ADVERTISEMENT

ಕೋವಿಡ್‌: ಬಿಗಿ ಸುರಕ್ಷತಾ ಕ್ರಮಗಳೊಂದಿಗೆ ಚುನಾವಣೆ

ಮುನ್ನಚ್ಚರಿಕೆ ಸೂಚನೆ ನೀಡಿದ ರಾಜ್ಯ ಚುನಾವಣೆ ಆಯೋಗ

ಬಿ.ಜಿ.ಪ್ರವೀಣಕುಮಾರ
Published 4 ಡಿಸೆಂಬರ್ 2020, 16:52 IST
Last Updated 4 ಡಿಸೆಂಬರ್ 2020, 16:52 IST
ಡಾ. ರಾಗಪ್ರಿಯಾ ಆರ್.,
ಡಾ. ರಾಗಪ್ರಿಯಾ ಆರ್.,   

ಯಾದಗಿರಿ: ಜಿಲ್ಲೆಯಲ್ಲಿ ಆರು ತಾಲ್ಲೂಕುಗಳಿದ್ದು, ಎರಡು ಹಂತದಲ್ಲಿ ಡಿ. 22ರಂದು ಮೊದಲ ಹಂತ, ಡಿ.27ರಂದು ಎರಡನೇ ಹಂತದಲ್ಲಿ ತಲಾ ಮೂರು ತಾಲ್ಲೂಕುಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಯಲಿದೆ. ಕೋವಿಡ್ ಕಾರಣದಿಂದ ಚುನಾವಣೆಯಲ್ಲಿ ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳನ್ನು ವಹಿಸಲು ಚುನಾವಣಾ ಅಯೋಗ ಸೂಚಿಸಿದೆ.

ಚುನಾವಣೆ ಪ್ರಕ್ರಿಯೆ ಪ್ರಾರಂಭ ಮೊದಲುಗೊಂಡು ಮುಗಿಯುವ ತನಕ ವಿವಿಧ ಪ್ರಮಾಣಿತ ಕಾರ್ಯನಿರ್ವಹಣಾ ಪದ್ಧತಿ (ಎಸ್‌ಒಪಿ) ಪಾಲಿಸಲು ಸೂಚಿಸಲಾಗಿದೆ.

ಡಿಜಿಟಿಲ್‌ ತಂತ್ರಜ್ಞಾನ ಬಳಸಲು ಸೂಚನೆ: ಚುನಾವಣೆಗೆ ನೇಮಕಗೊಂಡವರಿಗೆ ಒಂದೇ ಬಾರಿಗೆ ತರಬೇತಿ ನೀಡದೆಪ್ರತ್ಯೇಕ ತಂಡಗಳನ್ನು ರಚಿಸಿ ನೀಡಬೇಕು. ಆ್ಯಪ್‌, ವಿಡಿಯೊ ಕಾನ್ಫ್‌ರೆನ್ಸ್‌, ವಿಡಿಯೊ ಕ್ಲಿಪ್‌ ಮೂಲಕ ತರಬೇತಿ ನೀಡುವ ಮೂಲಕ ಡಿಜಿಟಿಲ್‌ ತಂತ್ರಜ್ಞಾನ ಬಳಸಲು ಸೂಚನೆ ನೀಡಲಾಗಿದೆ. ನಾಮಪತ್ರ ಸಲ್ಲಿಸುವ ವೇಳೆಯೂ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸಲು ಸೂಚಿಸಲಾಗಿದೆ.

ADVERTISEMENT

ಟೋಕನ್‌ ವ್ಯವಸ್ಥೆ: ಚುನಾವಣಾಧಿಕಾರಿ ಸ್ಯಾನಿಟೈಸರ್‌ನಿಂದ ಶುಚಿಗೊಳಿಸಿಕೊಂಡು ಹ್ಯಾಂಡ್‌ ಗ್ಲೌಸ್‌, ಮಾಸ್ಕ್‌ ಧರಿಸಬೇಕು. ಅಭ್ಯರ್ಥಿ ಅಥವಾ ಸೂಚಕರಿಗೆ ಕೊಠಡಿಯೊಳಗೆ ಪ್ರವೇಶಿಸಲು ಅನುಮತಿ ನೀಡಲಾಗಿದೆ.

ಮೊದಲು ಬಂದವರಿಗೆ ಆದ್ಯತೆಯಂತೆ ಟೋಕನ್‌ ವಿತರಿಸಬೇಕು. ಟೋಕನ್‌ ಪಡೆದವರ ನಾಮಪತ್ರ ಪರಿಶೀಲಿಸಬೇಕು. ಕೋವಿಡ್‌ ದೃಢಪಟ್ಟವರು ಕೂಡ ಸೂಚಕರ ಮೂಲಕ ನಾಮಪತ್ರ ಸಲ್ಲಿಸಬಹುದಾಗಿದೆ. ಇದೇ ರೀತಿ ನಾಮಪತ್ರ ಹಿಂಪಡೆಯಲು ಕ್ರಮಗಳನ್ನು ಅನುಸರಿಸಬೇಕು ಎಂದು ತಿಳಿಸಲಾಗಿದೆ.

ಕೋವಿಡ್‌ ಕಾರಣದಿಂದ ಗುಂಪಾಗಿ ಪ್ರಚಾರ ಮಾಡುವಂತಿಲ್ಲ. ಕೋವಿಡ್‌ ದೃಢಪಟ್ಟವರು ಎಲೆಕ್ಟ್ರಾನಿಕ್‌ ಮಾಧ್ಯಮದಲ್ಲಿ ಪ್ರಚಾರ ಮಾಡಲು ಅವಕಾಶ ಕಲ್ಪಿಸಲಾಗಿದೆ. ಜನರೊಂದಿಗೆ ಸೇರಿ ಪ್ರಚಾರ ಮಾಡಬಹುದಾಗಿದೆ.

ಮತದಾನದ ದಿನದ ವೇಳೆ ಪುರುಷರು, ಮಹಿಳೆಯರಿಗೆ ಪ್ರತ್ಯೇಕ ಸರದಿ ಮಾಡಬೇಕು. ಇಲ್ಲಿಯೂ ಅಂತರ ಕಾಪಾಡಿಕೊಂಡು ಮತ ಚಲಾವಣೆಗೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಮತದಾನದ ಶಾಯಿ ಹಾಕುವಾಗಲು ಕೈ ಮುಟ್ಟದೆ ಟೇಬಲ್ ಮೇಲಿಟ್ಟು ಶಾಯಿ ಹಾಕಬೇಕು ಎಂದು ಸೂಚನೆ ನೀಡಲಾಗಿದೆ.

ಚುನಾವಣೆಯಲ್ಲಿ ನಿರತರಾಗಿರುವ ಪ್ರತಿಯೊಬ್ಬರು ಮಾಸ್ಕ್‌ ಧರಿಸುವುದು ಕಡ್ಡಾಯವಾಗಿದೆ. ಚುನಾವಣಾ ಕಾರ್ಯಕ್ಕೆ ಉಪಯೋಗಿಸುವ ಕೊಠಡಿ ಪ್ರವೇಶಿಸುವ ಮುನ್ನ ಥರ್ಮಲ್‌ ಸ್ಕ್ಯಾನ್‌ನಿಂದ ಪರೀಕ್ಷಿಸಿಕೊಳ್ಳುವುದು, ಸ್ಯಾನಿಟೈಸರ್‌ನಿಂದ ಶುಚಿಗೊಳಿಸಿಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದೆ.

‘ಕೋವಿಡ್‌ ಕಾರಣದಿಂದ ರಾಜ್ಯ ಚುನಾವಣೆ ಹಲವು ಮಾರ್ಗದರ್ಶನಗಳನ್ನು ನೀಡಿದೆ. ಅವುಗಳನ್ನು ಪಾಲಿಸಲಾಗುತ್ತಿದೆ. ಈಗಾಗಲೇ ನೋಡಲ್‌ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ನೀತಿ ಸಂಹಿತೆ ಉಲ್ಲಂಘನೆಯಾದಂತೆ ನೋಡಿಕೊಳ್ಳಲಾಗುತ್ತಿದೆ. ವಿಡಿಯೊ ಮಾಡಲಾಗುತ್ತದೆ. ಇದಕ್ಕಾಗಿ ತಂಡ ರಚಿಸಲಾಗಿದೆ’ ಎಂದು ಮಾಹಿತಿ ನೀಡುತ್ತಾರೆ ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಆರ್‌., ಅವರು.

‘ಆರ್‌ಒ, ಎಡಿ ಹಂತದ ಅಧಿಕಾರಿಗಳಿಗೆ ಈಗಾಗಲೇ ಎರಡು ಹಂತದಲ್ಲಿ ಚುನಾವಣೆ ತರಬೇತಿ ನೀಡಲಾಗಿದೆ. ಮೂರನೇ ಬಾರಿ ತರಬೇತಿ ನೀಡಲು ಸಿದ್ಧತೆ ನಡೆಸಲಾಗಿದೆ’ ಎನ್ನುತ್ತಾರೆ ಅವರು.

ಕೋವಿಡ್‌ ಮಧ್ಯೆಯೂ ಚುನಾವಣೆ ನಡೆಯುತ್ತಿರುವುದರಿಂದ ಸಾಕಷ್ಟು ಎಚ್ಚರಿಕೆ ಮಧ್ಯೆ ಚುನಾವಣೆ ಕಾರ್ಯ ನಡೆಸಬೇಕಾಗಿದೆ.

***

ಕೋವಿಡ್‌ ಕಾರಣದಿಂದ ಪ್ರಚಾರ ಮಾಡುವ ವೇಳೆ 5 ಜನಕ್ಕಿಂತ ಹೆಚ್ಚು ಜನರು ಇರಬಾರದು ಎಂದು ತಿಳಿಸಲಾಗಿದೆ. ಸಭೆ, ಸಮಾರಂಭಗಳನ್ನು ವಿಶಾಲವಾದ ಸ್ಥಳಗಳಲ್ಲಿ ನಡೆಸಬೇಕು

-ಡಾ. ರಾಗಪ್ರಿಯಾ ಆರ್‌., ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.