ಯಾದಗಿರಿ: ಸತತ ಮಳೆ ಹಾಗೂ ಭೀಮಾ ನದಿಯ ಪ್ರವಾಹವು ನದಿ ತೀರದ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಐದಾರು ದಿನ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದ ಸಂತ್ರಸ್ತರು ವಾಪಸ್ ತಮ್ಮ ಮನೆಗಳತ್ತೆ ತೆರಳಿದರೂ ಪ್ರವಾಹ ನಂತರದ ಅವರ ಪರಿಸ್ಥಿತಿ ಬಹಳ ಬಿಗಡಾಯಿಸಿದೆ.
ಜಿಲ್ಲೆಯ ಶಹಾಪುರ, ಯಾದಗಿರಿ ಹಾಗೂ ವಡಗೇರಾ ತಾಲ್ಲೂಕಿನ ಏಳು ಗ್ರಾಮಗಳು ನದಿ ಪ್ರವಾಹದಲ್ಲಿ ಮುಳುಗಡೆಯಾದವು. 495 ಕುಟುಂಬಗಳ 1,555 ಜನರು ತೊಂದರೆಗೆ ಸಿಲುಕಿದರು. ನದಿ ಪಾತ್ರದ ಎರಡೂ ದಡ ಹತ್ತಾರು ಗ್ರಾಮಗಳ ರಸ್ತೆ ಸಂಪರ್ಕ ಕಡಿತವಾಗಿತ್ತು. ಕೆಲವೆಡೆ ರಸ್ತೆಗಳು, ಸೇತುವೆಗಳು ಕೊಚ್ಚಿಕೊಂಡು ಹೋಗಿವೆ. ಮತ್ತೆ ಕೆಲವೆಡೆಯ ಸೇತುವೆಗಳ ರಸ್ತೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ.
ದೇವಸ್ಥಾನ, ವಾಣಿಜ್ಯ ಕೇಂದ್ರಗಳು ಸೇರಿ ಸಾವಿರಾರು ಕಟ್ಟಡಗಳಿಗೆ ನೀರು ನುಗ್ಗಿದೆ. ಪ್ರವಾಹದರಿಂದಾಗಿ ಮನೆ ಗೋಡೆಗಳಲ್ಲಿಯೂ ಬಿರುಕು ಹೆಚ್ಚುತ್ತಿದೆ. ಹುರಸಗುಂಡಗಿ, ರೋಜಾ ಎಸ್. ಶಿವನೂರು, ನಾಯ್ಕಲ್, ಮಾಚನೂರು, ಅರ್ಜುಣಗಿ, ತಳಕ ಗ್ರಾಮಗಳಲ್ಲಿ ಕೆಸರು ಸಮಸ್ಯೆ ಅಧಿಕವಾಗಿದೆ.
ಪ್ರವಾಹದೊಂದಿಗೆ ಕೊಚ್ಚಿಕೊಂಡು ಬಂದಿರುವ ಕೆಸರು ಜನ ವಸತಿಗಳ ಸುತ್ತ ಆವರಿಸಿದೆ. ಕೆಲವು ಜಲಚರ ಪ್ರಾಣಿಗಳು ಅಲ್ಲಲ್ಲಿ ಸತ್ತು ಬಿದ್ದಿವೆ. ಇದರಿಂದ ಸಹಿಸಲಸಾಧ್ಯವಾದಷ್ಟು ವಾಸನೆ ಹಬ್ಬುತ್ತಿದೆ. ತಗ್ಗುಪ್ರದೇಶದ ಬಾವಿಗಳಿಗೆ ಪ್ರವಾಹದ ಕೆಸರು ಮಿಶ್ರಿತ ನೀರು ಸೇರಿಕೊಂಡಿದ್ದು, ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ.
ಏಕಾಏಕಿ ಉಕ್ಕಿ ಹರಿದು ನದಿಯ ಪ್ರವಾಹಕ್ಕೆ ಭಯಪಟ್ಟ ಕೆಲವು ಜನರು ತಾವು ಉಟ್ಟ ಬಟ್ಟೆಯಲ್ಲೇ ಕಾಳಜಿ ಕೇಂದ್ರಗಳನ್ನು ಸೇರಿದ್ದರು. ಮನೆಯಲ್ಲಿ ಇರಿಸಿದ್ದ ಬಟ್ಟೆಗಳು, ವರ್ಷಕ್ಕೆ ಆಗುವಷ್ಟು ಕೂಡಿ ಇರಿಸಿದ್ದ ದವಸ ಧಾನ್ಯಗಳು ಪ್ರವಾಹಕ್ಕೆ ಕೊಚ್ಚಿ ಹೋಗಿವೆ. ಹೊಸ ಬದುಕು ಕಟ್ಟಿಕೊಳ್ಳುವುದು ನೆರೆ ಸಂತ್ರಸ್ತರಿಗೆ ಸವಾಲಾಗಿದೆ.
ಪ್ರವಾಹದ ನೀರು ಹಾಗೂ ಹಳ್ಳಗಳ ಮೂಲಕ ಹಿನ್ನೀರು ಸಾವಿರಾರು ಹೆಕ್ಟೇರ್ ವರೆಗೆ ವ್ಯಾಪಿಸಿಕೊಂಡಿತ್ತು. ಇದರಿಂದ ಹತ್ತಿ, ಭತ್ತ, ತೊಗರಿ, ಸೂರ್ಯಕಾಂತಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ. ಇಳುವರಿ ಕೊಡುವ ಹೊಸ್ತಿಲಲ್ಲಿದ್ದ ಹತ್ತಿಗಿಡಗಳು ಒಣಗಿ ಹಸ್ತಿಪಂಜರದಂತೆ ಕಾಣುತ್ತಿವೆ.
‘ನೆರೆಯಿಂದ ಹಾವು, ಚೇಳುಗಳು ಮನೆಯಲ್ಲಿ ಕಾಣಿಸಿಕೊಳ್ಳುತ್ತಿವೆ. ಜೀವ ಭಯದಲ್ಲಿ ರಾತ್ರಿ ಸರಿಯಾಗಿ ನಿದ್ರೆ ಮಾಡಲು ಆಗುತ್ತಿಲ್ಲ. ಪ್ರತಿ ಬಾರಿ ನೆರೆ ಬಂದು ಇಳಿದಾಗ ಇದು ಸಾಮಾನ್ಯವಾಗಿದೆ. ಆದರೆ, ನಮ್ಮ ಬಗ್ಗೆ ರಾಜಕಾರಣಿಗಳು, ಅಧಿಕಾರಿಗಳು ಗಮನ ಹರಿಸುತ್ತಿಲ್ಲ’ ಎಂದು ಹುರಸಗುಂಡಗಿಯ ಸಂತ್ರಸ್ತ ಮಹಾಲಿಂಗಪ್ಪ ನಾಯ್ಕಲ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.