಾಗಿ ಘೋಷಿಸಬೇಕು. ನಗರದಲ್ಲಿರುವ ನಿವೇಶನ ರಹಿತರಿಗೆ ವಸತಿ ನಿರ್ಮಿಸಲು 500 ಎಕರೆ ಭೂಮಿ ಕಾಯ್ದಿರಿಸಬೇಕು. ಪ್ರತಿಯೊಂದು ಕೊಳಗೇರಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಹಕ್ಕೊತ್ತಾಯ ಮಂಡಿಸಲಾಗುವುದು’ ಎಂದು ತಿಳಿಸಿದರು.

‘ಅಂದು ಅಂಬೇಡ್ಕರ್‌ ವೃತ್ತದಿಂದ ಚರ್ಚ್‌ ಹಾಲ್‌ ವರೆಗೆ ಮೆರವಣಿಗೆ ಮಾಡಲಾಗುವುದು. ಅಲ್ಲದೆ ಈ ಸಮಾವೇಶದಲ್ಲಿ ಜಿಲ್ಲಾಧಿಕಾರಿಗಳಿಗೆ ನಮ್ಮ ಬೇಡಿಕೆ ಈಡೇರಿಕೆಗೆ ಮನವಿ ಸಲ್ಲಿಸಲಾಗುವುದು’ ಎಂದು ತಿಳಿಸಿದರು. ಜಿಲ್ಲಾಧ್ಯಕ್ಷ ಹಣಮಂತ ಶಹಾಪುರಕರ್, ಆನಂದ ಚಟ್ಟೇರಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.