ADVERTISEMENT

ಕೃಷಿ ಉತ್ಪನ್ನ; ಲಾಭದಾಯಕ ಬೆಲೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಜನವರಿ 2022, 5:49 IST
Last Updated 12 ಜನವರಿ 2022, 5:49 IST
ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಘೋಷಿಸುವಂತೆ ಆಗ್ರಹಿಸಿ ಸುರಪುರದಲ್ಲಿ ಮಂಗಳವಾರ ಭಾರತೀಯ ಕಿಸಾನ್ ಸಂಘದ ಮುಖಂಡರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು
ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಘೋಷಿಸುವಂತೆ ಆಗ್ರಹಿಸಿ ಸುರಪುರದಲ್ಲಿ ಮಂಗಳವಾರ ಭಾರತೀಯ ಕಿಸಾನ್ ಸಂಘದ ಮುಖಂಡರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು   

ಸುರಪುರ: ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಘೋಷಿಸಬೇಕು ಎಂದು ಆಗ್ರಹಿಸಿ ಮಂಗಳವಾರ ಭಾರತೀಯ ಕಿಸಾನ್ ಸಂಘದ ಮುಖಂಡರು ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಈ ವೇಳೆ ತಾಲ್ಲೂಕು ಘಟಕದ ಅಧ್ಯಕ್ಷ ಅಂಬಣ್ಣ ವಾರಿ ಹಸನಾಪುರ ಮಾತನಾಡಿ, ‘ಬೇರೆ ಕ್ಷೇತ್ರಗಳ ಉತ್ಪಾದಕರು ತಮ್ಮ ಉತ್ಪನ್ನಗಳಿಗೆ ತಾವೇ ಬೆಲೆ ನಿಗದಿ ಮಾಡುತ್ತಾರೆ. ಸಾಕಷ್ಟು ಲಾಭ ಸಹ ಮಾಡಿಕೊಳ್ಳುತ್ತಾರೆ. ಆದರೆ, ಕೃಷಿಕ ತಾನು ಬೆಳೆದ ಬೆಳೆಗೆ ಬೇರೆಯವರು ದರ ನಿಗದಿಪಡಿಸುವ ಹುನ್ನಾರಕ್ಕೆ ಸಿಲುಕಿದ್ದಾನೆ’ ಎಂದರು.

‘ಮಾಹಿತಿ ತಂತ್ರಜ್ಞಾನದಲ್ಲಿದೇಶವು ಸಾಕಷ್ಟು ಪ್ರಗತಿ ಸಾಧಿಸಿದೆ. ಬೇರೆ ಕ್ಷೇತ್ರಗಳಿಗೆ ಅವಿರತ ಬೆಂಬಲ, ಪ್ರೋತ್ಸಾಹ ನೀಡುವ ಸರ್ಕಾರಗಳು ರೈತನ ಬಗ್ಗೆ ಮಲತಾಯಿ ಧೋರಣೆ ತಾಳಿವೆ. ಎಲ್ಲರಿಗೂ ಅಗತ್ಯವಾಗಿ ಬೇಕಾಗುವ ಆಹಾರ ಉತ್ಪಾದಕನನ್ನು ಬಲಿಪಶು ಮಾಡುತ್ತಿವೆ’ ಎಂದು ದೂರಿದರು.

ADVERTISEMENT

ಕಾರ್ಯದರ್ಶಿ ಸಿದ್ದಲಿಂಗಯ್ಯ ಹಿರೇಮಠ ಕಲ್ಲದೇವನಹಳ್ಳಿ ಮಾತನಾಡಿ, ‘ಸರ್ಕಾರ ಕೇವಲ ಬೆಂಬಲ ಬೆಲೆ ಘೋಷಿಸಿದರೆ ಸಾಲದು. ಲಾಭದಾಯಕ ಬೆಲೆ ನೀಡಬೇಕು. ಖರೀದಿ ಗ್ಯಾರಂಟಿ ಒದಗಿಸಬೇಕು. ಹಣದುಬ್ಬರಕ್ಕೆ ಅನುಗುಣವಾಗಿ ಪ್ರತಿ ವರ್ಷ ಬೆಲೆ ಹೆಚ್ಚಿಸಬೇಕು. ಮಂಡಿ ಒಳಗೆ ಅಥವಾ ಹೊರಗೆ ಕಡಿಮೆ ಬೆಲೆಗೆ ಖರೀದಿ ಮಾಡುವವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು’ ಎಂದು ಆಗ್ರಹಿಸಿದರು.

ರಾಷ್ಟ್ರಪತಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರಿಗೆ ಸಲ್ಲಿಸಲಾಯಿತು.
ಪ್ರಾಣೇಶ ಕುಲಕರ್ಣಿ ಕಾಮನಟಗಿ, ಗಂಗಾಧರನಾಯಕ ತಿಂಥಣಿ, ಹಯ್ಯಾಳಪ್ಪ ಗುತ್ತೇದಾರ, ಚೌಡಪ್ಪ ಯರಸಂ, ಭೀಮಣ್ಣ ಖಂಡ್ರೆ, ಹಂಪಣ್ಣ ಹಮ್ಮಡಗಿ, ತಿಪ್ಪಣ್ಣ ಕೊಂಗಂಡಿ, ಗೋಣೆಪ್ಪ ಭಂಡಿ, ಭೀಮರಾಯ ಕೊಂಡಿನಾಯಕ, ಬಸವರಾಜ ಬಡಿಗೇರ, ಶಿವಣ್ಣ ಶೆಳ್ಳಗಿ, ಶಿವನಗೌಡ ಶಖಾಪುರ ಇದ್ದರು.

ಕೃಷಿ ಕ್ಷೇತ್ರದ ನೆರವಿಗೆ ಧಾವಿಸಿ

ಶಹಾಪುರ: ರೈತರ ಉತ್ಮನ್ನಗಳಿಗೆ ಲಾಭದಾಯಕ ಬೆಲೆ ಘೋಷಣೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿ ಮಂಗಳವಾರ ಭಾರತೀಯ ಕಿಸಾನ್ ಸಂಘದ ಮುಖಂಡರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಬಳಿಕ ಮಾತನಾಡಿದ ರೈತ ಮುಖಂಡ ಯಲ್ಲಯ್ಯ ನಾಯಕ ವನದುರ್ಗ, ಜೀವನಕ್ಕೆ ಅಗತ್ಯವಾದ ಆಹಾರ ಉತ್ಪಾದನೆ ಮಾಡುವ ಕೃಷಿ ಕ್ಷೇತ್ರವು ದುಸ್ಥಿತಿಯಲ್ಲಿದೆ. ಲಾಭದಾಯಕ ಬೆಲೆ ಸಿಗದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಗ್ರಾಮೀಣ ಪ್ರದೇಶದ ರೈತರು ಕೃಷಿಯಿಂದ ವಿಮುಖರಾಗಿ ನಗರದ ಪ್ರದೇಶಕ್ಕೆ ಗುಳೆ ಹೊರಟಿದ್ದಾರೆ ಎಂದರು.

ಕೃಷಿ ಕ್ಷೇತ್ರವನ್ನು ನಿಷ್ಕಾಳಜಿ ಮಾಡದೆ ರೈತರ ನೆರವಿಗೆ ಸರ್ಕಾರ ಆಗಮಿಸಬೇಕು. ಈಗಾಗಲೇ ಕೇಂದ್ರ ಸರ್ಕಾರ ರೈತರ ಆದಾಯ ದ್ವಿಗುಣಗೊಳ್ಳಬೇಕು ಎಂಬ ಚಿಂತನೆ ಸರಿಯಾಗಿದೆ. ಆದರೆ, ಸರ್ಕಾರ ಕೇವಲ ಬೆಂಬಲ ಬೆಲೆ ಘೋಷಣೆ ಮಾಡಿದರೆ ಸಾಲದು. ರೈತರಿಗೆ ಲಾಭದಾಯ ಬೆಲೆಯ ಭರವಸೆ ನೀಡಬೇಕು ಎಂದು ಆಗ್ರಹಿಸಿದರು.

ಸಂಘದ ಮುಖಂಡರಾದ ಮಲ್ಲಿಕಾರ್ಜುನ ಅಂಗಡಿ, ಪ್ರವೀಣ ಗುಡಗುಂಟಿ, ಸೊಲಬಣ್ಣ ಸಾಹು, ಶಾಂತಗೌಡ ದಿಗ್ಗಿ, ಗುರುನಾಥ ಗಟ್ಟಿ, ಅಮೃತ ಹೂಗಾರ, ಸುಭಾಷ ತಳವಾರ, ಗಂಗಾಧರ ನಾಯಕ, ಪ್ರಾಣೇಶ ಕುಲಕರ್ಣಿ, ಸಿದ್ದಯ್ಯ ಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.