ಯಾದಗಿರಿ: ‘ಚುನಾವಣಾ ಆಯೋಗ ಒಂದು ಸ್ವತಂತ್ರ ಸಂಸ್ಥೆಯಾಗಿದ್ದರೂ ಮತಗಳ್ಳನ ತಡೆಯುವಲ್ಲಿ ವಿಫಲವಾಗಿದೆ. ಪ್ರಜಾಪ್ರಭುತ್ವಕ್ಕೆ ಧಕ್ಕೆ ಉಂಟಾಗುತ್ತಿರವುದು ದುರಂತ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಕಳವಳ ವ್ಯಕ್ತಪಡಿಸಿದರು.
ಯಾದಗಿರಿ ನಗರದ ಗಾಂಧಿ ವೃತ್ತದದಲ್ಲಿ ಜಿಲ್ಲಾ ಕಾಂಗ್ರೆಸ್ ಕಮಿಟಿಯಿಂದ ಭಾನುವಾರ ನಡೆದ ವೋಟ್ ಚೋರಿ ವಿರುದ್ಧ ಸಹಿ ಸಂಗ್ರಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಭಾರತ ವಿಶ್ವದಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಜನರ ಮತಗಳಿಂದ ಜನಪ್ರತಿನಿಧಿಗಳು ಆಯ್ಕೆಯಾಗುತ್ತದೆ. ಇದನ್ನು ಚುನಾವಣಾ ಆಯೋಗ ಚಾಚು ತಪ್ಪದೆ ಪ್ರಾಮಾಣಿಕವಾಗಿ ಮಾಡಬೇಕು. ಆದರೆ ದೇಶದಲ್ಲಿ ಮತಗಳ್ಳತನ ನಡೆಯುತ್ತಿದೆ’ ಎಂದರು.
‘ಚುನಾವಣೆಯಲ್ಲಿ ಮತ ಕಳ್ಳತನದಿಂದಾಗಿ ಜನವಿರೋಧಿ ಅಭ್ಯರ್ಥಿಗಳು ಆಯ್ಕೆಯಾಗುವ ಮೂಲಕ ಪ್ರಜಾತಂತ್ರದ ವ್ಯವಸ್ಥೆಯನ್ನು ಬುಡಮೇಲು ಮಾಡಲು ಬಿಜೆಪಿ ಮುಂದಾಗಿದೆ’ ಎಂದು ಆರೋಪಿಸಿದರು.
‘ಕರ್ನಾಟಕದ ಮಹದೇವಪುರ ಕ್ಷೇತ್ರದಲ್ಲಿ ಅಪಾರ ಪ್ರಮಾಣದಲ್ಲಿ ಮತಗಳನ್ನು ಕಾನೂನು ಬಾಹಿರ ಸೇರಿಸಲಾಗಿದೆ. ಇದನ್ನೇ ರಾಹುಲ್ ಗಾಂಧಿ ಅವರು ವಿರೋಧಿಸಿ, ದೇಶದೆಲ್ಲೆಡೆ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ’ ಎಂದರು.
‘ಈಗಲೂ ಸಹ ನಾವು ನಮ್ಮ ಪಕ್ಷ ಸಹಿ ಸಂಗ್ರಹ ಮೂಲಕ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಮತ್ತು ಚುನಾವಣಾ ಆಯೋಗಕ್ಕೆ ಮನವರಿಕೆ ಮಾಡಲು ಅಭಿಯಾನ ಹಮ್ಮಿಕೊಂಡಿದೆ’ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ವಸಂತಕುಮಾರ ಮಾತನಾಡಿ, ‘ಮತಗಳ್ಳತನ ಪ್ರಜಾಪ್ರಭುತ್ವದ ವಿರೋಧಿ ಕೆಲಸ. ಸಂವಿಧಾನಕ್ಕೆ ಮಾಡಿದ ಅಪಚಾರ’ ಎಂದು ಕುಟುಕಿದರು.
ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಮಾತನಾಡಿ, ಮತದಾನಕ್ಕೆ ಒಂದೇ ಕಡೆ ಹೆಸರು ಇರಬೇಕೆಂಬ ನಿಯಮ ಕಟ್ಟುನಿಟ್ಟಾಗಿ ಇದ್ದರೂ, ಆಯೋಗ ತಡೆಯುವಲ್ಲಿ ವಿಫಲವಾಗಿದೆ ಎಂದು ದೂರಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸರೆಡ್ಡಿ ಮಾಲಿಪಾಟೀಲ್, ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸದಲಾಪೂರ್, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ್, ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷ ಭೀಮಣ್ಣ ಮೇಟಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ ಕಾಡ್ಲೂರ್, ಗ್ಯಾರಂಟಿ ಯೋಜನೆಗಳ ಜಿಲ್ಲಾ ಸಮಿತಿ ಉಪಾಧ್ಯಕ್ಷ ಬಸ್ಸುಗೌಡ ಬಿಳ್ಹಾರ್, ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಮಲ್ಲಮ್ಮ ಕೋಮಾರ್, ಶರಣ ಕಾಮರೆಡ್ಡಿ, ವೆಂಕಟರೆಡ್ಡಿ ವನಕೇರಿ, ಚನ್ನಕೇಶವ ಬಾಣತಿಹಾಳ, ಗಣೇಶ ದುಪ್ಪಲಿ, ಚಿದಾನಂದಪ್ಪ ಕಾಳೆಬೆಳಗುಂದಿ, ಮಲ್ಲಿಕಾರ್ಜುನ ಈಟೆ, ಸಾಬಣ್ಣಾ ಕೆಂಗೂರಿ, ಅನೀಲ ಹೆಡಗಿಮದ್ರಿ ಇದ್ದರು.
ಜಿಲ್ಲಾ ವಕ್ತಾರ ಶ್ಯಾಮಸನ್ ಮಾಳಿಕೇರಿ ನಿರೂಪಿಸಿದರು.
ದೇಶದಲ್ಲಿ ಬಿಜೆಪಿ ಮತಗಳ್ಳತನ ಮಾಡುವ ಮೂಲಕ ನೈಜ ಅಭ್ಯರ್ಥಿಗಳ ಸೋಲಿಗೆ ಕಾರಣವಾಗಿದೆ. ಚುನಾವಣೆ ವ್ಯವಸ್ಥೆ ವಿರುದ್ದವೇ ಗೆಲುವು ಸಾಧಿಸಿರುವುದು ದುರಂತವೇ ಸರಿಗೋಪಿನಾಥ ಪಳೆಯಪ್ಪನ್ ಎಐಸಿಸಿ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.