ಯಾದಗಿರಿ: ಕೋವಿಡ್ ಕಾರಣ ಕಳೆದ ಎರಡು ವರ್ಷಗಳಿಂದ ಕಳೆಗುಂದಿದ್ದ ಈದ್ ಉಲ್ ಫಿತ್ರ್ ಹಬ್ಬವನ್ನು ಈ ಬಾರಿ ಸಡಗರದಿಂದ ಆಚರಿಸಲಾಯಿತು.
ಕೋವಿಡ್‌ನಿಂದ ಕಳೆದ ವರ್ಷ ಮನೆಯಲ್ಲಿ ವಿಶೇಷ ನಮಾಜ್ ಮಾಡಲಾಗಿತ್ತು. ಈ ಬಾರಿ ಮಸೀದಿ ಮತ್ತು ಈದ್ಗಾ ಮೈದಾನಗಳಲ್ಲಿ ಸೇರಿದ್ದರು.
ಕಳೆದ 30 ದಿನಗಳಿಂದ ರಂಜಾನ್ ಹಬ್ಬದ ಅಂಗವಾಗಿ ಉಪವಾಸ ವ್ರತ ಕೈಗೊಂಡಿದ್ದ ಮುಸ್ಲಿಮರು ಸೋಮವಾರ ಸಂಜೆ ಚಂದ್ರ ದರ್ಶನ ಆದ ನಂತರ ಹಬ್ಬದ ಆಚರಣೆ ಪ್ರಕಟಿಸಿದ್ದರು.
ರಂಜಾನ್ ಮಾಸದಲ್ಲಿ ಬಡವ–ಶ್ರೀಮಂತ ಎನ್ನದೆ ಎಲ್ಲರೂ ಕೂಡ ಉಪವಾಸ ಆಚರಿಸುವ ಮೂಲಕ ಮನಶುದ್ಧಿ ಮಾಡಿಕೊಳ್ಳುವ ಸಂದರ್ಭ ಇದಾಗಿದೆ ಎಂದು ಮುಸ್ಲಿಮರು ಅಭಿಪ್ರಾಯಪಡುತ್ತಾರೆ.
ಮಂಗಳವಾರ ಬೆಳಿಗ್ಗೆ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿ, ಜಿಲ್ಲಾಧಿಕಾರಿ ಕಚೇರಿ ಹಿಂಭಾಗದ ಈದ್ಗಾ ಮೈದಾನದಲ್ಲಿ ಎಲ್ಲ ಭಾಗಗಳಿಂದ ಸೇರಿದ್ದ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮುಸ್ಲಿಂ ಧರ್ಮಗುರುಗಳು ಹಬ್ಬದ ಸಂದೇಶ ನೀಡಿದರು.
ಸಂಭ್ರಮಿಸಿದ ಚಿಣ್ಣರು: ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗೆ ಪೋಷಕರ ಬಂದಿದ್ದ ಚಿಣ್ಣರ ಸಂಭ್ರಮ ಹೆಚ್ಚಿತ್ತು. ಹೊಸ ಬಟ್ಟೆ ತೊಟ್ಟ ಮಕ್ಕಳು ಸಂಭ್ರಮದಿಂದ ಓಡಾಡುತ್ತಿದ್ದರು. ಬಣ್ಣ ಬಣ್ಣದ ಪೋಷಾಕಿನಲ್ಲಿ ಮಕ್ಕಳು ಕಾಣಿಸಿಕೊಂಡಿದ್ದರು. ಟೋಪಿ, ಸಮವಸ್ತ್ರ, ಶಲ್ಯದಿಂದ ಅಲಂಕರಿಸಿಕೊಂಡಿದ್ದರು. ಚಿಕ್ಕಮಕ್ಕಳು ಪರಸ್ಪರ ಆಲಂಗಿಸಿಕೊಳ್ಳುವ ಮೂಲಕ ಈದ್ ಉಲ್ ಫಿತ್ರ್ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಬಿಸಿಲು ಹೆಚ್ಚಿದ್ದ ಕಾರಣ ಕೆಲವರು ಕೊಡೆ ಆಶ್ರಯ ಪಡೆದರು. ಈದ್ಗಾ ಮೈದಾನದ ಬಳಿ ನಗರಸಭೆಯಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಸಾಮೂಹಿಕ ಪ್ರಾರ್ಥನೆ ಮುಗಿದ ನಂತರ ಮನೆಗಳಿಗೆ ತೆರಳಿ ಬಂಧು ಬಳಗವನ್ನು ಆಹ್ವಾನಿಸಿ ರಂಜಾನ್ ವಿಶೇಷ ಸಿಹಿಯಾದ ಶೀರ್ ಖುರ್ಮಾವನ್ನು ಉಣಬಡಿಸಿದರು. ನಂತರ ವಿಶೇಷ ಭಕ್ಷ್ಯ ಭೋಜನೆಗಳನ್ನು ಸವಿದರು.
ಮುಸ್ಲಿಂ ಮುಖಂಡರಾದ ಖಾಜಿ ಹಸನ್ ಸಿದ್ದಿಕಿ, ಮನ್ಸೋರ್ ಅಹ್ಮದ್ ಆಫ್ಘನ್, ಜಿಲಾನಿ ಆಫ್ಘನ್, ಮೊಹಮ್ಮದ್ ಅಬಿದ್, ಸಮ್ದಾನಿ ಮೂಸಾ, ಖಾಜಿ ಇಮ್ತಿಯಾಜ್ ಉದ್ದೀನ್ ಸಿದ್ದಿಕಿ, ವಾಹಿದ್ ಮಿಯಾನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.