ADVERTISEMENT

ಕೆಂಭಾವಿ: ಅಂತರ್ಜಲ ಕುಸಿತ, ಬತ್ತಿದ ಜಲಮೂಲ

ಪವನ ಕುಲಕರ್ಣಿ
Published 11 ಫೆಬ್ರುವರಿ 2024, 6:27 IST
Last Updated 11 ಫೆಬ್ರುವರಿ 2024, 6:27 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕೆಂಭಾವಿ: ಮಳೆಯ ಕೊರತೆಯಿಂದಾಗಿ ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಹೀಗಾಗಿ ತಾಲ್ಲೂಕಿನಲ್ಲಿ ಬೇಸಿಗೆಯಲ್ಲಿ ಜಲಕ್ಷಾಮ ಉಂಟಾಗುವ ಭೀತಿ ಎದುರಾಗಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ.

ತಾಲ್ಲೂಕಿನ ಯಕ್ತಾಪುರ, ತಳ್ಳಳ್ಳಿ, ಹುವಿನಹಳ್ಳಿ, ಬೊಮ್ಮನಹಳ್ಳಿ, ಚಿಂಚೊಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿನ ಕೊಳವೆಬಾವಿ ಹಾಗೂ ತೆರೆದ ಬಾವಿಗಳ ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ.

ADVERTISEMENT

ರೈತರು, ತಮ್ಮ ಜಮೀನಿನಲ್ಲಿ 100, 200, 350, 500 ಅಡಿ ಆಳದವರೆಗೆ ಕೊರೆಯಿಸಿದ್ದ ಕೊಳವೆ ಬಾವಿಗಳಲ್ಲಿ ನೀರು ಬತ್ತಿರುವುದು ರೈತರ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ. ಕಳೆದ 10 ವರ್ಷಗಳಿಂದ ಇಂತಹ ಪರಿಸ್ಥಿತಿ ಬಂದಿರಲಿಲ್ಲ. ಆದರೆ ಪ್ರಸಕ್ತ ವರ್ಷದಲ್ಲಿ ಮಳೆಯ ಕೊರತೆಯಿಂದಾಗಿ ಅಂತರ್ಜಲಮಟ್ಟ ಕುಸಿದಿದೆ. ಜಮೀನುಗಳಲ್ಲಿರುವ ಅಲ್ಪಸ್ವಲ್ಪ ಬೆಳೆ ಹಾಗೂ ತೆಂಗು, ಮಾವು, ನಿಂಬೆ, ಚಿಕ್ಕು ಸೇರಿದಂತೆ ಇನ್ನಿತರ ಗಿಡಗಳಿಗೆ ನೀರುಣಿಸುವುದು ಕಷ್ಟಕರವಾಗುತ್ತಿದೆ ಎಂದು ರೈತ ಕಾಂತಪ್ಪ ಕುಂಬಾರ ಬೇಸರ ತೋಡಿಕೊಂಡರು.

ಕಬ್ಬು ತೆಗೆದ ರೈತ: ಯಕ್ತಾಪುರ ಗ್ರಾಮದ ಸೀಮಾಂತರದಲ್ಲಿ ತಮ್ಮ 4 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ರೈತ ಮಲ್ಲಪ್ಪ ಅವರು,  ಕಬ್ಬು ತೆಗೆದು ನೆಲ ಹರಗಿದ್ದಾರೆ. 4 ಇಂಚು ನೀರಿದ್ದ ಕೊಳವೆ ಬಾವಿ ಏಕಾಏಕಿ ನಿಂತುಹೊಗಿದ್ದು, ನೀರು ಬತ್ತಿದ ಕಾರಣ ಬೆಳೆ ತೆಗೆದಿದ್ದೇನೆ ಎಂದು ಹೇಳುತ್ತಾರೆ.

ಪರಿಸ್ಥಿತಿ ಹೀಗೆ ಮುಂದುವರಿದರೆ ಬೇಸಿಗೆಯಲ್ಲಿ ಜನಜಾನುವಾರುಗಳಿಗೆ ಕುಡಿಯಲು ನೀರು ಸಿಗುವುದಿಲ್ಲ ಎಂದು ಜನರು ಆತಂಕ ವ್ಯಕ್ತಪಡಿಸಿದ್ದಾರೆ.

ಒಣಗಿದ ಮೆಣಸಿನಕಾಯಿ ಬೆಳೆ: ಕೊಳವೆ ಬಾವಿ ನೀರನ್ನು ಅವಲಂಬಿಸಿ ಬೆಳೆದಿದ್ದ ಮೆಣಸಿನಕಾಯಿ ಬೆಳೆಗಳು ನೀರಿನ ಕೊರತೆಯಿಂದ ಒಣಗುತ್ತಿದೆ. ಒಂದೆಡೆ ದರ ಕುಸಿತದಿಂದ ಕಂಗಾಲಿಗಿರುವ ರೈತರಿಗೆ ಇಳುವರಿ ಬಾರದಿರುವುದು ಗಾಯದ ಮೇಲೆ ಬರೆಯಳೆದಂತಾಗಿದೆ. ಎಕರೆ ಒಂದಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿರುವ ರೈತರು ದಿಕ್ಕುದೋಚದಂತಾಗಿದ್ದು, ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾರೆ.

ಕೂಲಿ ಕಾರ್ಮಿಕರ ಕೊರತೆ: ಈ ಮಧ್ಯೆ ಬರಗಾಲದ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದ ಹಲವೆಡೆ ಜನ ಕೂಲಿಗಾಗಿ ಮಹಾರಾಷ್ಟ್ರ ಹಾಗೂ ಬೆಂಗಳೂರಿಗೆ ವಲಸೆ ಹೋಗುತ್ತಿದ್ದಾರೆ. ಹೀಗಾಗಿ ಕೂಲಿಕಾರ್ಮಿಕರ ಕೊರತೆಯೂ ಎದುರಾಗಿದೆ. ಬೇರೆಡೆಯಿಂದ ಹೆಚ್ಚಿನ ದರನೀಡಿ ಗಾಡಿ ಬಾಡಿಗೆ ಕೊಟ್ಟು ಕಾರ್ಮಿಕರನ್ನು ಕರೆ ತರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ರೈತರ ಮೇಲಿನ ಆರ್ಥಿಕ ಹೊರೆಯನ್ನು ಇಷ್ಟು ಹೆಚ್ಚಿಸುತ್ತಿದೆ.

ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ಹಾಗೂ ಮೆಣಸಿನಕಾಯಿ ಬೆಳೆ ಹಾಳಾಗಿರುವ ರೈತರಿಗೆ ಸರ್ಕಾರದಿಂದ ಅಧಿಕಾರಿಗಳು ಪರಿಹಾರ ಕಲ್ಪಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ.

ಕಳೆದ ಹಲವು ವರ್ಷಗಳಿಂದ ನೀರಿನ ಕೊರತೆ ಇರಲಿಲ್ಲ. ಈ ಬಾರಿ ಉತ್ತಮ ಮಳೆಯಾಗಿಲ್ಲ. ಹೀಗಾಗಿ ಕೊಳವೆಬಾವಿ ಬತ್ತಿದ್ದು, ನೀರುಣಿಸಲು ಸಾಧ್ಯವಿಲ್ಲ. ಹೀಗಾಗಿ ಕಬ್ಬು ಬೆಳೆ ತೆಗೆದಿದ್ದೇನೆಮಲ್ಲಪ್ಪ
ಯಕ್ತಾಪುರ, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.