ADVERTISEMENT

ಯಾದಗಿರಿ|ವಿದ್ಯುತ್ ಕಳವು ನಿಂತರೆ ಟಿಸಿಗೆ ಹಾನಿಯಾಗಲ್ಲ: ಇಂಧನ ಸಚಿವ ಕೆ.ಜೆ.ಜಾರ್ಜ್

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 6:15 IST
Last Updated 25 ನವೆಂಬರ್ 2025, 6:15 IST
ಯಾದಗಿರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಇಂಧನ ಸಚಿವ ಕೆ.ಜೆ. ಜಾರ್ಜ್ ಮಾತನಾಡಿದರು. ಸಭೆಯಲ್ಲಿ ಕೆಪಿಟಿಸಿಎಲ್ ಎಂಡಿ ಪಂಕಜ್ ಕುಮಾರ್ ಪಾಂಡೆ, ಅಧ್ಯಕ್ಷ ಪ್ರವೀಣ್ ಪಾಟೀಲ ಹರವಾಳ, ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು, ಸಚಿವ ಶರಣಬಸಪ್ಪ ದರ್ಶನಾಪುರ, ಸಂಸದ ಕುಮಾರ್ ನಾಯಕ, ಶಾಸಕ  ವೇಣುಗೋಪಾಲ್ ನಾಯಕ ಉಪಸ್ಥಿತರಿದ್ದರು
ಯಾದಗಿರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಇಂಧನ ಸಚಿವ ಕೆ.ಜೆ. ಜಾರ್ಜ್ ಮಾತನಾಡಿದರು. ಸಭೆಯಲ್ಲಿ ಕೆಪಿಟಿಸಿಎಲ್ ಎಂಡಿ ಪಂಕಜ್ ಕುಮಾರ್ ಪಾಂಡೆ, ಅಧ್ಯಕ್ಷ ಪ್ರವೀಣ್ ಪಾಟೀಲ ಹರವಾಳ, ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು, ಸಚಿವ ಶರಣಬಸಪ್ಪ ದರ್ಶನಾಪುರ, ಸಂಸದ ಕುಮಾರ್ ನಾಯಕ, ಶಾಸಕ  ವೇಣುಗೋಪಾಲ್ ನಾಯಕ ಉಪಸ್ಥಿತರಿದ್ದರು   

ಯಾದಗಿರಿ: ‘ಅನಧಿಕೃತವಾಗಿ ಹುಕ್‌ಗಳ (ಕೊಂಡಿ) ಮೂಲಕ ವಿದ್ಯುತ್ ಕಳ್ಳತನದಿಂದ ಹೆಚ್ಚಿನ ಲೋಡ್‌ ಬಿದ್ದು ವಿದ್ಯುತ್ ಪರಿವರ್ತಕಗಳು (ಟಿಸಿ) ಸುಟ್ಟು ಹೋಗುವುದನ್ನು ತಡೆಯಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಹಾಗೂ ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾಂ) ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.

‌‘ವಿದ್ಯುತ್‌ನ ಕೊರತೆ ಇಲ್ಲದಿದ್ದರೂ ಸಮರ್ಪಕ ನಿರ್ವಹಣೆಯ ಮಾಡಬೇಕಿದೆ. ಪಂಪ್‌ಸೆಟ್ ಮತ್ತು ಕೈಗಾರಿಕಾ ಪ್ರದೇಶಗಳ ವ್ಯಾಪ್ತಿಯಲ್ಲಿ ವಿದ್ಯುತ್ ಕಳ್ಳತನ ಆಗದಂತೆ ನಿಗಾವಹಿಸಬೇಕು. ಈಗಾಗಲೇ ಸ್ಥಾಪನೆಯಾಗಿರುವ ವಿದ್ಯುತ್ ಉಪ ಕೇಂದ್ರಗಳ ವ್ಯಾಪ್ತಿಯಲ್ಲಿ ವಿದ್ಯುತ್ ಲಿಂಕ್ ಲೈನ್‌ ಕಾರ್ಯಕ್ಕೆ ಆದ್ಯತೆ ಕೊಡಬೇಕು. ಕೇಂದ್ರವಾರು ಸಂಪೂರ್ಣ ಲಿಂಕ್ ಲೈನ್ ಜೋಡಣೆ ಮೇಲೆ ಅಧಿಕಾರಿಗಳ ಗಮನ ಇರಬೇಕು’ ಎಂದರು.  

ADVERTISEMENT

‘ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಕೊರೆಯಿಸಿದ ಕಡೆಗಳಲ್ಲಿ ತಕ್ಷಣವೇ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ತಾಂಡಾ, ದೊಡ್ಡಿ ಸೇರಿ ಅರ್ಹರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ವಿದ್ಯುತ್ ಉಪಕೇಂದ್ರಗಳಾದ ಕೆಂಭಾವಿ, ಹುಣಸಿಹೊಳೆ, ಕವಳೂರ, ಕಂದಕೂರ, ಅಡಕಲಬಂಡಿ, ವನದುರ್ಗ, ಹಯ್ಯಳ (ಬಿ), ಕೊಡೆಕಲ್, ಗಡ್ಡೆಸುಗೂರ್‌ ಜಮೀನಿನ ಹಾಗೂ ಟೆಂಡರ್ ಪ್ರಕ್ರಿಯೆ ತ್ವರಿತವಾಗಿ ಮುಗಿಸಬೇಕು’ ಎಂದು ಸೂಚಿಸಿದರು.

‘ಯಾದಗಿರಿ ಹಾಗೂ ವಡಗೇರಾಗಳಲ್ಲಿ ವಿದ್ಯುತ್ ಸರ್ಕಲ್ ಕಚೇರಿ ಸ್ಥಾಪನೆ, ಹೊಸದಾಗಿ ನೇಮಕವಾಗುವ ಲೈನ್ ಮನ್‌ಗಳನ್ನು ಅವಶ್ಯಕತೆ ಇರುವಲ್ಲಿ ನಿಯೋಜನೆ ಮಾಡಬೇಕು. ಕುಸುಮ-ಬಿ ಯೋಜನೆಯಡಿ ಸೋಲಾರ್ ಪಂಪ್‌ಸೆಟ್‌ಗೆ ಉತ್ತೇಜಿಸಬೇಕು. ಪ್ರವಾಹದ ವೇಳೆ ಹಾನಿಗೊಳಗಾದ ವಿದ್ಯುತ್ ಸೌಕರ್ಯಗಳನ್ನು ಕಲ್ಪಿಸಬೇಕು’ ಎಂದರು. 

ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಮಾತನಾಡಿ, ‘ಜನವಸತಿ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ವಿದ್ಯುತ್ ಪರಿವರ್ತಕಗಳ ದುರಸ್ತಿ ಕೇಂದ್ರಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು’ ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳ ಕಿರು ಪುಸ್ತಕ ಬಿಡುಗಡೆ ಮಾಡಲಾಯಿತು.

ಸಭೆಯಲ್ಲಿ ಸಂಸದ ಕುಮಾರ್ ನಾಯಕ, ಶಾಸಕರಾದ ಚನ್ನಾರೆಡ್ಡಿ ಪಾಟೀಲ ತುನ್ನೂರು, ವೇಣುಗೋಪಾಲ್ ನಾಯಕ, ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಪಾಟೀಲ ಹರವಾಳ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಜೆಸ್ಕಾಂ ಎಂಡಿ ಕೃಷ್ಣಾ ಬಾಜಪೈ, ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಡಿಯಾ, ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಧರಣೇಶ್ ಸೇರಿದಂತೆ ವಿದ್ಯುತ್ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

30X 40 ಅಳತೆ ಎರಡು ಹಂತಸ್ತಿನ ಕಟ್ಟಡಗಳಿಗೆ ಒಸಿ ವಾಣಿಜ್ಯ ಪರವಾನಿಗೆ ಪಡೆಯದೆ ವಿದ್ಯುತ್ ಸಂಪರ್ಕ ಕಲ್ಪಿಸುವ ಬಗ್ಗೆ ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಂಡು ಆದೇಶವೂ ಮಾಡಲಾಗಿದೆ
ಕೆ.ಜೆ. ಜಾರ್ಜ್ ಇಂಧನ ಸಚಿವ

‘3000 ಲೈನ್‌ಮನ್‌ಗಳ ನೇಮಕ ಪೂರ್ಣ’

‘ರಾಜ್ಯದಲ್ಲಿ 3000 ಲೈನ್‌ಮನ್‌ಗಳ ನೇಮಕಾತಿ ಪ್ರಕ್ರಿಯೆ ಮುಗಿದಿದ್ದು ಆಯ್ಕೆಯಾದ ಅಭ್ಯರ್ಥಿಗಳ ವೈದ್ಯಕೀಯ ತಪಾಸಣೆ ನಡೆಯುತ್ತಿದೆ’ ಎಂದು ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ ತಿಳಿಸಿದರು. ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಕಳೆದ ವರ್ಷ ಎಇ ಜೆಇ ಸೇರಿ 1500 ಹುದ್ದೆಗಳು ಭರ್ತಿಯಾಗಿ ಕೆಲಸಕ್ಕೂ ಹಾಜರಾಗಿದ್ದಾರೆ. ಲೈನ್‌ಮನ್‌ಗಳ ಆಯ್ಕೆ ಪ್ರಕ್ರಿಯ ಕೊನೆಯ ಹಂತದಲ್ಲಿದೆ. ಜೆಸ್ಕಾಂನಲ್ಲಿ ಕೆಲವೆಡೆ ಹೆಚ್ಚು ಮತ್ತೆ ಕೆಲವೆಡೆ ಕಡಿಮೆ ಸಂಖ್ಯೆಯ ಹುದ್ದೆಗಳು ಖಾಲಿ ಇವೆ. ಹುದ್ದೆಗಳನ್ನು ನೋಡಿಕೊಂಡು ಸಿಬ್ಬಂದಿಯ ಹಂಚಿಕೆ ಮಾಡಲಾಗುವುದು’ ಎಂದು ಹೇಳಿದರು. ‘ಹೊಸ ವಿದ್ಯುತ್ ಉಪವಿಭಾಗಗಳನ್ನು ಸ್ಥಾಪಿಸುವ ಬಗ್ಗೆ ಚರ್ಚೆಯಾಗಿದ್ದು ಮಾರ್ಗದರ್ಶಿಗಳನ್ನೂ ಸಿದ್ಧಪಡಿಸಲಾಗಿದೆ. ವೇಗದ ಬೆಳವಣಿಗೆ ಹೆಚ್ಚಿನ ಸಂಪರ್ಕಗಳು ರೈತರ ವ್ಯಾಪಕ ಬೇಡಿಕೆ ಇರುವ ಸ್ಥಳವನ್ನು ನೋಡಿಕೊಂಡು ಸ್ಥಾಪನೆ ಮಾಡಲಾಗುವುದು’ ಎಂದರು. ಇದಕ್ಕೆ ಧ್ವನಿಗೂಡಿಸಿದ ಸಚಿವ ಕೆ.ಜೆ. ಜಾರ್ಜ್‌ ‘ಉಪಕೇಂದ್ರಗಳ ಸ್ಥಾಪನೆಗೆ ರಾಜ್ಯ ಸರ್ಕಾರವು ಎಲ್ಲ ರೀಯತ ಬೆಂಬಲ ಕೊಡಲಿದೆ. ರಾಜ್ಯದಲ್ಲ 100 ಕಡೆ ವಿದ್ಯುತ್ ಉಪಕೇಂದ್ರಗಳ ಸ್ಥಾಪನೆ ಮಾಡಲಾಗುವುದು. ನಮ್ಮಲ್ಲಿ ವಿದ್ಯುತ್‌ ಪೂರೈಕೆಯ ಕೊರತೆ ಇಲ್ಲ. ಇನ್ನಷ್ಟು ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕಿದೆ’ ಎಂದು ಹೇಳಿದರು. ‘ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ಇಲಾಖೆಗಳು ಸರ್ಕಾರದ ಭಾಗವಾಗಿದೆ. ಹಣಕಾಸು ಇಲಾಖೆಯವರು ಕಡಿತ ಮಾಡಿ ಕೊಡುತ್ತಿದ್ದಾರೆ. ಸಂಬಂಧಪಟ್ಟ ಇಲಾಖೆಗಳ ಸಚಿವರ ಜೊತೆಗೂ ಈ ಚರ್ಚಿಸಿದ್ದು ವೈಜ್ಞಾನಿಕವಾಗಿ ಸೋಲಾರ್ ವಿದ್ಯುತ್ ಅಳವಡಿಸಿಕೊಳ್ಳವಂತೆ ಹೇಳಿದ್ದೇವೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.