ಕೆಂಭಾವಿ: ನಗರೋತ್ಥಾನ ಹಾಗೂ ಕೆಕೆಆರ್‌ಡಿಬಿ ಯೋಜನೆಯಡಿಯಲ್ಲಿ ಪಟ್ಟಣದ ಹಿಲ್‍ಟಾಪ್ ಕಾಲೊನಿಯಲ್ಲಿ ₹ 10 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ನಿರಂತರ ಕುಡಿಯುವ ನೀರಿನ ಕಾಮಗಾರಿಯನ್ನು ಶುಕ್ರವಾರ ಶಾಸಕ ಶರಣಬಸಪ್ಪ ದರ್ಶನಾಪುರ ಪರಿಶೀಲಿಸಿ, ಡಿಸೆಂಬರ್ ಒಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಶಾಸಕರ ಕಚೇರಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಸೂಮಾರು ₹ 10 ಕೋಟಿ ವೆಚ್ಚದಲ್ಲಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು ಪ್ರತಿದಿನ 40 ಲಕ್ಷ ಲೀಟರ್ ನೀರು ಶುದ್ಧೀಕರಿಸುವ ಸಾಮರ್ಥ್ಯ ಹೊಂದಿದೆ. ಮುಂದಿನ ದಿನಗಳಲ್ಲಿ ಒಂದು ಕೋಟಿ ಲೀಟರ್ ಶುದ್ಧೀಕರಿಸುವ ಯೋಜನೆ ಇದಾಗಿದೆ. ಪ್ರಸ್ತುತ ಕಾಲುವೆ ಮೂಲಕ ನೀರು ತರಲಾಗುತ್ತದೆ ಎಂದರು.
‘ಜಲಧಾರೆ‘ ಯೋಜನೆ ಅಡಿಯಲ್ಲಿ ಕೆಂಭಾವಿ ಪುರಸಭೆ ವ್ಯಾಪ್ತಿಯ ಏಳು ಸಾವಿರ ಮನೆಗಳಿಗೆ ದಿನದ 24 ಗಂಟೆ ನೀರೊದಗಿಸಲು ₹ 130 ಕೋಟಿ ವೆಚ್ಚದ ಯೋಜನೆಗೆ ಪ್ರಸ್ತಾವ ಸಲ್ಲಿಸಲಾಗಿದೆ‘ ಎಂದರು.
ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆಗೆ ₹ 650 ಕೋಟಿ ವೆಚ್ಚದಲ್ಲಿ ಟೆಂಡರ್ ತೆರೆಯಲಾಗಿದ್ದು, ಶಿಘ್ರದಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ. ಈ ಯೋಜನೆಯಿಂದ ಮತಕ್ಷೇತ್ರದ 20 ಸಾವಿರ ಹೆಕ್ಟರ್ ಪ್ರದೇಶವು ನೀರಾವರಿಯಾಗಿ ಈ ಭಾಗದ ರೈತರಿಗೆ ವರದಾನವಾಗಲಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿದ್ಧನಗೌಡ ಪೊಲೀಸ ಪಾಟೀಲ, ಶಿವಮಹಾಂತ ಚಂದಾಪುರ, ವಾಮನರಾವ ದೇಶಪಾಂಡೆ, ಬಸವರಾಜಪ್ಪಗೌಡ ತಂಗಡಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಪಾಟೀಲ ಚಿಂಚೋಳಿ, ಶರಣಬಸ್ಸು ಡಿಗ್ಗಾವಿ, ಎಸ್ ಎಮ್ ಬಿರಾದಾರ, ಸುಧಾಕರ ಡಿಗ್ಗಾವಿ, ದೇವಪ್ಪ ಮ್ಯಾಗೇರಿ, ರಾಘವೇಂದ್ರ ದೇಶಪಾಂಡೆ, ರಹಿಮಾನಪಟೇಲ ಯಲಗೋಡ, ರಂಗಪ್ಪ ವಡ್ಡರ್ ಇದ್ದರು.
‘ಪಕ್ಷದ ನಿಷ್ಠಾವಂತ ಕಾರ್ಯಕರ್ತ’
ಕಾಂಗ್ರೆಸ್ ಪಕ್ಷದಲ್ಲಿ ಎರಡು ಗುಂಪುಗಳಾಗಿದ್ದು ನೀವು ಯಾವ ಗುಂಪಿಗೆ ಬೆಂಬಲಿಸುತ್ತಿದ್ದಿರಿ? ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಎಲ್ಲ ರಾಜಕೀಯ ಪಕ್ಷದಲ್ಲಿಯೂ ಗುಂಪುಗಾರಿಕೆ ಇದೆ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ ಅಷ್ಟೆ. ಪಕ್ಷದಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ನಡೆದಾಗ ಸಾಮಾನ್ಯವಾಗಿ ಎಲ್ಲ ಪದಾಧಿಕಾರಿಗಳನ್ನು ಬದಲಾವಣೆ ಮಾಡಲಾಗುತ್ತದೆ. ಆ ನಿಟ್ಟಿನಲ್ಲಿ ಈಗ ಬದಲಾವಣೆಯಾಗುತ್ತದೆ‘ ಎಂದರು.
‘ಕಳೆದ ಎರಡು ವರ್ಷದಿಂದ ಲೋಕೋಪಯೋಗಿ ಇಲಾಖೆ ಹೊರತು ಪಡೆಸಿ ಯಾವುದೇ ಇಲಾಖೆಯಿಂದ ನನ್ನ ಮತಕ್ಷೇತ್ರಕ್ಕೆ ಅನುದಾನ ಬಿಡುಗಡೆಯಾಗಿಲ್ಲ‘ ಎಂದು ಆರೋಪಿಸಿದರು.
‘ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಈ ಬಗ್ಗೆ ಅವರ ಸಂಪುಟದ ಸಚಿವರೇ ಹೇಳಿಕೆಗಳನ್ನು ನೀಡಿದ್ದಾರೆ. ಗುತ್ತಿಗೆದಾರರಿಗೆ ಮಣೆಹಾಕುವ ಸರ್ಕಾರ ಇದಾಗಿದೆ‘ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.