ADVERTISEMENT

ಶಹಾಪುರ: ಶಾಸನಗಳ ಸಂಶೋಧಕ ಡಿ.ಎನ್.ಅಕ್ಕಿಗೆ ರಾಜ್ಯೋತ್ಸವ ಪ್ರಶಸ್ತಿಯ ಗರಿ

ಟಿ.ನಾಗೇಂದ್ರ
Published 28 ಅಕ್ಟೋಬರ್ 2020, 14:04 IST
Last Updated 28 ಅಕ್ಟೋಬರ್ 2020, 14:04 IST
28ಎಸ್ಎಚ್ಪಿ 1: ಶಾಸನಗಳ ಸಂಶೋಧನೆಯ ಕಾರ್ಯದಲ್ಲಿ ಮಗ್ನರಾಗಿರುವ ಡಿ.ಎನ್‌.ಅಕ್ಕಿ
28ಎಸ್ಎಚ್ಪಿ 1: ಶಾಸನಗಳ ಸಂಶೋಧನೆಯ ಕಾರ್ಯದಲ್ಲಿ ಮಗ್ನರಾಗಿರುವ ಡಿ.ಎನ್‌.ಅಕ್ಕಿ   

ಶಹಾಪುರ: ಸಾಹಿತ್ಯ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸುತ್ತಾ ಬಂದಿರುವ ಯಾದಗಿರಿ ಜಿಲ್ಲೆ ಶಹಾಪುರ ತಾಲ್ಲೂಕಿನ ಗೋಗಿ (ಕೆ) ಗ್ರಾಮದ ದೇವಿಂದ್ರಪ್ಪ ನಾಭಿರಾಜ ಅಕ್ಕಿ (ಡಿ.ಎನ್‌.ಅಕ್ಕಿ) ಅವರಿಗೆ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಕೋಲು ಮುಖ, ಬಡಕಲು ದೇಹ, ಮುಖದ ಮೇಲೆ ದೊಡ್ಡದಾದ ಕನ್ನಡಕ. ಸದಾ ಜೋಳಿಗೆಯಂತೆ ನೇತಾಡುವ ಬ್ಯಾಗ್,(ಈಗ ಕಾಲು ನೋವಿನ ಸಮಸ್ಯೆಯಿಂದ ಹೆಚ್ಚು ಓಡಾಟವಿಲ್ಲ) ಹಳ್ಳಿಗಳಿಗೆ ತೆರಳಿ ಶಾಸನಗಳ ವಿವಿಧ ಮಜಲುಗಳಲ್ಲಿ ಸಂಶೋಧನೆ ಮಾಡುತ್ತಾ ಅದಕ್ಕೆ ಒಂದು ತಾರ್ಕಿಕ ಅಂತ್ಯವನ್ನು ಹಾಡಿ ದಾಖಲೆಗಳ ಸಮೇತ ಶಾಸನಗಳ ಮೇಲೆ ಬೆಳಕು ಚೆಲ್ಲಿರುವ ಡಿ.ಎನ್‌.ಅಕ್ಕಿಗೆ ಈಗ 72 ವರ್ಷ.

ಅದರಲ್ಲಿ ಮುಖ್ಯವಾಗಿ ಅವರು ಜಗದ ಗಮನ ಸೆಳೆಯುವಂತೆ ಮಾಡಿರುವುದು ಸನ್ನತಿ ಬೌದ್ದ ಸ್ತೂಪಗಳು. ಶಿರವಾಳ, ಅಣಬಿ, ಹಾರಣಗೇರಾದ ಬೂದಿಗುಡ್ಡ, ಕನ್ಯಾಕೊಳ್ಳುರ, ಮದ್ರಿಕಿ, ಬಿರನೂರ, ವಿಭೂತಿಹಳ್ಳಿ, ಗುರಸುಣಗಿಹೀಗೆ ಹಲವಾರು ಕ್ಷೇತ್ರ ವೀಕ್ಷಣೆ ಮಾಡಿ ಸುಮಾರು ಐದು ಸಾವಿರ ವರ್ಷದ ಹಿಂದಿನ ಕಲ್ಲಿನ ಕೊಡಲಿ, ಬ್ಲೇಡ್, ಬೊಕಿ ಮುಂತಾದ ಪಳಿಯುಳಿಕೆಗಳನ್ನು ಪತ್ತೆ ಹಚ್ಚಿದ್ದಾರೆ. ಅಲ್ಲದೆ ಏವೂರ ಗ್ರಾಮದಲ್ಲಿ ಆರನೇಯ ವಿಕ್ರಮಾದಿತ್ಯ ಕಾಲದ ಶಾಸನದ ಬಗ್ಗೆ ಸಂಶೋಧನೆ ನಡೆಸಿ ಹೊರ ಜಗತ್ತಿಗೆ ಪರಿಚಯಿಸಿದ್ದು ಅವರ ಕೈಗೊಂಡ ಸಂಶೋಧನೆಗೆ ಹಿಡಿದ ಕೈಗನ್ನಡಿ ಎನ್ನುತ್ತಾರೆ ಉಪನ್ಯಾಸಕ ರಾಘವೇಂದ್ರ ಹಾರಣಗೇರಾ.

ADVERTISEMENT

1948 ಅಕ್ಟೋಬರ್‌3ರಂದು ನಾಭಿರಾಜ ಹಾಗೂ ಶ್ರೀಕಾಂತಮ್ಮ ಉದರಲ್ಲಿ ಜನಿಸಿದರು. ವೃತ್ತಿಯಿಂದ ಚಿತ್ರಕಲಾ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಾ ಇತಿಹಾಸ ಸಂಶೋಧನೆಗಳನ್ನು ಹವ್ಯಾಸವನ್ನು ಸ್ವೀಕರಿಸಿಕೊಂಡು ಉನ್ನತವಾದ ಸಾಧನೆ ಮಾಡಿದ್ದಾರೆ. ವೃತ್ತಿನ ಬಹುಭಾಗವನ್ನು 31 ವರ್ಷ ಗೋಗಿ ಪ್ರೌಢಶಾಲೆಯಲ್ಲಿ ಕಳೆದಿದ್ದಾರೆ.

ಪತ್ನಿ ಜಾನಪದ ಗಾಯಕಿ ಸುಮಂಗಲಾ (ಬೇಬಕ್ಕ), ಹಿರಿಯ ಮಗ ಬ್ರಹ್ಮರಾಜು, ಪುತ್ರಿ ಸುಷ್ಮಾ ಬಿ. ಕಿರಣಗಿ, ಕಿರಿಯಮಗ ನಾಭಿರಾಜ (ಶೀತಲ) ಇದ್ದಾರೆ.

ಡಿ.ಎನ್‌.ಅಕ್ಕಿ ಅವರು ಹಲವಾರು ಕೃತಿಗಳನ್ನು ಹೊರ ತಂದಿದ್ದು, ಅವುಗಳಲ್ಲಿ ಮುಖ್ಯವಾಗಿ ‘ಹಡೆದವ್ವ ಹಾಡ್ಯಾಳ' ವರ್ಧನಮಾನ ಮಹವೀರ (ನಾಟಕ), ಜೈನ್ ವಿಗ್ರಹಗಳು, ಸನ್ನತಿ ಚಂದ್ರಲಾಂಬಾ, ಮಾಯೆ ಮದ್ದಲೆ, ಶಾತವಾಹನರ ಕಾಲದ 2000 ಹಿಂದಿನ ವರ್ಷದ ಸೀಸದ ನಾಣ್ಯಗಳ ಶೋಧನೆ ಪ್ರಮುಖ ಕೃತಿಗಳು ಆಗಿವೆ. ಅಲ್ಲದೆ ಇಬ್ಬರು ವಿದ್ಯಾರ್ಥಿಗಳು ಡಿ.ಎನ್.ಅಕ್ಕಿಯವರ ಸಂಶೋಧನೆ ಮೇಲೆ ಎಂ.ಫಿಲ್ ಮಾಡಿದ್ದಾರೆ. ಅಲ್ಲದೆ ಡಾ.ಹಳ್ಳೆಪ್ಪ ಲಿಂಗದಳ್ಳಿ ಅವರು ಅಕ್ಕಿಯವರ ಬದುಕು ಬರಹ ಸಂಶೋಧನಾ ಪ್ರಬಂಧಕ್ಕೆ ಪಿ.ಎಚ್.ಡಿ ಪದವಿ ಪಡೆದಿದ್ದಾರೆ.

ಸಂದ ಗೌರವ:

‌‌ಆದರ್ಶ ಶಿಕ್ಷಕರೆಂದು 1997ರಲ್ಲಿ ಕೇಂದ್ರ ಸರ್ಕಾರದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಗೊಮ್ಮಟೇಶ್ವರ ವಿದ್ಯಾ ಪ್ರಶಸ್ತಿ, ಸ್ವಸ್ತಿ ಶ್ರೀ, ದೇವಿಂದ್ರಕೀರ್ತಿ ದತ್ತಿ, ಜೈನ್ ರಾಷ್ಟ್ರಗೌರವ, ಜೈನ್ ಸಂಸ್ಕೃತಿ ಸಂರಕ್ಷಕ, ಸಗರನಾಡು ಸೇವಾ ಪ್ರಶಸ್ತಿ ಈಗ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಅರಸಿ ಬಂದಿದೆ. ಆದರೆ, ಸಾಹಿತ್ಯ ಕ್ಷೇತ್ರದಲ್ಲಿ ಇಷ್ಟೊಂದು ಉನ್ನತ ಸೇವೆ ಸಲ್ಲಿಸಿದ್ದರೂ ತಾಲ್ಲೂಕು ಇಲ್ಲವೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನಾಧ್ಯಕ್ಷರ ಹುದ್ದೆ ಮಾತ್ರ ಒಲಿದು ಬಂದಿಲ್ಲ ಎಂದು ಅಕ್ಕಿಯವರ ಸಾಹಿತ್ಯ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಅವರ ಮೊಬೈಲ್ ನಂಬರ್ 94485 77898.

***

‘ಅಳವಾದ ಅಧ್ಯಯನ ಬೇಕು’

ಈಗಿನ ಕಾಲದ ಯುವಕರಿಗೆಅಳವಾದ ಅಧ್ಯಯನ ಬೇಕು ಎನ್ನುತ್ತಾರೆಡಿ.ಎನ್‌.ಅಕ್ಕಿ ಅವರು. ಬರೆಯುವುದು ಗುಣಮಟ್ಟದ್ದು ಇರಬೇಕು. ಅಲ್ಲದೆ ಯಾವುದೇ ವಿಷಯವನ್ನು ಕೂಲಂಕುಷವಾಗಿ ತಿಳಿದುಕೊಳ್ಳಬೇಕು. ಅಧ್ಯಯನಶೀಲತೆ ಬೇಕು.ಗಂಭೀರ ಅಧ್ಯಯನ ಈಗ ಕಾಣಿತ್ತಿಲ್ಲ. ಇದು ಬೇಕಾಗಿದೆ. ಇದಿಲ್ಲದಿದ್ದರೆ ಉತ್ತಮ ಗುಣಮಟ್ಟದ ಸಾಹಿತ್ಯ ಹೊರ ಬರಲು ಸಾಧ್ಯವಿಲ್ಲ ಎನ್ನುತ್ತಾರೆ ಅವರು.

ಪ್ರಶಸ್ತಿಗಾಗಿ ಅಂಗಲಾಚಬಾರದು. ಲಾಭಿ ಮಾಡಬಾರದು. ಸಾಧನೆ ಗುರುತಿಸಿ ಪ್ರಶಸ್ತಿ ಅರಸಿ ಬರುತ್ತದೆ. ಇದರಿಂದ ಪ್ರಶಸ್ತಿಯ ಗೌರವವೂ ಹೆಚ್ಚಾಗುತ್ತದೆ ಎಂದುಡಿ.ಎನ್‌.ಅಕ್ಕಿ ಅವರು ಹೇಳುತ್ತಾರೆ.

***

‘ಪ್ರಶಸ್ತಿ ಬಂದಿರುವುದು ಖುಷಿಯಾಗಿದೆ’

‌ಭವ್ಯ ಇತಿಹಾಸ ಪರಂಪರೆಯನ್ನು ಹೊಂದಿರುವ ನಮ್ಮ ಭಾಗವನ್ನು ಹಿಂದುಳಿದ ಪ್ರದೇಶವೆಂದು ಹೀಯಾಳಿಸುತ್ತಿರುವುದನ್ನು ಕೇಳಿ ರೋಸಿಹೋಗಿ ಶಾಸನಗಳ ಸಂಶೋಧನೆಗೆ ಮುಂದಾದೆ. ಐತಿಹಾಸಿಕವಾಗಿ ನಾವು ಸಂಪರ್ಧರಿತರಾಗಿದ್ದೇವೆ. ಇಳಿ ವಯಸ್ಸಿನಲ್ಲಿ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಖುಷಿಯಾಗಿದೆ. ನನ್ನ ಸಂಶೋಧನೆಗೆ ಬೆನ್ನೆಲುಬಾಗಿ ನಿಂತು ಸಹಕರಿಸಿದವರಿಗೆ ಪ್ರಶಸ್ತಿ ಅರ್ಪಿಸುವೆ.

-ಡಿ.ಎನ್.ಅಕ್ಕಿ,ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.