ADVERTISEMENT

ಒಂದೇ ಮನೆಯಲ್ಲಿ ನಾಲ್ವರು ಖಾಕಿಧಾರಿಗಳು: ಇಬ್ಬರಿಗೆ ಏಕಕಾಲದಲ್ಲಿ ಮುಖ್ಯಮಂತ್ರಿ ಪದಕ

ಬಡತನದಲ್ಲಿ ಅರಳಿದ ಸಜ್ಜನ್ ಸಹೋದರರು

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 6:53 IST
Last Updated 23 ಫೆಬ್ರುವರಿ 2026, 6:53 IST
<div class="paragraphs"><p>ಬೂದಣ್ಣ ಸಜ್ಜನ್‌, ಸೋಮಶೇಖರ್‌ ಸಜ್ಜನ್‌, ಪ್ರಭು ಸಜ್ಜನ್‌, ಮಲ್ಲಿಕಾರ್ಜುನ ಸಜ್ಜನ್‌</p></div>

ಬೂದಣ್ಣ ಸಜ್ಜನ್‌, ಸೋಮಶೇಖರ್‌ ಸಜ್ಜನ್‌, ಪ್ರಭು ಸಜ್ಜನ್‌, ಮಲ್ಲಿಕಾರ್ಜುನ ಸಜ್ಜನ್‌

   

ವಡಗೇರಾ: ತಾಲ್ಲೂಕಿನ ಬೆಂಡೆ ಬೆಂಬಳಿ ಗ್ರಾಮದ ವೀರಭದ್ರಪ್ಪ ಸಜ್ಜನ ಹಾಗೂ ಮಲ್ಲಮ್ಮ ಸಜ್ಜನ ದಂಪತಿಯ ಮಕ್ಕಳಾದ ಮಲ್ಲಿಕಾರ್ಜುನ ಸಜ್ಜನ ಮತ್ತು ಪ್ರಭು ಸಜ್ಜನ ಎಂಬ ಇಬ್ಬರು ಸಹೋದರರು ಕರ್ನಾಟಕ ಕಾರಾಗೃಹ ಸೇವೆಯಲ್ಲಿ ಅನನ್ಯ ಸೇವೆ ಸಲ್ಲಿಸಿದ್ದಕ್ಕಾಗಿ 2025 ಸಾಲಿನ ಮುಖ್ಯಮಂತ್ರಿಗಳ ಪದಕಕ್ಕೆ ಆಯ್ಕೆಯಾಗಿರುವುದು ತಾಲ್ಲೂಕಿನ ವ್ಯಾಪ್ತಿಯ ಜನರಲ್ಲಿ ಸಂತಸವನ್ನುಂಟು ಮಾಡಿದೆ.

ಬಡ ಕುಟುಂಬದ ವೀರಭದ್ರಪ್ಪ ಸಜ್ಜನ ಅವರಿಗೆ ನಾಲ್ವರು ಪುತ್ರರು. ಇವರಲ್ಲಿ ಮಲ್ಲಿಕಾರ್ಜುನ ಮತ್ತು ಪ್ರಭು ಅವರು ಕರ್ನಾಟಕ ಕಾರಾಗೃಹ ಸೇವೆಯಲ್ಲಿ, ಸೋಮಶೇಖರ ಮತ್ತು ಬೂದಣ್ಣ ಅವರು ನಾಗರಿಕ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಒಂದೇ ಮನೆಯ ನಾಲ್ಕು ಜನ ಅಣ್ಣ ತಮ್ಮರು ಖಾಕಿ ಧರಿಸಿ ಕಾರ್ಯನಿರ್ವಹಿಸುತ್ತಿರುವುದು ವಿಶೇಷ.

ADVERTISEMENT

ಮಲ್ಲಿಕಾರ್ಜುನ ಸಜ್ಜನ ಸಹೋದರರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಬೆಂಡೆ ಬೆಂಬಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಪೂರ್ಣಗೊಳಿಸಿ ಮುಂದೆ ಉನ್ನತ ಶಿಕ್ಷಣಕ್ಕಾಗಿ ವೆಂಕಟರೆಡ್ಡಿ ಎಸ್ ಗಿರಣಿ ಅವರ ಮಾರ್ಗದರ್ಶನದಲ್ಲಿ ಸುರಪುರದ ಬಸವೇಶ್ವರ ಉಚಿತ ಪ್ರಸಾದ ನಿಲಯದಲ್ಲಿ ವ್ಯಾಸಂಗ ಮಾಡಿ, ಇಂದು ಸರ್ಕಾರಿ ನೌಕರಿಯಲ್ಲಿದ್ದಾರೆ.

ಮನೆಗೆ ಹಿರಿಯಣ್ಣನ ಸ್ಥಾನದಲ್ಲಿ ನಿಂತು ತಂದೆ ತಾಯಿ ಪಡುವ ಕಷ್ಟವನ್ನು ನೋಡದೆ ಹಗಲಿರಳು ಶ್ರಮವಹಿಸಿ ಮಲ್ಲಿಕಾರ್ಜುನ ಸಜ್ಜನ್ ಅವರು ವಿಶ್ವರಾಧ್ಯ ಡಿ.ಇಡಿ ಕಾಲೇಜಿನಲ್ಲಿ ಶಿಕ್ಷಕರ ತರಬೇತಿಯನ್ನು ಪಡೆದು 2009 ನೇ ಸಾಲಿನಲ್ಲಿ ಶೇ. 93 ರಷ್ಟು ಅಂಕ ಪಡೆದು ರಾಜ್ಯಕ್ಕೆ ಎರಡನೇ ಸ್ಥಾನ ಪಡೆದುಕೊಂಡರು.

ಶಿಕ್ಷಕನಾಗಬೇಕೆಂದು ಕನಸು ಕಂಡಿದ್ದ ಇವರು ಶಿಕ್ಷಕರ ನೇಮಕಾತಿ ಆಗದ ಕಾರಣ ಇವರ ತಮ್ಮನಾದ ಪ್ರಭು ಸಜ್ಜನ್ ರವರ ಜೊತೆ ಸೇರಿಕೊಂಡು 2012ರಲ್ಲಿ ಕರ್ನಾಟಕ ರಾಜ್ಯ ಕಾರಾಗೃಹ ಸೇವೆಗೆ ಸೇರಿಕೊಂಡು ಜಿಲ್ಲಾ ಕಾರಾಗೃಹ ರಾಯಚೂರಿನಲ್ಲಿ ಒಂದೇ ಸ್ಥಳಕ್ಕೆ ಇಬ್ಬರು ಅಣ್ಣತಮ್ಮಂದಿರು ಸೇವೆಗೆ ಸೇರಿಕೊಂಡು ಒಂದೇ ತರಬೇತಿ ಶಾಲೆಯಲ್ಲಿ ತರಬೇತಿಯನ್ನು ಪಡೆದು ಮುಂದೆ 2025 ನೇ ಸಾಲಿನ ಮುಖ್ಯಮಂತ್ರಿ ಪದಕ್ಕೆ ಇಬ್ಬರು ಸಹೋದರರು ಒಂದೇ ಆದೇಶ ಮತ್ತು ಸಮಯಕ್ಕೆ ಇಬ್ಬರೂ ಭಾಜನರಾಗಿದ್ದಾರೆ.

ಇವರ ಇನ್ನಿಬ್ಬರು ಸಹೋದರರಾದ ಸೋಮಶೇಖರ ಸಜ್ಜನ್ ಅವರು ಹುಮಾನಬಾದ್‌ ಠಾಣೆಯಲ್ಲಿ, ಬೂದಣ್ಣ ಸಜ್ಜನ ಅವರು ಯಾದಗಿರಿ ಡಿವೈಎಸ್‌ಪಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತಿದ್ದಾರೆ. ಇವರಿಬ್ಬರು ಸಹ ಏಕಕಾಲಕ್ಕೆ ಪೊಲೀಸ್ ಹುದ್ದೆಗೆ ಆಯ್ಕೆಯಾಗಿದ್ದಾರೆ.

ಮಲ್ಲಿಕಾರ್ಜುನ ಸಜ್ಜನ ಅವರು ತಾವು ಓದುವ ಸಮಯದಲ್ಲಿ ಅನೇಕ ಸ್ಪರ್ದಾತ್ಮಕ ತರಬೇತಿ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸಿ ಸುಮಾರು 70 ಕ್ಕೂ ಅಧಿಕ ವಿದ್ಯಾರ್ಥಿಗಳು ಇವರ ಮಾರ್ಗದರ್ಶನದಲ್ಲಿ ಇಂದು ಪೊಲೀಸ್ ಸೇವೆಯಲ್ಲಿದ್ದಾರೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿದ್ದಾರೆ.

‘ನಿಜಕ್ಕೂ ಬೆಂಡೆಬೆಂಬಳಿ ಎಂಬ ಕುಗ್ರಾಮದಲ್ಲಿ ಜನಿಸಿದ ಸಾಧಕರು ಸಮಾಜಕ್ಕೆ ಹಾಗೂ ಬಡವರಿಗೆ ಪ್ರೇರಕ ಶಕ್ತಿಯಾಗಿದ್ದಾರೆ. ಮುಖ್ಯಮಂತ್ರಿ ಪದಕವಲ್ಲದೆ ರಾಷ್ಟ್ರಮಟ್ಟದ ರಾಷ್ಟ್ರಪತಿ ಸೇವಾ ಸುಧಾರಣಾ ಪದಕ ಲಭಿಸಲಿ’ ಎನ್ನುವುದು ತಾಲ್ಲೂಕಿನ ವ್ಯಾಪ್ತಿಯ ಸಾರ್ವಜನಿಕರ ಒತ್ತಾಸೆಯಾಗಿದೆ.

‘ಸಾಧಿಸುವ ಛಲದಿಂದ ಮುನ್ನುಗ್ಗಿ’

‘ನನ್ನ ಈ ಸಾಧನೆಗೆ ನನ್ನ ತಂದೆ ತಾಯಿ ಹಾಗೂ ನನ್ನ ಇಲಾಖೆಯ ಅಧಿಕಾರಿಗಳು ಕಾರಣ ಬಡತನ ಸಮಾಜದಲ್ಲಿ ಗುರುತಿಸುವ ಸ್ಥಾನಮಾನ ಹೊಂದುವ ಹಂಬಲದಿಂದ ಇಷ್ಟ ಪಟ್ಟು ಅಧ್ಯಯನ ಮಾಡಿದ ಪ್ರತಿಫಲವೇ ಇಂದು ಮುಖ್ಯ ಮಂತ್ರಿಗಳ ಪದಕಕ್ಕೆ ಆಯ್ಕೆಯಾಗಿರುವುದು. ಜೀವನದಲ್ಲಿ ಏನು ಇಲ್ಲಾ ಎಂಬ ಕೋರಗಿನಲ್ಲಿ ಕಾಲ ಕಳೆಯುವುದರ ಬದಲಾಗಿ ನನ್ನಲ್ಲಿ ಏನಾದರೂ ಸಾಧಿಸುವ ಛಲ ಇದೆ ಎಂಬ ವಿಶ್ವಾಸದಿಂದ ಮುಂದೆ ನಡೆದಾಗ ಮಾತ್ರ ಗುರಿಯನ್ನು ತಲುಪಲು ಸಾಧ್ಯ’ ಎನ್ನುತ್ತಾರೆ ಮುಖ್ಯಮಂತ್ರಿ ಪಡೆದ ಮಲ್ಲಿಕಾರ್ಜುನ ಸಜ್ಜನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.