ADVERTISEMENT

ಕುಟುಂಬ ಕಲಹ: ಪತ್ನಿ, ಅತ್ತೆ, ಮಾವನನ್ನು ಕೊಲೆ ಮಾಡಿದ ಅಳಿಯ

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 18:45 IST
Last Updated 18 ಜುಲೈ 2024, 18:45 IST
ಅನ್ನಪೂರ್ಣ
ಅನ್ನಪೂರ್ಣ   

ಸೈದಾಪುರ (ಯಾದಗಿರಿ ಜಿಲ್ಲೆ): ಕೌಟುಂಬಿಕ ಸಮಸ್ಯೆ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಪತ್ನಿ, ಅತ್ತೆ ಹಾಗೂ ಮಾವವನ್ನು ಬುಧವಾರ ಕೊಲೆ ಮಾಡಿದ್ದಾನೆ.

ಯಾದಗಿರಿ ತಾಲ್ಲೂಕಿನ ಮುನಗಾಲ ಗ್ರಾಮದ ನಿವಾಸಿ ನವೀನ್ ದೇವಿಂದ್ರಪ್ಪ (35) ಕುಟುಂಬದಲ್ಲಿ ಉಂಟಾದ ಕಲಹದ ಕಾರಣಕ್ಕೆ ಪತ್ನಿ ಅನ್ನಪೂರ್ಣ (25), ಅತ್ತೆ ಕವಿತಾ (45) ಹಾಗೂ ಮಾವ ಬಸವರಾಜಪ್ಪ (52) ಅವರನ್ನು ಕೊಲೆ ಮಾಡಿದ್ದಾನೆ. ಕೊಲೆಯಾದ ಮೂವರೂ ದಾವಣಗೆರೆ ಮೂಲದವರಾಗಿದ್ದಾರೆ.

ಘಟನೆ ವಿವರ: ನಾಲ್ಕು ವರ್ಷಗಳ ಹಿಂದೆ ಪ್ರೀತಿಸಿ ದಾವಣಗೆರೆ ಮೂಲದ ಅನ್ನಪೂರ್ಣ ಅವರನ್ನು ನವೀನ್ ಮದುವೆಯಾಗಿದ್ದ. ದಂಪತಿಗೆ ಒಂದು ಗಂಡು ಮಗು ಇದೆ.

ADVERTISEMENT

ಒಂದು ವರ್ಷದ ಹಿಂದೆ ಗಂಡನ ಕಿರುಕುಳ ತಾಳಲಾರದೆ ಅನ್ನಪೂರ್ಣ ತವರು ಮನೆಗೆ ಹೋಗಿ ತಂದೆ–ತಾಯಿ ಜೊತೆಗೆ ವಾಸವಾಗಿದ್ದರು. ಜೊತೆಗೆ ಇರೋಣ ಎಂದು ನವೀನ್‌ ಕರೆದಿದ್ದರಿಂದ ನ್ಯಾಯ ಪಂಚಾಯಿತಿ ಮಾಡಿದ ಬಳಿಕ ಅನ್ನಪೂರ್ಣ ಪೋಷಕರ ಜೊತೆಗೆ ಬುಧವಾರ ಸೈದಾಪುರಕ್ಕೆ ಬಂದಿದ್ದರು. ಶಹಾಪುರ ತಾಲ್ಲೂಕಿನ ಮನಗನಾಳ–ಖಾನಾಪುರ ನಡುವೆ ಬುಧವಾರ ರಾತ್ರಿ ಕಬ್ಬಿಣದ ರಾಡ್ ಹಾಗೂ ಚಾಕುನಿಂದ ಇರಿದು ಮೂವರನ್ನು ನವೀನ್‌ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತದೇಹಗಳನ್ನು ಕಾರಿನಲ್ಲಿ ತೆಗೆದುಕೊಂಡು ಹೋಗಿದ್ದ ನವೀನ್‌, ಸಂಗಮ–ಗೋನಾಲ ನಡುವೆ ಮಾವನ ಶವವನ್ನು ಹಾಗೂ ಬೆಂಡೆಬೆಂಬಳಿ–ಜೋಳದಡಿಗಿ ರಸ್ತೆ ಪಕ್ಕದ ಮುಳ್ಳು ಕಂಟಿಯಲ್ಲಿ ಪತ್ನಿ ಮತ್ತು ಅತ್ತೆಯ ಮೃತದೇಹಗಳನ್ನು ಎಸೆದಿದ್ದಾನೆ. ಮೂವರ ಮೃತದೇಹಗಳು ಗುರುವಾರ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕವಿತಾ
ಬಸವರಾಜಪ್ಪ
ನವೀನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.