ADVERTISEMENT

ಡಾ.ಮುದ್ನಾಳ ಕೊಡುಗೆ ಸ್ಮರಣೀಯ: ಸಚಿವ ದರ್ಶನಾಪುರ ಬಣ್ಣನೆ

ಮಾಜಿ ಶಾಸಕ ವೀರಬಸವಂತರೆಡ್ಡಿ ಪುಣ್ಯಸ್ಮರಣೆ: ಸಚಿವ ದರ್ಶನಾಪುರ ಬಣ್ಣನೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 5:58 IST
Last Updated 24 ಜುಲೈ 2025, 5:58 IST
ಯಾದಗಿರಿ ಹತ್ತಿರದ ಮುದ್ನಾಳ ಗ್ರಾಮದಲ್ಲಿನ ಮಂಗಳವಾರ ಮಾಜಿ ಶಾಸಕ ಲಿಂ.ಡಾ.ವೀರಬಸವಂತರೆಡ್ಡಿ ಮುದ್ನಾಳ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಚಿವ ಶರಣಬಸಪ್ಪ ದರ್ಶನಾಪುರ ಮಾತನಾಡಿದರು
ಯಾದಗಿರಿ ಹತ್ತಿರದ ಮುದ್ನಾಳ ಗ್ರಾಮದಲ್ಲಿನ ಮಂಗಳವಾರ ಮಾಜಿ ಶಾಸಕ ಲಿಂ.ಡಾ.ವೀರಬಸವಂತರೆಡ್ಡಿ ಮುದ್ನಾಳ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಚಿವ ಶರಣಬಸಪ್ಪ ದರ್ಶನಾಪುರ ಮಾತನಾಡಿದರು   

ಯಾದಗಿರಿ: ‘ಜಿಲ್ಲೆಯ ಅಭಿವೃದ್ಧಿಯಲ್ಲಿ ಮಾಜಿ ಶಾಸಕ ದಿ.ಡಾ.ವೀರಬಸವಂತರಡ್ಡಿ ಮುದ್ನಾಳ ಅವರ ಕೊಡುಗೆ ಅಪಾರವಾಗಿದೆ. ಜತೆಗೆ ವೈದ್ಯರಾಗಿಯೂ ಅವರು ನೀಡಿದ ಕೊಡುಗೆ ಸ್ಮರಣೀಯವಾದುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅಭಿಪ್ರಾಯಪಟ್ಟರು.

ಇಲ್ಲಿಗೆ ಸಮೀಪದ ಮುದ್ನಾಳ ಗ್ರಾಮದ ಡಾ.ವೀರಬಸವಂತರಡ್ಡಿ ಮುದ್ನಾಳ ಅವರ ಸಮಾಧಿಯ ಹತ್ತಿರ ಮಂಗಳವಾರ ಆಯೋಜಿಸಿದ್ದ ಮಾಜಿ ಶಾಸಕ ದಿ.ಡಾ.ವೀರಬಸವಂತರೆಡ್ಡಿ ಅವರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮ, ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಸಚಿವ ಸ್ಥಾನ ಅಥವಾ ಸರ್ಕಾರದಲ್ಲಿ ಇತರೆ ಯಾವುದೇ ಪ್ರಮುಖ ಸ್ಥಾನ ನೀಡುವ ಬದಲಿಗೆ ಯಾದಗಿರಿಯನ್ನು ಜಿಲ್ಲಾ ಕೇಂದ್ರವಾಗಿಸಿ ಎಂದು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಹೇಳುವ ಜತೆಗೆ, ಯಾದಗಿರಿ ನಗರವನ್ನು ಜಿಲ್ಲಾ ಕೇಂದ್ರವಾಗಿಸುವಲ್ಲಿ ಅವರ ಶ್ರಮ ಅಪಾರ’ ಎಂದು ಸ್ಮರಿಸಿದರು.

ADVERTISEMENT

‘ಕೊಟ್ಟ ಮಾತಿನಂತೆ ನಡೆದ ರಾಜಕಾರಣಿಯಾಗಿದ್ದ ಅವರು ಶುದ್ಧ ಕಾಯಕದಿಂದ ಮತ್ತು ಜನಾನುರಾಗಿಯಾಗಿ ತಮ್ಮಲ್ಲಿ ಬರುವ ರೋಗಿಗಳ ಆರೈಕೆ, ಸುಖ-ದುಖಃಗಳಲ್ಲಿ ಭಾಗಿಯಾಗುವ ಮೂಲಕ ಸಜ್ಜನ ವ್ಯಕ್ತಿತ್ವದ ನಾಯಕರಾಗಿ ಖ್ಯಾತರಾಗಿದ್ದರು’ ಎಂದರು.

ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ, ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಡಾ.ವೀರಬಸವಂತರೆಡ್ಡಿ ಮುದ್ನಾಳ ಅವರ ಸಮಾಧಿಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.

ಪುಣ್ಯಸ್ಮರಣೆಯ ಅಂಗವಾಗಿ ಆಯೋಜಿಸಿದ್ದ ಶಿಬಿರದಲ್ಲಿ 40 ಮಂದಿ ರಕ್ತದಾನ ಮಾಡಿದರು. 800 ಜನರಿಗೆ ಆರೋಗ್ಯ ತಪಾಸಣೆ ಮಾಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಮುಖಂಡರಾದ ಹಣಮಂತರೆಡ್ಡಿ ಮುದ್ನಾಳ, ಬಸರೆಡ್ಡಿ ಅನಪುರ, ಸಿದ್ದಲಿಂಗರೆಡ್ಡಿ ಉಳ್ಳೆಸುಗೂರ, ಮಲ್ಲಣ್ಣಗೌಡ ಹತ್ತಿಕುಣಿ, ಸಿದ್ದಣಗೌಡ ಕಾಡಂನೋರ, ಭೀಮಣ್ಣಗೌಡ ಕ್ಯಾತನಾಳ, ಡಾ.ಬಸವರಾಜ ನರಸಣಗಿ, ಡಾ.ಸಂಗಮ್ಮ ವಿ.ರಡ್ಡಿ, ಮಹೇಶರಡ್ಡಿ ಮುದ್ನಾಳ, ಡಾ.ಅಮೋಘ ಸಿದ್ದೇಶ, ಐಎಂಎ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಚಂದ್ರಕಾಂತ ಪೂಜಾರಿ, ಡಾ.ಕ್ಷೀತಿಜ್,‌ ವೀರಾರಡ್ಡಿ, ಮಾರುತಿ ಕಲಾಲ್ ಸೇರಿದಂತೆ ಮುದ್ನಾಳ ಅವರ ಅಭಿಮಾನಿಗಳು ಉಪಸ್ಥಿತರಿದ್ದರು.

ಯಾದಗಿರಿ ಹತ್ತಿರದ ಮುದ್ನಾಳ ಗ್ರಾಮದಲ್ಲಿನ ಮಂಗಳವಾರ ಮಾಜಿ ಶಾಸಕ ಲಿಂ.ಡಾ.ವೀರಬಸವಂತರೆಡ್ಡಿ ಮುದ್ನಾಳ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರ ಸಮಾಧಿಗೆ ಪುಷ್ಪಾರ್ಚನೆ ಮಾಡಿದ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.