ಸುರಪುರ: ‘ನೀರಿನ ಕರ ವಸೂಲಿಯ ನೆಪದಲ್ಲಿ ಜನರಿಂದ ಹಗಲು ದರೋಡೆ ನಡೆಸುವ ಮೂಲಕ ಸುಲಿಗೆ ನಡೆಸಲಾಗುತ್ತಿದೆ’ ಎಂದು ಮಾಜಿ ಸಚಿವ ರಾಜೂಗೌಡ ಆರೋಪಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಿರಂತರ ಕುಡಿಯವ ನೀರು ಸರಬರಾಜು ಯೋಜನೆಯನ್ನು ನನ್ನ ಅವಧಿಯಲ್ಲಿ ಸಾಕಷ್ಟು ಶ್ರಮಪಟ್ಟು ಜಾರಿಗೊಳಿಸಿದ್ದೆ. 5 ವರ್ಷ ನಿರ್ವಹಣೆ ಹೊಣೆ ಗುತ್ತಿಗೆದಾರನದ್ದು’ ಎಂದರು.
‘ಒಂದು ಕುಟುಂಬ ದಿನಕ್ಕೆ 300 ಲೀಟರ್‌ನಂತೆ ತಿಂಗಳಿಗೆ 8 ಸಾವಿರ ಲೀಟರ್ ಒಳಗಡೆ ಉಪಯೋಗಿಸುತ್ತಾರೆ. ಅಂದರೆ ತಿಂಗಳಿಗೆ ₹ 56 ದರ ನಿಗಮವೇ ನಿಗದಿ ಪಡಿಸಿದೆ. ಆದರೆ ಎರಡು ಪಟ್ಟು ಅಂದರೆ ₹ 120 ವಸೂಲಿ ಮಾಡುತ್ತಿರುವುದು ಸುಲಿಗೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಈ ಬಗ್ಗೆ ಜನರು ಜಾಗ್ರತೆ ವಹಿಸಬೇಕು. ₹120 ತುಂಬಬಾರದು. ನಮ್ಮ ಮೀಟರ್ ಎಷ್ಟು ತೋರಿಸುತ್ತಿದೆ ಅಷ್ಟನ್ನು ಮಾತ್ರ ತುಂಬುತ್ತೇವೆ ಎಂದು ಧೈರ್ಯವಾಗಿ ಹೇಳಬೇಕು ಎಂದು ಸಲಹೆ ನೀಡಿದರು.
‘ಸುರಪುರ– ಹುಣಸಗಿ ಬಸ್ ಸಂಚಾರ ತೆಗೆದು ಹಾಕಿರುವುದರಿಂದ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ವಿದ್ಯುತ್ ವ್ಯತ್ಯಯದಿಂದ ರೈತರು ಕಂಗಾಲಾಗಿದ್ದಾರೆ. ಟಿಸಿ ಸುಟ್ಟರೆ ತಿಂಗಳುಗಟ್ಟಲೆ ತಿರುಗಬೇಕಾದ ಪರಿಸ್ಥಿತಿ ಇದೆ. ಕನ್ನೆಳ್ಳಿ ಗ್ರಾಮದಲ್ಲಿ ಕಾಲುವೆಗೆ ನೀರು ಹರಿಸುತ್ತಿಲ್ಲ. ಈ ಬಗ್ಗೆ ಕೇಳಿದರೆ ಸಿಬ್ಬಂದಿ ರೈತರನ್ನು ಹೆದರಿಸುತ್ತಾರೆ. ಕ್ಷೇತ್ರದಲ್ಲಿ ಅರಾಜಕತೆ ಇದೆ’ ಎಂದು ದೂರಿದರು.
‘ವಸತಿ ಯೋಜನೆ ಅಡಿ ಡಿಡಿ ಸಲ್ಲಿಸಿದವರಿಗೆ ಖಂಡಿತವಾಗಿ ಮನೆ ಸಿಗಲಿವೆ. ರದ್ದು ಮಾಡುವ ಅಧಿಕಾರ ಯಾರಿಗೂ ಇಲ್ಲ. ಆಯ್ಕೆಯಾದ ಫಲಾನುಭವಿಗಳಿಗೆ ಶೀಘ್ರವೇ ಮನೆ ಸಿಗಲಿವೆ. ರದ್ದು ಮಾಡಿದರೆ ಫಲಾನುಭವಿಗಳೊಂದಿಗೆ ಧರಣಿ ಹಮ್ಮಿಕೊಳ್ಳುವೆ’ ಎಂದು ಎಚ್ಚರಿಸಿದರು.
ಮುಖಂಡರಾದ ರಾಜಾ ಹನುಮಪ್ಪನಾಯಕ ತಾತಾ, ವೇಣುಗೋಪಾಲ ನಾಯಕ ಜೇವರ್ಗಿ, ರಾಮನಗೌಡ ಸುಬೇದಾರ, ಪ್ರಕಾಶ ಸಜ್ಜನ್, ರಾಜಾ ರಂಗಪ್ಪನಾಯಕ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.