ಯಾದಗಿರಿ: ಯಾದಗಿರಿ ಮತಕ್ಷೇತ್ರದಲ್ಲಿ ಪಕ್ಷೇತರ ಶಾಸಕರಾಗಿ ಗೆದ್ದಿದ್ದ ಡಾ.ವೀರಬಸವಂತರೆಡ್ಡಿ ಮುದ್ನಾಳ ಅವರು ಅನಾರೋಗ್ಯದಿಂದ ನಿಧನರಾಗಿದ್ದು, ಜಿಲ್ಲೆಯು ಅಜಾತುಶತ್ರವನ್ನು ಕಳೆದುಕೊಂಡಂತೆ ಆಗಿದೆ.
ಮಾಜಿ ಸಚಿವ ದಿ.ವಿಶ್ವನಾಥರಡ್ಡಿ ಮುದ್ನಾಳ ಅವರ ಸಹೋದರ ಭೀಮಣ್ಣಗೌಡ ಮುದ್ನಾಳ ಅವರ ಪುತ್ರರಾಗಿದ್ದ ಡಾ. ವೀರಬಸವಂತರಡ್ಡಿ ಮುದ್ನಾಳ ವೃತ್ತಿಯಲ್ಲಿ ವೈದ್ಯರಾಗಿದ್ದು, ನಂತರ ರಾಜಕೀಯ ಪ್ರವೇಶ ಮಾಡಿದ್ದರು.
1952 ಡಿಸೆಂಬರ್ 31 ರಂದು ಯಾದಗಿರಿ ತಾಲ್ಲೂಕಿನ ಮುದ್ನಾಳ ಗ್ರಾಮದಲ್ಲಿ ಜನಿಸಿದ ಡಾ.ವೀರಬಸವಂತರೆಡ್ಡಿ, ಕಲಬುರಗಿಯ ಎಂ.ಆರ್. ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಹಾಗೂ ಎಂಎಸ್ ಪೂರ್ಣಗೊಳಿಸಿ, ಮುಂಬೈನ ಪ್ರತಿಷ್ಠಿತ ಟಾಟಾ ಕ್ಯಾನ್ಸರ್ ಆಸ್ಪತ್ರೆಯಲ್ಲಿ ವೈದ್ಯವೃತ್ತಿ ಆರಂಭಿಸಿದರು.
ಸುದೀರ್ಘ ಸೇವೆ: ಮುಂಬೈನ ಟಾಟಾ ಕ್ಯಾನ್ಸರ್ ಆಸ್ಪತ್ರೆಯಲ್ಲಿ 10 ವರ್ಷ ಸೇವೆ ಸಲ್ಲಿಸಿದ್ದಾರೆ. ನಂತರ ವಿಜಯಪುರ ಬಿಎಲ್‌ಡಿ ಮೆಡಿಕಲ್ ಆಸ್ಪತ್ರೆ, ವೈದ್ಯಕೀಯ ಕಾಲೇಜಿನಲ್ಲಿ ಶಸ್ತ್ರಚಿಕಿತ್ಸಕ ಮತ್ತು ಪ್ರಾಧ್ಯಾಪಕರಾಗಿದ್ದರು.
2004ರಲ್ಲಿ ಜೆಡಿಎಸ್ ಆಕಾಂಕ್ಷಿಯಾಗಿದ್ದ ಡಾ. ಮುದ್ನಾಳ ಅವರಿಗೆ ಟಿಕೆಟ್ ಸಿಗಲಿಲ್ಲ. ಅವರ ಬೆಂಬಲಿಗರ ಒತ್ತಾಯಕ್ಕೆ ಮಣಿದು ಯಾದಗಿರಿ ಮತಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಕಾಂಗ್ರೆಸ್‌ನ ಮಾಜಿ ಸಚಿವ ಡಾ.ಎ.ಬಿ. ಮಾಲಕರಡ್ಡಿ ಅವರನ್ನು 11,434 ಮತಗಳ ಅಂತರದಿಂದ ಸೋಲಿಸುವ ಮೂಲಕ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು.
ಯಾದಗಿರಿ ವಿಧಾನಸಭಾ ಕ್ಷೇತ್ರದಲ್ಲಿ 2008 ಮತ್ತು 2013ರಲ್ಲಿ ಬಿಜೆಪಿ ಮತ್ತು ಕೆಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿ ಸೋತಿದ್ದರು.
ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ: ಡಾ.ಮುದ್ನಾಳ ಸ್ವಂತ ಆಸ್ಪತ್ರೆ ವಿಬಿಆರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ಯಾದಗಿರಿಯಲ್ಲಿ ಸ್ಥಾಪಿಸಿದರು. ಅಲ್ಲಿ ಅವರ ಪತ್ನಿ ಸ್ತ್ರೀರೋಗ ತಜ್ಞೆ ಡಾ.ಸಂಗಮ್ಮ ಕಾರ್ಯನಿರ್ವಹಿಸುತ್ತಿದ್ದಾರೆ.
ವಿಶೇಷ ಶಸ್ತ್ರಚಿಕಿತ್ಸೆ: ವಿಜಯಪುರದಿಂದ ಯಾದಗಿರಿಗೆ ಆಗಮಿಸಿದ ವೇಳೆ ಹೊಲ್‌ಸ್ಟನ್ ಆಸ್ಪತ್ರೆಯಲ್ಲಿ ವಿಶೇಷ ಶಸ್ತ್ರಚಿಕಿತ್ಸೆ ಮಾಡಿ ಗಮನ ಸೆಳೆದಿದ್ದರು. ಕೃಷಿ ಕೆಲಸ ಮಾಡುವ ವ್ಯಕ್ತಿಯೊಬ್ಬರು ಕರಳು ಕಿತ್ತಿ ಬಂದಾಗ ಅದನ್ನು ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಗುಣಪಡಿಸಿದ್ದರು.
ಡಾ. ಮುದ್ನಾಳ್ ಅವರು ಹಿಂದಿನ ಕಲಬುರಗಿಯಿಂದ ಯಾದಗಿರಿ ಹೊಸ ಜಿಲ್ಲೆ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.ಬಿಜೆಪಿಯ ಮೊದಲ ಯಾದಗಿರಿ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡಿದ್ದರು.
ಕೆಲ ತಿಂಗಳ ಅವರ ಆರೋಗ್ಯ ತೀವ್ರ ಹದಗೆಟ್ಟ ಪರಿಣಾಮ ಅವರ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ನಿಧನರಾಗಿದ್ದಾರೆ.
ನುಡಿದಂತೆ ನಡೆದ ಡಾ.ಮುದ್ನಾಳ
ಮಾಜಿ ಶಾಸಕ ಡಾ.ವೀರಬಸವಂತರೆಡ್ಡಿ ಮುದ್ನಾಳ ಅವರು ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪನವರ ಪರಮಾಪ್ತರಾಗಿದ್ದರು. ಯಾದಗಿರಿ ಜಿಲ್ಲಾ ಕೇಂದ್ರವಾಗುವ ಮುಂಚೆ ಚುನಾವಣೆಯಲ್ಲಿ ಸರ್ಕಾರ ಬಂದ ತಿಂಗಳಲ್ಲಿ ಯಾದಗಿರಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಣೆ ಮಾಡಬೇಕು ಎಂದು ಬಿಎಸ್‌ವೈ ಎದುರು ನೇರವಾಗಿ ಬೇಡಿಕೆಯನ್ನು ಡಾ. ಮುದ್ನಾಳ ಇಟ್ಟಿದ್ದರು. ಅದರಂತೆ ಸರ್ಕಾರ ಬಂದ ತಿಂಗಳಲ್ಲೇ ಯಾದಗಿರಿ ನೂತನ ಜಿಲ್ಲಾ ಕೇಂದ್ರವನ್ನಾಗಿ ಮುಖ್ಯಮಂತ್ರಿ ಘೋಷಣೆ ಮಾಡುವ ಮೂಲಕ ಜನತೆಗೆ ಮಾತು ಕೊಟ್ಟಂತೆ ನುಡಿದಂತೆ ನಡೆದರು.
ಕೈ ತಪ್ಪಿದ ಬಿಜೆಪಿ ಟಿಕೆಟ್
2023ರ ವಿಧಾನಸಭಾ ಚುನಾವಣೆಗೆ ಡಾ.ವೀರಬಸವಂತರೆಡ್ಡಿ ಯಾದಗಿರಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಮೊದಲು ರಾಜಕೀಯ ಬೇಡ. ವೈದ್ಯಕೀಯ ಕ್ಷೇತ್ರವೇ ಇರಲಿ ಎಂದು ಹೇಳುತ್ತಿದ್ದರು. ಆದರೆ ಕೊನೆ ಕೊನೆಗೆ ನಾನು ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದರು. ಕೊನೆ ಘಳಿಗೆಯಲ್ಲಿ ಹಾಲಿ ಶಾಸಕರಾಗಿದ್ದ ಹಾಗೂ ಸಹೋದರ ವೆಂಕಟರೆಡ್ಡಿ ಮುದ್ನಾಳ ಪುನಃ ಕಣಕ್ಕಿಳಿದರು. ಬದಲಾದ ರಾಜಕೀಯದ ಸನ್ನಿವೇಶ ಹಾಲಿ ಶಾಸಕ ಸಹೋದರ ವೆಂಕಟರಡ್ಡಿ ಮುದ್ನಾಳ ಸೋಲು ಕಂಡರು. ಒಂದು ವೇಳೆ ಬಿಜೆಪಿ ಪಕ್ಷ ಡಾ. ವೀರಬಸವಂತರೆಡ್ಡಿ ಮುದ್ನಾಳ ಟಿಕೆಟ್ ಕೋಟ್ಟಿದ್ದರೆ ಗೆಲುವು ಕಾಣುತ್ತಿದ್ದರು ಎಂದು ಅವರ ಅಭಿಮಾನಿಗಳು ಹೇಳುತ್ತಾರೆ.
ಇಬ್ಬರು ಮಾಜಿ ಒಬ್ಬರು ಹಾಲಿ ಶಾಸಕರ ನಿಧನ
ಜಿಲ್ಲೆಯಲ್ಲಿ ಕಳೆದ 7 ತಿಂಗಳ ಅವಧಿಯಲ್ಲಿ ಇಬ್ಬರು ಮಾಜಿ ಶಾಸಕರು ಒಬ್ಬರು ಹಾಲಿ ಶಾಸಕರು ಸಾವನ್ನಪ್ಪಿದ್ದಾರೆ. ವರ್ಷದ ಆರಂಭದಲ್ಲಿ ಗುರುಮಠಕಲ್‌ನ ಮಾಜಿ ಶಾಸಕ ನಾಗನಗೌಡ ಕಂದಕೂರ ಹಾಲಿ ಶಾಸಕರಾಗಿದ್ದ ರಾಜಾ ವೆಂಕಟಪ್ಪ ನಾಯಕ ಮತ್ತೆ ಈಗ ಮಾಜಿ ಶಾಸಕ ಡಾ.ವೀರಬಸವಂತರೆಡ್ಡಿ ಮುದ್ನಾಳ ನಿಧನರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.