ADVERTISEMENT

ರೈತರಿಗೆ ಸಿಹಿ–ಕಹಿ ಬಡಿಸುತ್ತಿರುವ ವರುಣ

ವಾಡಿಕೆಗಿಂತ ಅತ್ಯಧಿಕ ಮಳೆ: ರಾಶಿಯಾಗದ ಹೆಸರು ಕಾಳು, ಹತ್ತಿ, ತೊಗರಿ ಬೆಳೆಗಳಿಗೆ ರೋಗ ಭೀತಿ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 6:42 IST
Last Updated 19 ಆಗಸ್ಟ್ 2025, 6:42 IST
ಯಾದಗಿರಿ ಹೊರ ವಲಯದ ಜಮೀನಿನನಲ್ಲಿ ನಿಂತಿರುವ ಮಳೆ ನೀರು
ಯಾದಗಿರಿ ಹೊರ ವಲಯದ ಜಮೀನಿನನಲ್ಲಿ ನಿಂತಿರುವ ಮಳೆ ನೀರು   

ಯಾದಗಿರಿ: ಸತತವಾಗಿ ಸುರಿಯುತ್ತಿರುವ ಮಳೆ ರೈತ ಸಮುದಾಯದಲ್ಲಿ ಸಿಹಿ–ಕಹಿ ಅನುಭವ ನೀಡಿದೆ. ಭತ್ತಕ್ಕೆ ಸಮೃದ್ಧವಾಗುತ್ತಿದ್ದರೆ ಮತ್ತೊಂದೆಡೆ ಹತ್ತಿ, ಸಜ್ಜೆ, ಉದ್ದು, ತೊಗರಿಯಂತಹ ಬೆಳೆಗಳಿಗೆ ಹಾನಿಯ ಭೀತಿ ಆವರಿಸಿದೆ.

ಈ ಬಾರಿ ಪೂರ್ವ ಮುಂಗಾರು ಮಳೆ ಉತ್ತಮವಾಗಿ ಬಿತ್ತು. ಜತೆಗೆ ಕೃಷ್ಣಾ ಜಲಾನಯನ ಪ್ರದೇಶದ ಕಾಲುವೆಗಳಲ್ಲಿ ಒಂದು ತಿಂಗಳು ಮುಂಚಿತವಾಗಿಯೇ ನೀರು ಹರಿಸಿದ್ದರಿಂದ ಕೃಷಿಕರು ಭರದಿಂದ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದರು. ಕಳೆದೊಂದು ವಾರದಿಂದ ಸುರಿಯುತ್ತಿರುವ ಜೋರು ಮಳೆಯು ರೈತರನ್ನು ಆತಂಕಕ್ಕೆ ತಳ್ಳಿದೆ.

13,178 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆಯಾಗಿ ರಾಶಿಯು ಕೊನೆಯ ಹಂತಕ್ಕೆ ಬಂದಿದ್ದರೂ ಮಳೆಯ ಹೊಡೆತದಿಂದ ಪಾರಾಗಿಲ್ಲ. ಈಗಾಗಲೇ ಶೇ 70 ಪ್ರದೇಶದಲ್ಲಿ ಹೆಸರು ಕಾಳು ರಾಶಿಯಾಗಿ ಮಾರುಕಟ್ಟೆಗೆ ಬಂದಿದೆ. ಉಳಿದರುವ ಶೇ 30ರಷ್ಟು ಹೆಸರು ಬೆಳೆಗಳು ಮಳೆಗೆ ಸಿಲುಕಿವೆ. ಸತತ ಮಳೆಯಿಂದಾಗಿ ಗಿಡದಲ್ಲಿ ಇರುವಾಗಲೇ ಕಾಳುಗಳು ಮೊಳಕೆಯೊಡೆಯುವ ಸಾಧ್ಯತೆ ಇದೆ. ಮಳೆ ಬಿಡುವು ಕೊಟ್ಟ ಬಳಿಕ ರಾಶಿ ಮಾಡಿದರೂ ಅವು ಕಪ್ಪಾಗುವ ಕಳವಳ ಬೆಳೆಗಾರರದ್ದು.

ADVERTISEMENT

ಮಳೆಯಿಂದ ಹಳ್ಳ–ಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ಹಳ್ಳದ ದಂಡೆಯಲ್ಲಿರುವ ತಗ್ಗು ಪ್ರದೇಶದ ಜಮೀನುಗಳಿಗೆ ನೀರು ನುಗ್ಗಿ ಬೆಳೆಗಳಿಗೆ ಆಪತ್ತು ತರುತ್ತಿವೆ. ಸೌದಾಗರ ಜಲಾಶಯ ಕೋಡಿಯ ನೀರು ಸೌದಾಗರ ತಾಂಡಾದ ಭತ್ತದ ಗದ್ದೆಗೆ ನುಗ್ಗಿ, ಕೆರೆಯಂತೆ ನಿಂತಿವೆ. ನಾಟಿಯಾಗಿರುವ ಭತ್ತ ಬೆಳೆಗಳು ನೀರಿನಲ್ಲಿ ಮುಳುಗಡೆಯಾಗಿವೆ. ಇಂತಹ ದೃಶ್ಯಗಳು ಬಹುತೇಕ ಕಡೆ ಸಾಮಾನ್ಯವಾಗಿದೆ.

ತೊಗರಿ, ಶೇಂಗಾ, ಹತ್ತಿ, ಸಜ್ಜೆ ಬೆಳೆದಿರುವ ಹೊಲಗಳಲ್ಲಿಯೂ ಮಳೆಯ ನೀರು ಕೆರೆಯಂತೆ ನಿಂತಿದೆ. ತೇವಾಂಶ ಹೆಚ್ಚಳವಾಗಿ ಬೆಳೆಗಳಿಗೆ ಎಲೆ ಚುಕ್ಕೆ ರೋಗ ತಗುಲುವ ಆಂತಕ ಸಹಜವಾಗಿ ರೈತರಲ್ಲಿ ಮನೆ ಮಾಡಿದೆ. ಕೆಲವು ಜಮೀನುಗಳಲ್ಲಿ ಬೆಳೆಗಳಿಗಿಂತ ಎತ್ತರವಾಗಿ ಕಳೆ ಗಿಡಗಳು ಬೆಳೆದಿವೆ. ಮೊಣಕಾಲುದ್ದು ಕೆಸರಿನಿಂದಾಗಿ ರೈತರು ಹೊಲಗಳಿಗೆ ಕಾಲಿಡದಂತೆ ಆಗಿದೆ.

‘ವಾರದಿಂದ ಸುರಿಯುತ್ತಿರುವ ಮಳೆ ನಮ್ಮನ್ನು ಹಣ್ಣುಗಾಯಿ ನೀರುಗಾಯಿ ಮಾಡಿದೆ. ದನಗಳು ನೀರು, ಕೆಸರು ಹತ್ತಿರುವ ಹಸಿ ಮೇವು ತಿನ್ನುತ್ತಿಲ್ಲ. ಮನೆಯಲ್ಲಿ ಕಟ್ಟಿ ಹಾಕಿ ಹೊಟ್ಟೆ ತುಂಬಿಸುವಷ್ಟು ಒಣ ಮೇವು ಎಲ್ಲರ ಬಳಿಯೂ ಇಲ್ಲ. ಹುಲ್ಲನ್ನು ಕೊಯ್ದು ತಂದು, ನೀರು ಜಾಡಿಸಿ ಜಾನುವಾರುಗಳಿಗೆ ಹಾಕುತ್ತಿದ್ದೇವೆ’ ಎನ್ನುತ್ತಾರೆ ರೈತ ಶಾಣಪ್ಪ ಯಡ್ಡಳ್ಳಿ.

ರತೀಂದ್ರನಾಥ ಸೂಗೂರ

‘ಮಳೆ ನಿಂತ ಬಳಿಕ ಹಾನಿಯ ಸಮೀಕ್ಷೆ’ ‘

ಆಗಸ್ಟ್‌ ತಿಂಗಳಲ್ಲಿನ ಇದುವರೆಗೂ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಆಗಸ್ಟ್ 23ರ ವರೆಗೆ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಸಂಪೂರ್ಣವಾಗಿ ಮಳೆ ನಿಂತ ಬಳಿಕ ಬೆಳೆ ಹಾನಿಯ ಸಮೀಕ್ಷೆ ಮಾಡಿ ವರದಿ ಸಿದ್ಧಪಡಿಸಲಾಗುವುದು’ ಎಂದು ಜಂಟಿ ಕೃಷಿ ನಿರ್ದೇಶಕ ರತೇಂದ್ರನಾಥ ಸೂಗುರ ‘ಪ್ರಜಾವಾಣಿ’ಗೆ ತಿಳಿಸಿದರು. ‘ಕೃಷಿ ಇಲಾಖೆಯ ಸಿಬ್ಬಂದಿ ಮಳೆ ಸಂಬಂಧಿತ ಹಾನಿಯ ಮೇಲೆ ನಿಗಾ ಇರಿಸಿದ್ದಾರೆ. ಮಳೆ ಬಿಡುವಿಗಾಗಿ ಎದುರು ನೋಡುತ್ತಿದ್ದೇವೆ. ಮಳೆ ನೀರಿನಿಂದ ಬೆಳೆಗಳನ್ನು ಉಳಿಸಿಕೊಳ್ಳಲು ಜಮೀನುಗಳಲ್ಲಿ ನೀರು ನಿಲ್ಲದಂತೆ ಬಸಿಗಾಲುವೆ ಮೂಲಕ ಹೊರ ಹರಿಸಬೇಕು’ ಎಂದರು.

‘ಮಳೆ ನಿಂತ ಮೇಲೆ ಯೂರಿಯಾ ನೀಡಿ’

‘ನೀರು ನಿಲುಗಡೆಯಿಂದ ತೇವಾಂಶ ಹೆಚ್ಚಾದಾಗ ಯಾವುದೇ ಬೆಳೆಗಳಿಗೆ ಉಸಿರಾಡಲು ಆಗಲ್ಲ. ಪೋಷಕಾಂಶಗಳನ್ನು ಹೀರಿಕೊಳ್ಳುವುದು ಆಗುವುದಿಲ್ಲ. ಮಳೆ ನಿಂತ ಬಳಿಕ ಎಲೆಗಳ ಮೂಲಕ ಬೆಳೆಗಳಿಗೆ ಪೋಷಕಾಂಶಕ್ಕಾಗಿ ಯೂರಿಯಾ ಅಥವಾ ನ್ಯಾನೊ ಯೂರಿಯಾ ಕೊಡಬೇಕು’ ಎಂದು ಕೃಷಿ ವಿಜ್ಞಾನ ರಾಜು ಜಿ.ತೆಗ್ಗಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ನೀರಿನಿಂದಾಗಿ ತೊಗರಿಗೆ ಫೈಟೋಪ್ತಾರಾ ಮಚ್ಚೆ ರೋಗ ಬರುತ್ತದೆ. ಬಿಸಿಲು ಬಿದ್ದ ಬಳಿಕ ತೊಗರಿ ಗಿಡಗಳು ಗಂಟುಗೊಂಡು ಗಾಳಿಗೆ ಮುರಿದು ಬೀಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಹೊಲದಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಬೋದು ಪದ್ಧತಿಯಲ್ಲಿ ಬಿತ್ತನೆ ಮಾಡಿದರೆ ಶೇ 50ರಷ್ಟು ಹಾನಿಯನ್ನು ತಪ್ಪಿಸಬಹುದು’ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.