ಕೆಂಭಾವಿ: ಪಟ್ಟಣದ ಪುರಸಭೆ ವತಿಯಿದ ಕಳೆದ ಹದಿನೈದು ದಿನಗಳಿಂದ ನಡೆಯುತ್ತಿರುವ ಫುಟ್‍ಪಾತ್ ಒತ್ತುವರಿ ತೆರವು ಮತ್ತು ಒಳಚರಂಡಿ ಸ್ವಚ್ಛಗೊಳಿಸುವ ಕಾರ್ಯ ಶನಿವಾರವೂ ಮುಂದುವರಿಯಿತು.
ಹಳೇ ಬಸ್ ನಿಲ್ದಾಣದಿಂದ ಹೊಸ ಬಸ್ ನಿಲ್ದಾಣಕ್ಕೆ ಹೋಗುವ ಮುಖ್ಯ ರಸ್ತೆಯ ಮೇಲಿರುವ ಅಂಗಡಿಗಳನ್ನು ತೆರವುಗೊಳಿಸಿ ಚರಂಡಿ ಸ್ವಚ್ಛಗೊಳಿಸಲಾಯಿತು.
ದೊಡ್ಡ ಮಟ್ಟದ ಚರಂಡಿ ಮೇಲೆ ಆಕ್ರಮಿಸಿಕೊಂಡಿದ್ದ ಅಂಗಡಿಗಳನ್ನು ಜೆಸಿಬಿ ಯಂತ್ರ ಬಳಸಿ ತೆರವುಗೊಳಿಸಲಾಯಿತು. ಇದಕ್ಕೂ ಮೊದಲು ಅಂಗಡಿ ಮಾಲೀಕರಿಗೆ ಸೂಚನೆ ನೀಡಿದ್ದು ಕೆಲವು ಅಂಗಡಿಗಳು ಚರಂಡಿ ಮೇಲೆಯೇ ಇದ್ದ ಹಿನ್ನೆಲೆಯಲ್ಲಿ ಅವುಗಳನ್ನೂ ತೆರವುಗೊಳಿಸಿ ಸಂಪೂರ್ಣ ಹೂಳು ತುಂಬಿದ್ದ ಚರಂಡಿಗಳನ್ನು ಸ್ವಚ್ಛಗೊಳಿಸಲಾಯಿತು. ಮಳೆ ನೀರು ಸರಾಗವಾಗಿ ಹೋಗುವಂತೆ ಕ್ರಮ ಕೈಗೊಳ್ಳಲಾಗಿದ್ದು, ಈ ಕಾರ್ಯ ಇನ್ನಷ್ಟು ದಿನ ಮುಂದುವರಿಯಲಿದೆ ಎಂದು ಪುರಸಭೆ ಅಧಿಕಾರಿಗಳು ತಿಳಿಸಿದರು.
ಪ್ರತಿ ವರ್ಷ ಇಲ್ಲಿನ ಹಳೇ ಬಸ್ ನಿಲ್ದಾಣ ಪ್ರದೇಶದ ಫುಟ್‍ಪಾತ್ ಅಂಗಡಿಗಳನ್ನು ತೆರವುಗೊಳಿಸಿ ಇಲ್ಲಿರುವ ಒಳಚರಂಡಿಗಳನ್ನು ಸ್ವಚ್ಛಗೊಳಿಸಲಾಗುತ್ತದೆ. ಆದರೆ ದಿನಗಳೆದಂತೆ ಜನ ಮತ್ತೆ ಇದರ ಮೇಲೆ ಅಂಗಡಿ ತೆರೆಯುವುದರಿಂದ ಇಡೀ ಪ್ರದೇಶ ಮಲಿನವಾಗಿ ದುರ್ನಾತ ಬೀರುತ್ತದೆ. ಜನ ಪುರಸಭೆಯ ಜೊತೆ ಸಹಕರಿಸಿ ನೈರ್ಮಲ್ಯ ಕಾಪಾಡುವಂತೆ ಪುಸರಭೆ ಅಧಿಕಾರಿ ಅರುಣ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.