
ಜೈಲು (ಪ್ರಾತಿನಿಧಿಕ ಚಿತ್ರ)
ಶಹಾಪುರ: ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಸಾಬೀತಾಗಿದ್ದರಿಂದ ಇಲ್ಲಿನ ಜೆ ಎಂಎಫ್ ಸಿ ಕೋರ್ಟ್ ಬುಧವಾರ ಪತಿ ಹಾಗೂ ಅತ್ತೆಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ ತಲಾ ₹4 ಸಾವಿರ ದಂಡ ವಿಧಿಸಿದೆ.
ಜೇವರ್ಗಿ ತಾಲ್ಲೂಕಿನ ಮಲ್ಲಾ(ಕೆ) ಗ್ರಾಮದ ಸದ್ಯ ಬಾಪೂಗೌಡ ನಗರದ ನಿವಾಸಿ ಜಯಪಾಲರೆಡ್ಡಿ ಶರಣಗೌಡ ಯದ್ಲಾಪುರ ಹಾಗೂ ಲಲಿತಾ ಶರಣಗೌಡ ಯದ್ಲಾಪುರ ಶಿಕ್ಷೆಗೆ ಒಳಗಾದವರು.
ನಿರ್ಮಲಾ ಅವರು ವರದಕ್ಷಿಣೆ ಕಿರುಕುಳ, ಜೀವ ಬೆದರಿಕೆ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದಡಿಯಲ್ಲಿ 2023 ಮಾರ್ಚ್ 2ರಂದು ಶಹಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆಗಿನ ಎಎಸ್‌ಐ ಸಿದ್ದರೂಢ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶೆ ಶೋಭಾ ಆದೇಶ ಪ್ರಕಟಿಸಿದರು. ದೂರುದಾರರ ಪರ ಎಪಿಪಿ ದಿವ್ಯಾರಾಣಿ ನಾಯಕ ವಾದ ಮಂಡಿಸಿದ್ದರು.
ತಾಯಿ ಮೇಲೆ ಹಲ್ಲೆ, ಮಗ ಸೊಸೆಗೆ ದಂಡ
ಶಹಾಪುರ: ತಾಯಿ ಹೆಸರಿನಲ್ಲಿರುವ ಮನೆಯನ್ನು ತನ್ನ ಹೆಸರಿಗೆ ವರ್ಗಾವಣೆ ಮಾಡುವಂತೆ ಒತ್ತಾಯಿಸಿ ತಾಯಿ ಹಾಗೂ ತಂಗಿಯಂದಿರ ಮೇಲೆ ಮಾಡಿದ ಹಲ್ಲೆ ಸಾಬೀತಾಗಿದ್ದರಿಂದ ಇಲ್ಲಿನ ಜೆಎಂಎಫ್‌ಸಿ ಕೋರ್ಟ್ ಬುಧವಾರ ಮಗ ಹಾಗೂ ಸೋಸೆಗೆ ತಲಾ ₹3ಸಾವಿರ ದಂಡ ವಿಧಿಸಿದೆ.
ನಗರದ ಆದಿಲಪುರ ಏರಿಯಾದ ಮಲ್ಲಿಕಾರ್ಜುನ ಚಂದ್ರಶೇಖರ ಹೂಗಾರ ಹಾಗೂ ಸವಿತಾ ಮಲ್ಲಿಕಾರ್ಜುನ ಹೂಗಾರ ಶಿಕ್ಷೆಗೆ ಒಳಗಾದವರು.
ಬಸವರಾಜೇಶ್ವರಿ ಅವರು ನನ್ನ ಅಣ್ಣ ಮಲ್ಲಿಕಾರ್ಜುನ ಹಾಗೂ ಆತನ ಹೆಂಡತಿ ಸವಿತಾ ಅವರು ನನ್ನ ಹಾಗೂ ನನ್ನ ತಾಯಿ ಮೇಲೆ ಹಲ್ಲೆ, ಜೀವ ಬೆದರಿಕೆ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಅಡಿಯಲ್ಲಿ ಶಹಾಪುರ ಠಾಣೆಯಲ್ಲಿ 2022 ನವಂಬರ 12ರಂದು ದೂರು ಸಲ್ಲಿಸಿದ್ದರು. ಆಗಿನ ಎಎಸ್‌ಐ ವಿಠೋಬಾ ಅವರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶರಾದ ಶೋಭಾ ಅವರು ಆದೇಶ ಪ್ರಕಟಿಸಿದರು. ದೂರುದಾರರ ಪರ ಎಪಿಪಿ ದಿವ್ಯಾರಾಣಿ ನಾಯಕ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.