ವಡಗೇರಾ: ಪಟ್ಟಣದ ಬಹುತೇಕ ಬಡಾವಣೆಗಳಲ್ಲಿ ವಿದ್ಯುತ್ ಕಂಬಗಳು ವಾಲಿ ತಂತಿಗಳು ಜೋತು ಬಿದ್ದಿವೆ. ಇದರಿಂದ ಬಡಾವಣೆಯ ನಿವಾಸಿಗಳು ಆತಂಕದಲ್ಲಿದ್ದಾರೆ.
ಪಟ್ಟಣದ ವಾರ್ಡ್ ಸಂಖ್ಯೆ–3ರ ಕೆಂಚಮ್ಮ ದೇವಿ ದೇವಸ್ಥಾನದ ಬಳಿಯ ಪರಿಶಿಷ್ಟರ ಬಡಾವಣೆಯ ಸುಮಾರು 20ಕ್ಕೂ ಹೆಚ್ಚು ಮನೆಗಳ ಮೇಲೆ ವಿದ್ಯುತ್ ತಂತಿ ಹಾದು ಹೋಗಿದೆ. ತಂತಿಗಳು ಜೋತು ಬಿದ್ದ ಕಾರಣ ಬಡಾವಣೆಯ ಜನರು ಜೀವ ಕೈಯಲ್ಲಿಡಿದುಕೊಂಡು ವಾಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣದ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ವಿದ್ಯುತ್ ಕಂಬ ವಾಲಿದೆ. ವಿದ್ಯುತ್ ತಂತಿಗಳು ಜೋತು ಬಿದ್ದಿವೆ.
ಈ ಶಾಲೆಯಲ್ಲಿ 1ರಿಂದ 7 ರವರೆಗೂ ತರಗತಿಗಳು ನಡೆಯುತ್ತವೆ. ವಿದ್ಯಾರ್ಥಿಗಳ ದಾಖಲಾತಿಯೂ ಉತ್ತಮವಾಗಿದೆ. ಪ್ರತಿನಿತ್ಯ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಶಾಲೆಗೆ ಬರುತ್ತಾರೆ.
ವಿರಾಮದ ಸಮಯದಲ್ಲಿ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಆಟ ಆಡುವುದು ಮತ್ತು ಓಡಾಡುವುದು ಸಾಮಾನ್ಯ. ಆದರೆ ಶಾಲಾ ಆವರಣದಲ್ಲಿ ವಾಲಿರುವ ವಿದ್ಯುತ್ ಕಂಬ ಹಾಗೂ ಜೋತು ಬಿದ್ದ ತಂತಿಗಳು ಗಾಳಿಗೆ ಕಡಿದು ಬಿದ್ದು ಅಪಾಯ ಸಂಭವಿಸುವ ಸಾಧ್ಯತೆ ಇದೆ. ಅಪಾಯ ಸಂಭವಿಸಿದರೆ ಯಾರು ಹೊಣೆ ಎಂದು ಪಾಲಕರು ಪ್ರಶ್ನಿಸುತ್ತಾರೆ.
ಪರಿಶಿಷ್ಟರ ಬಡಾವಣೆಯ ನಿವಾಸಿಗಳು ಹಾಗೂ ವಿದ್ಯಾರ್ಥಿಗಳ ಜೀವಕ್ಕೆ ಅಪಾಯ ಉಂಟು ಮಾಡುವ ವಿದ್ಯುತ್ ಕಂಬ ಹಾಗೂ ಜೋತು ಬಿದ್ದ ತಂತಿಗಳನ್ನು ತೆರವುಗೋಳಿಸಲು ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳು ಹಾಗೂ ಪಾಲಕರು ಒತ್ತಾಯಿಸುತ್ತಾರೆ.
ಜೆಇ ಅವರು ಇನ್ನೂ ಎರಡು ಮೂರು ದಿನಗಳಲ್ಲಿ ಕರ್ತವ್ಯಕ್ಕೆ ಹಾಜರಾಗುತ್ತಾರೆ. ಅವರು ಬಂದ ನಂತರ ಸಮಸ್ಯೆ ಗಮನಕ್ಕೆ ತರಲಾಗುವುದುಆನಂದ ಪ್ರಭಾರ ಅಧಿಕಾರಿ ಜೆಸ್ಕಾಂ ಬೆಂಡೆಬೆಂಬಳಿ
ವಿದ್ಯುತ್ ತಂತಿ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಪ್ರಯೋಜನವಾಗಿಲ್ಲ. ಕೂಡಲೇ ಬಡಾವಣೆಗೆ ಜೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ವಿದ್ಯುತ್ ತಂತಿ ತೆರವುಗೊಳಿಸಬೇಕುನಂದಪ್ಪ ಚನ್ನಬಸವ ಶಂಕ್ರಪ್ಪ ಮಲ್ಲಪ್ಪ ಮಹೇಶ ಕರೆಪ್ಪ ಬಡಾವಣೆಯ ನಿವಾಸಿಗಳು
ಶಾಲಾ ಆವರಣದಲ್ಲಿರುವ ವಿದ್ಯುತ್ ಕಂಬದ ತೆರವಿಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಉದಾಸೀನ ತೋರಿದರೆ ಮುಂದೆ ಆಗುವ ಅನಾಹುತಗಳಿಗೆ ಜೆಸ್ಕಾಂ ಅಧಿಕಾರಿಗಳೇ ಹೊಣೆಯಾಗುತ್ತಾರೆಶರಣು ಇಟಗಿ ಸಂಚಾಲಕ ಕರವೇ ಕಲ್ಯಾಣ ಕರ್ನಾಟಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.