ADVERTISEMENT

ದೌರ್ಜನ್ಯ ಕಂಡುಬಂದರೆ ದೂರು ದಾಖಲಿಸಿ: ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್.

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2021, 8:54 IST
Last Updated 28 ನವೆಂಬರ್ 2021, 8:54 IST
ರಾಗಪ್ರಿಯಾ
ರಾಗಪ್ರಿಯಾ   

ಯಾದಗಿರಿ: ಮಕ್ಕಳ ಶೋಷಣೆ ತಪ್ಪಿಸುವುದು, ಮಕ್ಕಳ ಸ್ನೇಹಿ ವಾತಾವರಣ ನಿರ್ಮಿಸುವುದು ಹಾಗೂ ಕಾನೂನಿನ ಸಂಘರ್ಷಕ್ಕೆ ಒಳಪಟ್ಟ ಮತ್ತು ರಕ್ಷಣೆ, ಪೋಷಣೆ ಅಗತ್ಯವಿರುವ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ಮಾಡುವುದು ಅಧಿಕಾರಿಗಳ ಕರ್ತವ್ಯ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಹೇಳಿದರು.

ಜಿಲ್ಲಾಡಳಿತ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ವತಿಯಿಂದ ಕಚೇರಿಯ ಸಭಾಂಗಣದಲ್ಲಿ ನಡೆದ ಮಕ್ಕಳ ರಕ್ಷಣಾ ಘಟಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಕಂಡು ಬಂದರೆ ತಕ್ಷಣ ಎಫ್‌ಐಆರ್ ದಾಖಲಿಸಿ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಖಡಕ್‌ ಸೂಚಿಸಿದರು.

ADVERTISEMENT

ಮಮತೆಯ ತೊಟ್ಟಿಲು: ಜಿಲ್ಲೆಯಲ್ಲಿ ಶಿಶು ಮಕ್ಕಳ ರಕ್ಷಣೆಗಾಗಿ ಸಾರ್ವಜನಿಕ ಜನದಟ್ಟಣೆ ಇರುವ ಸ್ಥಳಗಳಲ್ಲಿ, ಜಿಲ್ಲಾ ಸರ್ಕಾರಿ ಆಸ್ಪತ್ರೆ, ರೈಲ್ವೆ ನಿಲ್ದಾಣಗಳಲ್ಲಿ ಮತ್ತು ಬಸ್ ನಿಲ್ದಾಣಗಳಲ್ಲಿ ಮಮತೆಯ ತೊಟ್ಟಿಲುಗಳನ್ನು ಇರಿಸಲಾಗಿದೆ. ಈ ಕುರಿತು ಅಧಿಕಾರಿಗಳು ಸಾರ್ವಜನಿಕರಿಗೆ ಅರಿವು ಜಾಗೃತಿ ಮೂಡಿಸಿ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸರ್ಕಾರಿ ಬಾಲಕರ ಬಾಲಮಂದಿರ: ಜಿಲ್ಲೆಯಲ್ಲಿ ಸರ್ಕಾರಿ ಬಾಲಕರ ಬಾಲಮಂದಿರ ಮಂಜೂರಾಗಿದ್ದು, ಕೇಂದ್ರ ಸರ್ಕಾರದ ಸಹಯೋಗ ದೊಂದಿಗೆ ಬಾಲಮಂದಿರ ಸಂಸ್ಥೆಯನ್ನು ಪ್ರಾರಂಭಿಸಲು ಜಿಲ್ಲೆಗೆ ಸರ್ಕಾರ ಆಡಳಿತಾತ್ಮಕ ಹಾಗೂ ಮಂಜೂರಾತಿ ಆದೇಶ ನೀಡಿದೆ. 7 ಹುದ್ದೆಗಳು ಮಂಜೂರಾಗಿದ್ದು, ಅದರಲ್ಲಿ 4 ಹುದ್ದೆಗಳು ಹೊರಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳಲು ತಿಳಿಸಿರುವುದರಿಂದ ಅರ್ಜಿ ಕರೆದಿದ್ದು, ನೇಮಕಾತಿ ಪ್ರಕ್ರಿಯೆಯಲ್ಲಿದೆ. ಬಾಲಕರ ಬಾಲಮಂದಿರ ನಡೆಸಲು ನಗರದ ಲಕ್ಷ್ಮಿನಗರದಲ್ಲಿ ಬಾಡಿಗೆ ಕಟ್ಟಡವನ್ನು ಗುರುತಿಸಲಾಗಿದೆ. ಸಂಸ್ಥೆಗೆ ಬೇಕಾಗುವ ಮೂಲಭೂತ ಅವಶ್ಯಕ ವಸ್ತುಗಳನ್ನು ವ್ಯವಸ್ಥಿತಗೊಳಿಸಿದ ನಂತರ ಪ್ರಾರಂಭಿಸಲಾಗುವುದು ಎಂದರು.

ಈಗಾಗಲೇ ಜಿಲ್ಲೆಯಲ್ಲಿ 33 ಮಕ್ಕಳನ್ನು ರಕ್ಷಣೆ ಮಾಡಿ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಯ ಹಾಜರುಪಡಿಸಲಾಗಿದೆ ಎಂದು ಸಭೆಗೆ ಅಧಿಕಾರಿಗಳು ಮಾಹಿತಿ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಹಿಲ್ ಅಹ್ಮದ್ ಕನ್ನಿಬಾವಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿ ಪ್ರಭಾಕರ್ ಕವಿತಾಳ, ಮಕ್ಕಳ ರಕ್ಷಣಾ ಅಧಿಕಾರಿ ಮಲ್ಲಣ್ಣ ದೇಸಾಯಿ ಹಾಗೂ ಜಿಲ್ಲಾ ಮಕ್ಕಳ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಇದ್ದರು.

ಕೋವಿಡ್: ಸಂತ್ರಸ್ತ ಮಕ್ಕಳಿಗೆ ಸೌಲಭ್ಯ

ಕೋವಿಡ್ ಹಾಗೂ ಇತರೆ ಕಾರಣಗಳಿಂದ ಅನಾಥರಾದ ಮತ್ತು ಏಕಪೋಷಕತ್ವ ಹೊಂದಿರುವ 135 ಮಕ್ಕಳಿಗೆ ಶಿಕ್ಷಣ ಸೌಲಭ್ಯ ನೀಡಿ, ಶಿಕ್ಷಣದಿಂದ ವಂಚಿತರಾಗದಂತೆ ಕ್ರಮ ವಹಿಸಿ ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದರು.

ಈ ಮಕ್ಕಳಿಗೆ ಪ್ರಾಯೋಜಕತ್ವ ಯೋಜನೆಯಡಿಯಲ್ಲಿ ಪ್ರತಿ ತಿಂಗಳು ₹1,000 ಸಹಾಯಧನ ನೀಡಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಬಾಲ ಸೇವಾ ಯೋಜನೆಯಡಿ ಕೋವಿಡ್‌ನಿಂದ ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡ 18 ವರ್ಷದೊಳಗಿನ ಮಕ್ಕಳಿಗೆ ರಕ್ಷಣೆ ನೀಡಿ ಪಾಲನೆ ಆರೈಕೆ ಒದಗಿಸಲಾಗುತ್ತಿದೆ. ಪ್ರತಿ ತಿಂಗಳು ₹3,500 ಧನ ಸಹಾಯವನ್ನು ಮುಖ್ಯಮಂತ್ರಿ ಬಾಲ ಸೇವಾ ಯೋಜನೆಯಡಿಯಲ್ಲಿ ನೀಡುವುದಾಗಿ ಮುಖ್ಯಮಂತ್ರಿ ಘೋಷಿಸಿರುತ್ತಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲೆಯಲ್ಲಿ ಕೋವಿಡ್‌ನಿಂದ 3 ಕುಟುಂಬದ ಪೋಷಕರು ಮರಣ ಹೊಂದಿದ್ದು, 6 ಮಕ್ಕಳು ಅನಾಥರಾಗಿರುತ್ತಾರೆ. ಈ ಮಕ್ಕಳ ಮಾಹಿತಿಯನ್ನು ಕುಟುಂಬದಿಂದ ಪಡೆದು ಜಿಲ್ಲಾ ಮಟ್ಟದ ಸಮಿತಿಯ ಮೂಲಕ ಪರಿಶೀಲಿಸಿ ಸಹಾಯಧನ ನೀಡಲು ಅನುಮೋದನೆ ಪಡೆಯಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.