ಸುರಪುರ: ‘ಸುರಪುರದ ಅರಸು ನಾಲ್ವಡಿ ರಾಜಾ ವೆಂಕಟಪ್ಪನಾಯಕ ಈ ನೆಲದಲ್ಲಿ ಹೋರಾಟದ ಕಿಡಿಯನ್ನು ಬಿತ್ತಿ ಹೋದ. ಮುಂದಿನ ದಿನಗಳಲ್ಲಿ ಅದು ಮೊಳಕೆಯೊಡೆದು ಅನೇಕ ರೀತಿಯಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಕಾರಣವಾಯಿತು’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಶಾಸನಶಾಸ್ತ್ರ ವಿಭಾಗದ ಮುಖ್ಯಸ್ಥ ಅಮರೇಶ ಯತಗಲ್ ಪ್ರತಿಪಾದಿಸಿದರು.
ಇಲ್ಲಿಯ ಗರುಡಾದ್ರಿ ಕಲಾ ಮಂದಿರದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಶನಿವಾರ ನಾಲ್ವಡಿ ರಾಜಾ ವೆಂಕಟಪ್ಪನಾಯಕ ಅವರ ಕುರಿತು ಮಾತನಾಡಿದರು. ‘ಮೂಯೂರ ವರ್ಮ, ಇಮ್ಮಡಿ ಪುಲಕೇಶಿ, ಅಮೋಘವರ್ಷ ನೃಪತುಂಗ, ವಿಕ್ರಮಾದಿತ್ಯ, ಶ್ರೀಕೃಷ್ಣದೇವರಾಯ, ಮದಕರಿನಾಯಕ ಹಾಗೆಯೇ ಸುರಪುರದ ಅರಸು ನಾಲ್ವಡಿ ರಾಜಾ ವೆಂಕಟಪ್ಪನಾಯಕ ಕೂಡ ಕರ್ನಾಟಕದ ಐಕಾನ್ ಎನ್ನುವುದನ್ನು ನಾವುಗಳು ಯಾವತ್ತೂ ಮರೆಯಾಬಾರದು’ ಎಂದರು.
‘ಸುರಪುರದ ಅರಸರಿಗೆ ಆಂಗ್ಲರ ವಿರುದ್ಧ ಹೋರಾಟ ಮಾಡಿದರೆ ಏನಾಗುತ್ತದೆ ಎಂಬುದು ಗೊತ್ತಿತ್ತು. ಆದರೆ ನಮಗೆ ಸ್ವಾಭಿಮಾನ ಬೇಕು, ಸ್ವಾತಂತ್ರ್ಯಬೇಕು ಎಂದು ವರ್ತಮಾನವನ್ನು ಅಂದು ಪ್ರಶ್ನಿಸಿದರು. ಇಂದು ಕರ್ನಾಟಕದಲ್ಲಿ ಸ್ವಾತಂತ್ರ್ಯ ಚಳವಳಿಯ ಹೋರಾಟ ಗಮನಿಸಿದರೆ ಕಿತ್ತೂರು ರಾಣಿ ಚನ್ನಮ್ಮ, ಟಿಪ್ಪು ಸುಲ್ತಾನ್‍ಗೆ ಸಿಕ್ಕಷ್ಟು ಪ್ರಾಶಸ್ತ್ಯ ನಾಲ್ವಡಿ ರಾಜಾ ವೆಂಕಟಪ್ಪನಾಯಕಗೆ ಸಿಗಲಿಲ್ಲ’ ಎಂದು ಖೇದ ವ್ಯಕ್ತಪಡಿಸಿದರು.
ಉಪನ್ಯಾಸಕ ರಾಜಗೋಪಾಲ ವಿಭೂತಿ, ಇಂದುಮತಿ ಪಾಟೀಲ, ಸಂಗನಗೌಡ ಹಿರೇಗೌಡ ವಿವಿಧ ವಿಷಯಗಳ ಬಗ್ಗೆ ವಿಷಯ ಮಂಡಿಸಿದರು. ಹಂಪಿ ಕನ್ನಡ ವಿವಿಯ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ವೆಂಕಟೇಶ ದಳವಾಯಿ ಅಧ್ಯಕ್ಷತೆ ವಹಿಸಿದ್ದರು.
ರಾಜವಂಶಸ್ಥ ರಾಜಾ ಕೃಷ್ಣಪ್ಪನಾಯಕ, ಹಿರಿಯ ನ್ಯಾಯವಾದಿ ಶರಣಬಸಪ್ಪ ವೀರಭದ್ರಪ್ಪ ನಿಷ್ಠಿ, ಹೈಕೋರ್ಟ್ ನ್ಯಾಯವಾದಿ ಸುದರ್ಶನ ಯಾರಾದಿ, ಪ್ರಮುಖರಾದ ಟಿ.ನಾಗೇಂದ್ರ, ಪವನಕುಮಾರ ಜೋಷಿ, ದಿಗಂಬರ ಬಾಬರೆ ವೇದಿಕೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.