ADVERTISEMENT

ಯಾದಗಿರಿ | ವಿಷಾನಿಲ ಬಿಡುಗಡೆ ಮಾಡುತ್ತಿರುವ ಕಾರ್ಖಾನೆಗಳು: ದೂರು

ಕಡೇಚೂರು, ಬಾಡಿಯಾಳ ಕೈಗಾರಿಕೆ ಪ್ರದೇಶದಿಂದ ಹೊರಸೂಸುತ್ತಿರುವ ಗಬ್ಬುವಾಸನೆ: ಹೋರಾಟ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2024, 16:16 IST
Last Updated 28 ನವೆಂಬರ್ 2024, 16:16 IST
ಯಾದಗಿರಿ ತಾಲ್ಲೂಕಿನ ಕಡೇಚೂರು–ಬಾಡಿಯಾಳ ಕೈಗಾರಿಕೆ ಪ್ರದೇಶದಲ್ಲಿನ ಕೈಗಾರಿಕೆಗಳಿಂದ ಸುತ್ತಮುತ್ತಲ ಗ್ರಾಮಗಳಿಗೆ ವಿಷಾನಿಲ ಹರಡುತ್ತಿರುವುದನ್ನು ತಡೆಯಲು ಜಯ ಕರ್ನಾಟಕ ಸಂಘಟನೆ ಜಿಲ್ಲಾ ಘಟಕದಿಂದ ಮನವಿ ಸಲ್ಲಿಸಲಾಯಿತು
ಯಾದಗಿರಿ ತಾಲ್ಲೂಕಿನ ಕಡೇಚೂರು–ಬಾಡಿಯಾಳ ಕೈಗಾರಿಕೆ ಪ್ರದೇಶದಲ್ಲಿನ ಕೈಗಾರಿಕೆಗಳಿಂದ ಸುತ್ತಮುತ್ತಲ ಗ್ರಾಮಗಳಿಗೆ ವಿಷಾನಿಲ ಹರಡುತ್ತಿರುವುದನ್ನು ತಡೆಯಲು ಜಯ ಕರ್ನಾಟಕ ಸಂಘಟನೆ ಜಿಲ್ಲಾ ಘಟಕದಿಂದ ಮನವಿ ಸಲ್ಲಿಸಲಾಯಿತು   

ಯಾದಗಿರಿ: ಜಿಲ್ಲೆಯ ಗುರುಮಠಕಲ್ ಮತಕ್ಷೇತ್ರ ವ್ಯಾಪ್ತಿಯಲ್ಲಿರುವ ವಿಷಾನಿಲ ಹೊರಸೂಸುತ್ತಿರುವ ಕಡೇಚೂರು– ಬಾಡಿಯಾಳ ಕೈಗಾರಿಕೆ ಪ್ರದೇಶದಲ್ಲಿನ ಕೈಗಾರಿಕೆಗಳಿಂದ ಸುತ್ತಮುತ್ತಲ ಗ್ರಾಮಗಳಿಗೆ ವಿಷಾನಿಲ ಹರಡುತ್ತಿದ್ದು, ತಕ್ಷಣ ಕ್ರಮ ಕೈಗೊಂಡು ಅಪಾಯಕಾರಿ ಕೈಗಾರಿಕೆಗಳನ್ನು ಬರಖಾಸ್ತುಗೊಳಿಸಬೇಕು ಜಯ ಕರ್ನಾಟಕ ಸಂಘಟನೆ ಜಿಲ್ಲಾ ಘಟಕ ಆಗ್ರಹಿಸಿದೆ.

ಈ ಕುರಿತು ಗುರುವಾರ ಜಿಲ್ಲಾಧಿಕಾರಿ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್.ವಿಶ್ವನಾಥ ನಾಯಕ ಮಾತನಾಡಿ, ‘ಕೈಗಾರಿಕಾ ಪ್ರದೇಶದಲ್ಲಿ ಕಾನೂನು ಬಾಹಿರವಾಗಿ ವಿಷಕಾರಿ ರಾಸಾಯನಿಕ ಹೊರಹಾಕುತ್ತಿರುವ ಕಂಪನಿಗಳಿಂದಾಗಿ ಸುತ್ತಮುತ್ತಲ ಗ್ರಾಮಗಳ ಜನರ ಬದುಕು ದುಸ್ತರವಾಗಿದೆ. ಸುತ್ತಮುತ್ತ 10-15 ಕಿ.ಮೀ. ಗಟ್ಟಲೆ ಗಬ್ಬುವಾಸನೆ ವ್ಯಾಪಕವಾಗಿ ಹರಡುತ್ತಿದ್ದು ಭವಿಷ್ಯದಲ್ಲಿ ಇದು ವಿಷಾನಿಲವಾಗಿ ಜೀವಕ್ಕೆ ಅಪಾಯ ತರುವ ಸಾಧ್ಯತೆ ಇದೆ’ ಎಂದು ಎಚ್ಚರಿಸಿದ್ದಾರೆ.

ಈ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಕಣೇಕಲ್, ನೀಲಹಳ್ಳಿ, ಮಾಧ್ವಾರ, ಕರಿಬೆಟ್ಟ, ಸೈದಾಪುರ, ಬದ್ದೆಪಲ್ಲಿ, ದುಪ್ಪಲ್ಲಿ, ಸೌರಾಷ್ಟ್ರಹಳ್ಳಿ, ರಾಂಪುರ, ಬೆಳಗುಂದಿ, ಸಂಗವಾರ, ಬಾಲಚೇಡಗಳಿಗೂ ಅಲ್ಲದೇ ತೆಲಂಗಾಣ ರಾಜ್ಯದ ಕುಣಸಿ ಮುಂತಾದ ಹಳ್ಳಿಗಳ ವೆರೆಗೆ ಈ ಗಬ್ಬು ವಾಸನೆ ವಕ್ಕರಿಸುತ್ತಿದೆ. ಗ್ರಾಮಸ್ಥರಲ್ಲಿ ತುರಿಕೆ ಕಜ್ಜಿಯಂತಹ ರೋಗಗಳು ಸಣ್ಣಾಗಿ ಆರಂಭವಾಗಿವೆ. ಇದನ್ನು ನಿರ್ಲಕ್ಷ್ಯ ಮಾಡಿದಲ್ಲಿ ಕ್ಯಾನ್ಸರ್‌ನಂತಹ ಮಾರಕ ರೋಗಗಳಿಗೆ ಇದು ದಾರಿ ಮಾಡಿಕೊಡುತ್ತದೆ.

ADVERTISEMENT

ಇದೆಲ್ಲದಕ್ಕೂ ಕಾರಣ ಜಿಲ್ಲಾಡಳಿತ ಹಾಗೂ ಪರಿಸರ ಇಲಾಖೆ ಅಧಿಕಾರಿಗಳು ಹಣ ತಿಂದು ಪರಿಸರ ನಿರಕ್ಷೇಪಣೆ ನೀಡಿ ಅನುಮತಿ ನೀಡುತ್ತಿರುವುದರಿಂದ ಕಂಪನಿಗಳು ನೈರ್ಮಲ್ಯ ಸಂಬಂಧಿತ ಪ್ರತಿಬಂಧಕೋಪಾಯಗಳನ್ನು ಕೈಗೊಳ್ಳುತ್ತಿಲ್ಲ. ಇದಕ್ಕೆ ಜಿಲ್ಲೆಯ ಭ್ರಷ್ಟ ಪರಿಸರ ಮತ್ತು ಜಿಲ್ಲಾಡಳಿತ ಅಧಿಕಾರಿಗಳು ಅಲ್ಲದೇ ಗುರುಮಠಕಲ್ ಶಾಸಕರು ನೇರವಾಗಿ ಕಾರಣ ಎಂದು ಆರೋಪಿಸಿದರು.

ತಕ್ಷಣ ಕ್ರಮ ಕೈಗೊಂಡು ಆಗುತ್ತಿರುವ ಭ್ರಷ್ಟಾಚಾರ, ಅವ್ಯವಹಾರ ತಡೆಯಬೇಕು. ಗಬ್ಬು ವಾಸನೆ ವ್ಯಾಪಕವಾಗಿ ಹರಡುತ್ತಿದ್ದು ಇದನ್ನು ತಡೆಯಲು ತಾವುಗಳು ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಹಂತ ಹಂತವಾಗಿ ಕಾನೂನು ಹೋರಾಟ, ಬೀದಿಗಿಳಿದು ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ರಾಜ್ಯ ಕಾರ್ಯದರ್ಶಿ ವಿಜಯಕುಮಾರ ಮೊಗದಂಪುರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರಾಜ ಗುತ್ತೇದಾರ, ಜಿಲ್ಲಾ ಕಾರ್ಯಾಧ್ಯಕ್ಷ ದಶರಥ ಶೆಟ್ಟಿಗೇರಾ, ಜಿಲ್ಲಾ ಕಾರ್ಯದರ್ಶಿ ಭೀಮು ಪೂಜಾರಿ, ಕಾರ್ಯದರ್ಶಿ ಅಶೋಕರೆಡ್ಡಿ ಯಲ್ಹೇರಿ, ನಾಗರಾಜ ರಾಮಸಮುದ್ರ, ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ನವಾಜ ಖಾದ್ರಿ, ತಾಲ್ಲೂಕು ಅಧ್ಯಕ್ಷ ಶರಣು ಹೊನಿಗೇರಿ, ನಗರಾಧ್ಯಕ್ಷ ಬಸ್ಸು ಮಡಿವಾಳ, ಎಂಡಿ.ಸದ್ದಾಂ, ನಾಗಪ್ಪ ಹೊನಿಗೇರಿ, ಮಹೇಬೂಬ ಅಬ್ಬೆತುಮಕೂರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.