
ಸುರಪುರ: ‘ಕಾರ್ಮಿಕರು ಮತ್ತು ಬಡವರಿಗಾಗಿ ರಾಜ್ಯ ಸರ್ಕಾರ ಹೈಟೆಕ್ ಸಂಚಾರಿ ಆರೋಗ್ಯ ಘಟಕ ವ್ಯವಸ್ಥೆ ಜಾರಿಗೆ ತಂದಿದೆ. ಉಚಿತವಾಗಿ ಆರೋಗ್ಯ ತಪಾಸಣೆ, ಚಿಕಿತ್ಸೆ ನೀಡುವ ಯೋಜನೆ ಇದಾಗಿದೆ. ಆದ್ದರಿಂದ ಕಾರ್ಮಿಕರು ಮತ್ತು ಬಡವರು ಇದರ ಸದುಪಯೋಗ ಪಡೆದು ಕೊಳ್ಳಬೇಕು’ ಎಂದು ಸಂಚಾರಿ ಆರೋಗ್ಯ ಘಟಕದ ವೈದ್ಯ ಡಾ. ಉಮರ್ ಫಾರೂಕ್ ಹೇಳಿದರು.
ತಾಲ್ಲೂಕಿನ ಹಸನಾಪುರ ಗ್ರಾಮದಲ್ಲಿ ಶನಿವಾರ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಮಾಡಿ ನಂತರ ಅವರು ಮಾತನಾಡಿದರು.
‘ಜಿಲ್ಲೆಯಿಂದ ಮೂರು ಸಂಚಾರಿ ವಾಹನಗಳನ್ನು ನೀಡಲಾಗಿದೆ. ಈ ಪೈಕಿ ಹುಣಸಗಿ ಮತ್ತು ಸುರಪುರ ನಡುವೆ ಈ ವಾಹನ ಸಂಚರಿಸಲಿದೆ. ಪ್ರತಿ ದಿನ ಒಂದು ಗ್ರಾಮಕ್ಕೆ ತೆರಳಿ ಕಾರ್ಮಿಕರು ಇರುವಲ್ಲಿಗೆ ಹೋಗಿ ಆರೋಗ್ಯ ತಪಾಸಣೆ ಮಾಡಿ ಚಿಕಿತ್ಸೆ ನೀಡಿ ಔಷದೋಪಚಾರ ನೀಡಲಾಗುತ್ತದೆ’ ಎಂದರು.
‘ಆರೋಗ್ಯದ ಕಡೆ ಗಮನಕೊಡದೆ ಸದಾ ಕೆಲಸದಲ್ಲಿ ತೊಡಗಿಸಿಕೊಳ್ಳುವ ಕಾರ್ಮಿಕರ ಆರೋಗ್ಯ ರಕ್ಷಣೆ ಈ ಯೋಜನೆ ಉದ್ದೇಶವಾಗಿದೆ. ಮಾಹಿತಿ ಕೊರತೆ, ಅರಿವಿಲ್ಲದಿರುವುದು, ಹಣಕಾಸಿನ ತೊಂದರೆ ಸೇರಿದಂತೆ ಇನ್ನಿತರ ಕಾರಣಗಳಿಂದ ಕಾರ್ಮಿಕರು ಆರೋಗ್ಯದ ಕಡೆ ಗಮನಕೊಡುವುದಿಲ್ಲ’ ಎಂದರು.
‘ಕಾರ್ಮಿರಿಗೆ ಮೊದಲ ಆದ್ಯತೆ. ನಂತರ ಬಡವರಿಗೆ ತಪಾಸಣೆ ಮಾಡಲಾಗುತ್ತದೆ. ಚಿಕಿತ್ಸಾ ವೆಚ್ಚ ಭರಿಸಲಾಗದ ಅದೆಷ್ಟೋ ಬಡ ಕಾರ್ಮಿಕರಿಗೆ ಇದು ಹೆಚ್ಚಿನ ಅನುಕೂಲವಾಗಿದೆ. ವಾಹನದಲ್ಲಿ ಅತ್ಯಾಧುನಿಕ ಸೌಲಭ್ಯ ಇರುತ್ತದೆ’ ಎಂದರು.
ರಕ್ತದೊತ್ತಡ, ಮಧುಮೇಹ, ಕೆಮ್ಮು, ದಮ್ಮು, ವಾಂತಿ, ನೆಗಡಿ, ಜ್ವರ, ಮೈ ಕೈ ನೋವು ಸೇರಿದಂತೆ ಇತರೆ ಕಾಯಿಲೆಗಳ ತಪಾಸಣೆ ಮಾಡಿ ಚಿಕಿತ್ಸೆ ನೀಡಿ ಔಷಧಿ ನೀಡಲಾಯಿತು.
ನರ್ಸ್ ಕವಿತಾ, ಔಷಧ ತಜ್ಞ ಮಹೇಶ, ಶಾರದಾ ಜಿಎನ್‍ಎಂ ಸೋಪಣ್ಣ ಚಿಕಿತ್ಸೆಗೆ ನೆರವು ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.