ಯಾದಗಿರಿ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಸಿದ್ಧತೆ ನಡೆದಿದ್ದು, ಕಳಪೆ ಬಿತ್ತನೆ ಬೀಜ, ರಸಗೊಬ್ಬರ ಕಡಿವಾಣ ಸವಾಲಾಗಿದೆ. ಪ್ರತಿವರ್ಷವೂ ಮುಂಗಾರು, ಹಿಂಗಾರು ಹಂಗಾಮಿನಲ್ಲಿ ನಕಲಿ ಬಿತ್ತನೆ ಬೀಜ, ರಸಗೊಬ್ಬರ, ಕ್ರಿಮಿನಾಶಕಗಳಿಗೆ ಕಡಿವಾಣ ಬಿದ್ದಿಲ್ಲ.
ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಉತ್ತಮವಾಗಿ ಮಳೆಯಾಗಿರುವುದರಿಂದ ರೈತರು ತಮ್ಮ ಹೊಲವನ್ನು ಹದ ಮಾಡಿಕೊಂಡು ಬಿತ್ತನೆಗೆ ಸಿದ್ಧತೆ ಕೈಗೊಂಡಿದ್ದಾರೆ.
ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ವಾಣಿಜ್ಯ ಬೆಳೆಯಾದ ಹತ್ತಿಯನ್ನು ಹೆಚ್ಚಾಗಿ ರೈತರು ಬೆಳೆಯುತ್ತಾರೆ. ಆದರೆ, ನಕಲಿ ಹತ್ತಿ ಬೀಜ ಮಾರಾಟ ಮಾಡುವ ಆತಂಕ ರೈತರಲ್ಲಿ ಕಾಡುತ್ತಿದೆ.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಹೆಸರು, ತೊಗರಿ ಹಾಗೂ ಹತ್ತಿ ಬೀಜ ಬಿತ್ತನೆ ಮಾಡುತ್ತಾರೆ. ಕೆಲ ದಂಧೆಕೋರರು ಕಳಪೆ ಮಟ್ಟದ ಬೀಜ ತಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಕೃತ್ಯದಲ್ಲಿ ತೊಡಗುತ್ತಾರೆ. ಇದು ರೈತರಿಗೆ ನುಂಗಲಾರದ ತುತ್ತಾಗಿದೆ.
ಜಿಲ್ಲೆಯು ತೆಲಂಗಾಣ ಗಡಿ ಹಂಚಿಕೊಂಡಿದ್ದು, ಕಳಪೆ ಬಿತ್ತನೆ ಬೀಜ, ರಸಗೊಬ್ಬರ ಅಲ್ಲಿಂದ ಅಕ್ರಮವಾಗಿ ಸರಬರಾಜು ಆಗುತ್ತದೆ ಎನ್ನುವ ಆರೋಪ ಸಾಮಾನ್ಯವಾಗಿದೆ. ಹೀಗಾಗಿ ಕೃಷಿ ಇಲಾಖೆ ಬಿತ್ತನೆ ಮುನ್ನವೇ ರೈತರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ನೀಡುವ ಮಾಹಿತಿಯಾಗಿದೆ.
ರಾಜ್ಯದ ವಿವಿಧ ತಳಿಯ ಹತ್ತಿ ಬೀಜ ತಯಾರಿಕಾ ಕಂಪನಿ ಬೀಜಗಳು ಶಹಾಪುರ ನಗರದಲ್ಲಿ ಲಭ್ಯವಿದೆ. ಜಿಲ್ಲೆಯ ಸುರಪುರ, ವಿಜಯಪುರ ಜಿಲ್ಲೆಯ ಸಿಂದಗಿ ಹಾಗೂ ಕಲಬುರಗಿ ಜಿಲ್ಲೆಯ ಜೇವರ್ಗಿ, ರಾಯಚೂರು ಜಿಲ್ಲೆ ದೇವದುರ್ಗ ಸೇರಿದಂತೆ ಹಲವು ಕಡೆಯಿಂದ ರೈತರು ಆಗಮಿಸಿ ಬೀಜ ಖರೀದಿಸುತ್ತಾರೆ. ಅಲ್ಲದೆ ಇಲ್ಲಿನ ಪ್ರದೇಶದಲ್ಲಿ ಆಂಧ್ರ ವಲಸಿಗರು ನೆಲೆಸಿದ್ದಾರೆ. ಹೀಗಾಗಿ ಇಲ್ಲಿ ಕಳಪೆ ಬಿತ್ತನೆ ಬೀಜ ಮಾರಾಟವೂ ಸಾಮಾನ್ಯವಾಗಿದೆ ಎನ್ನುವುದು ಈ ಭಾಗದ ರೈತ ಮುಖಂಡರ ಅಭಿಪ್ರಾಯವಾಗಿದೆ.
‘ಕೆಲ ವ್ಯಕ್ತಿಗಳು ತೆಲಂಗಾಣ, ಹೈದರಾಬಾದ್ ಮುಂತಾದ ಕಡೆಯಿಂದ ಖುಲ್ಲಾ ಹತ್ತಿ ಬೀಜ ತಂದು ಕಡಿಮೆ ದರದಲ್ಲಿ ರೈತರಿಗೆ ಮಾರಾಟ ಮಾಡುತ್ತಾರೆ. ಅದು ಪ್ರತಿ ವಾರ ಶುಕ್ರವಾರ ನಡೆಯುವ ಸಂತೆಯಲ್ಲಿ ಕದ್ದುಮುಚ್ಚಿ ವ್ಯಾಪಾರದ ಭರಾಟೆ ಅಧಿಕವಾಗಿರುತ್ತದೆ. ರೈತರು ಇಂಥ ಬೀಜವನ್ನು ಖರೀದಿಸಬಾರದು’ ಎನ್ನುವುದು ರೈತಮುಖಂಡರ ಮನವಿಯಾಗಿದೆ.
ಶಹಾಪುರ ತಾಲ್ಲೂಕಿನಲ್ಲಿ ಹೆಚ್ಚು: ರಾಜ್ಯದ ವಿವಿಧ ತಳಿಯ ಹತ್ತಿ ಬೀಜ ತಯಾರಿಕಾ ಕಂಪನಿ ಬೀಜಗಳು ಶಹಾಪುರದಲ್ಲಿ ಸಿಗುತ್ತವೆ. ಇದರಿಂದ ನಕಲಿಗೆ ಇದು ರಹದಾರಿ ಎನ್ನುವಂತೆ ಆಗಿದೆ. ಅಲ್ಲದೇ ಕಡಿಮೆ ದರಕ್ಕೆ ಮಾರಾಟ ಮಾಡುವುದರಿಂದ ರೈತರು ಆಸೆಬಿದ್ದು ಖರೀದಿಸುವುದು ಸಾಮಾನ್ಯವಾಗಿದೆ.
‘ರೈತರಿಗೆ ಕಳಪೆ ಬೀಜ ಮತ್ತು ಗೊಬ್ಬರದ ಬಗ್ಗೆ ಮನದಟ್ಟಾಗುವಂತೆ ಮಾಹಿತಿ ನೀಡಬೇಕು. ಅದನ್ನು ಖರೀದಿಸದಂತೆ ಸಲಹೆ ನೀಡಬೇಕು. ರೈತರು ಮಾರುಕಟ್ಟೆಗೆ ಬಿತ್ತನೆ ಬೀಜ ಮತ್ತು ಗೊಬ್ಬರ ಖರೀದಿಸುವ ಸಮಯದಲ್ಲಿ ಅವುಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕು. ಕೃಷಿ ಅಧಿಕಾರಿಗಳು ಪೊಲೀಸರ ಸಹಾಯ ತೆಗೆದುಕೊಂಡು ಪ್ರತಿ ಹಳ್ಳಿಯಲ್ಲಿ ನಡೆಯುತ್ತಿರುವ ಕಳಪೆ ಬೀಜದ ಹಾಗೂ ಗೊಬ್ಬರ ಮಾರಾಟ ತಡೆಹಿಡಿಯಬೇಕು’ ಎನ್ನುತ್ತಾರೆ ರೈತ ಮುಖಂಡ ಮಲ್ಲಿಕಾರ್ಜುನ ಹೊಸಮನಿ.
ಕೃಷಿ ಇಲಾಖೆಯ ಜಾಗೃತದಳದ ಅಧಿಕಾರಿಗಳು ಎಲ್ಲಾ ರಸಗೊಬ್ಬರ ಮಳಿಗೆಗಳನ್ನು ತಪಾಸಣೆ ಮಾಡುತ್ತಿದ್ದಾರೆ. ತಪ್ಪಿತಸ್ಥ ಮಾರಾಟಗಾರರು ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಜಿಲ್ಲೆಯಲ್ಲಿ ಕಳಪೆ ಬೀಜ ರಸಗೊಬ್ಬರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಮುಂಗಾರು ಹಂಗಾಮು ಆರಂಭವಾಗಿದ್ದು ರೈತರು ಬಿತ್ತನೆ ಬೀಜ ಖರೀದಿಸುವ ಮುನ್ನ ಎಚ್ಚರ ವಹಿಸಬೇಕುರತೇಂದ್ರನಾಥ ಸೂಗೂರು ಜಂಟಿ ಕೃಷಿ ನಿರ್ದೇಶಕ
ಜಿಲ್ಲೆಯಲ್ಲಿ ಕಳಪೆ ಬಿತ್ತನೆ ಬೀಜ ರಸಗೊಬ್ಬರ ಮಾರಾಟ ಮಾಡುವುದು ಕಂಡುಬಂದಲ್ಲಿ ಕೃಷಿ ಇಲಾಖೆ ಜೊತೆಗೂಡಿ ಕ್ರಮ ಕೈಗೊಳ್ಳಲಾಗುವುದುಪೃಥ್ವಿಕ್ ಶಂಕರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ನಡೆಯದ ಕೆಡಿಪಿ ಸಭೆ
ಜಿಲ್ಲೆಯಲ್ಲಿ ಹಲವು ತಿಂಗಳಿಂದ ಕರ್ನಾಟಕ ಅಭಿವೃದ್ಧಿ ಕಾಮಗಾರಿ ತ್ರೈಮಾಸಿಕ ಸಭೆ (ಕೆಡಿಪಿ) ನಡೆಯದ ಕಾರಣ ಜಿಲ್ಲೆಯ ಹಲವಾರು ಸಮಸ್ಯೆಗಳಿಗೆ ಗಂಭೀರ ಚಿಂತನೆ ನಡೆದಿಲ್ಲ. ಜಿಲ್ಲೆಯಲ್ಲಿ 6 ತಾಲ್ಲೂಕು 16 ಹೋಬಳಿಗಳಿದ್ದು ಕೃಷಿ ಇಲಾಖೆಯಲ್ಲಿ ಹಲವು ಹುದ್ದೆಗಳು ಖಾಲಿ ಇರುವುದರಿಂದ ಕೃಷಿ ಇಲಾಖೆಯಲ್ಲಿ ಕಾರ್ಯಕ್ರಮಗಳು ಆನುಷ್ಠಾನಕ್ಕೆ ತರಲು ಕಷ್ಟಸಾಧ್ಯವಾಗುತ್ತಿದೆ ಎಂದು ಇಲಾಖೆ ಅಧಿಕಾರಿಗಳೇ ಹೇಳುವ ಮಾತಾಗಿದೆ. ಕೆಡಿಪಿ ಸಭೆ ನಡೆಸಿ ಹುದ್ದೆಗಳ ಭರ್ತಿಗೆ ಕ್ರಮಗೊಳ್ಳಬೇಕು. ಆದರೆ ಇದು ಆಗುತ್ತಿಲ್ಲ. ಜಿಲ್ಲೆಯಲ್ಲಿ ಕಂದಾಯ ವಿಭಾಗದಲ್ಲಿ 6 ತಾಲ್ಲೂಕುಗಳಿದ್ದರೂ ಕೃಷಿ ಇಲಾಖೆಯಲ್ಲಿ ಇನ್ನೂ ವಿಕೇಂದ್ರೀಕರಣ ಆಗಿಲ್ಲ. ಇದರಿಂದ ಯಾದಗಿರಿ–ಗುರುಮಠಕಲ್ ಶಹಾಪುರ–ವಡಗೇರಾ ಸುರಪುರ–ಹುಣಸಗಿ ತಾಲ್ಲೂಕುಗಳನ್ನು ಒಂದೇ ತಾಲ್ಲೂಕಾಗಿ ಪರಿಗಣಿಸಲಾಗಿದೆ. ಇದರಿಂದ ಹಳೆ ತಾಲ್ಲೂಕು ಲೆಕ್ಕದಲ್ಲಿ ಮಾತ್ರ ಪರಿಗಣನೆ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.