ಸುರಪುರ: ತಾಲ್ಲೂಕಿನ ಜಾಲಿಬೆಂಚಿ ಗ್ರಾಮದಲ್ಲಿ ಮಂಗಳವಾರ ಸಂಜೆ 6 ಗಂಟೆ ಸುಮಾರಿಗೆ ಭಾರಿ ಗಾಳಿ ಬೀಸಿದ್ದರಿಂದ ವಿದ್ಯುತ್ ಅವಘಡ ಸಂಭವಿಸಿದ್ದು, ಭಯಾನಕ ವಾತಾವರಣ ನಿರ್ಮಾಣವಾದ ಘಟನೆ ನಡೆದಿದೆ.
ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದ ಹತ್ತಿರ ಹಳೆಯ ಟಿಸಿ ಇದೆ. ಈ ಟಿಸಿಗೆ ಅರ್ಧ ಗ್ರಾಮದಷ್ಟು ಮನೆಗಳು ವಿದ್ಯುತ್ ಸಂಪರ್ಕ ಹೊಂದಿವೆ.
ಟಿಸಿಯಿಂದ ಕಂಬಕ್ಕೆ ಸಂಪರ್ಕ ಕಲ್ಪಿಸುವ ವಿದ್ಯುತ್ ತಂತಿಗಳು ಜೋತು ಬಿದ್ದು ವರ್ಷಗಳ ಗತಿಸಿವೆ. ತಂತಿ ಬದಲಿಸಲು ಗ್ರಾಮಸ್ಥರು ಮಾಡಿದ ಮನವಿಗಳಿಗೆ ಸ್ಪಂದನೆ ಸಿಕ್ಕಿರಲಿಲ್ಲ.
ಈ ತಂತಿಗಳು ಗಾಳಿಯಿಂದ ಒಂದಕ್ಕೊಂದು ಜೋಡಣೆಯಾಗಿ ಶಾಕ್ ಸರ್ಕ್ಯೂಟ್ ಸಂಭವಿಸಿದೆ. ಈ ಅವಘಡ ಸಂಪರ್ಕ ಹೊಂದಿದ ಎಲ್ಲ ಮನೆಗಳ ಕಂಬಗಳ ಹತ್ತಿರ ಹರಡಿದೆ. ಬೆಂಕಿ ಎಲ್ಲೆಡೆ ಕಾಣಿಸಿಕೊಂಡು ಸ್ಪಾರ್ಕ್ ಆಗುವ ದೃಶ್ಯ ಭಯದ ವಾತಾವರಣ ಸೃಷ್ಟಿ ಮಾಡಿತ್ತು.
ಹಲವು ತಂತಿಗಳು ನೆಲಕ್ಕೆ ಉರುಳಿ ಬಿದ್ದಿವೆ. ಕೆಲವರು ಹೆದರಿ ಮನೆಯಿಂದ ಹೊರಗೆ ಬಂದಿದ್ದಾರೆ. ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ನೂರಾರು ಮನೆಗಳ ಟಿ.ವಿ, ಫ್ಯಾನ್, ಏರಕೂಲರ್, ರೆಫ್ರಿಜೆಟರ್, ಬ್ಯಾಟರಿ ಸುಟ್ಟು ಹೋಗಿವೆ. ಒಂದು ಕೋಟಿಗೂ ಹೆಚ್ಚು ಹಾನಿಯನ್ನು ಗ್ರಾಮಸ್ಥರು ಅಂದಾಜಿಸಿದ್ದಾರೆ. ವಿಷಯ ತಿಳಿದ ತಕ್ಷಣ ಜೆಸ್ಕಾಂ ಇಲಾಖೆಯವರು ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ದುರಸ್ತಿ ಕಾರ್ಯ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.