ADVERTISEMENT

ಶಹಾಪುರ: ಹತ್ತಿ ಜೊತೆಗೆ ಗಾಂಜಾ ಬೆಳೆ; ಪೊಲೀಸರ ಕಣ್ಗಾವಲು

ಶಹಾಪುರ: 2019-20ನೇ ಸಾಲಿನಲ್ಲಿ 13 ಪ್ರಕರಣ ದಾಖಲು

ಟಿ.ನಾಗೇಂದ್ರ
Published 8 ಸೆಪ್ಟೆಂಬರ್ 2020, 17:15 IST
Last Updated 8 ಸೆಪ್ಟೆಂಬರ್ 2020, 17:15 IST
ಗಾಂಜಾ ಗಿಡ (ಸಾಂದರ್ಭಿಕ ಚಿತ್ರ)
ಗಾಂಜಾ ಗಿಡ (ಸಾಂದರ್ಭಿಕ ಚಿತ್ರ)   

ಶಹಾಪುರ: ಬೆಂಗಳೂರಿನಲ್ಲಿ ಡ್ರಗ್ಸ್ ಜಾಲ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಶಹಾಪುರ ಪೊಲೀಸರು ತಾಲ್ಲೂಕಿನಲ್ಲಿ ಗಾಂಜಾ ಬೆಳೆಯುತ್ತಿರುವವರ ಪತ್ತೆಗೆ ಹದ್ದಿನ ಕಣ್ಣು ನೆಟ್ಟಿದ್ದಾರೆ. 2019–20ರಲ್ಲಿ ಒಟ್ಟು 13 ಪ್ರಕರಣಗಳು ವಿವಿಧ ಠಾಣೆಯಲ್ಲಿ ದಾಖಲಾಗಿರುವುದು ಇದಕ್ಕೆ ಪುಷ್ಟಿ ನೀಡಿದೆ.

ಶಹಾಪುರ ಠಾಣೆಯಲ್ಲಿ ಹಾಗೂ ಹಾಗೂ ಭೀಮರಾಯನಗುಡಿ ಠಾಣೆಯಲ್ಲಿ ತಲಾ 4, ಗೋಗಿ ಠಾಣೆ 1 ಹಾಗೂ ಅಬಕಾರಿ ಇಲಾಖೆಯಲ್ಲಿ 4 ಪ್ರಕರಣ ಸೇರಿದಂತೆ ಒಟ್ಟು 13 ಪ್ರಕರಣ ದಾಖಲಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಲ್ಲೂಕಿನ ನೀರಾವರಿ ಪ್ರದೇಶದಲ್ಲಿ ವಾಣಿಜ್ಯ ಬೆಳೆಯಾಗಿರುವ ಹತ್ತಿಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಕೆಲ ರೈತರ ಹೆಸರಿನ ವ್ಯಕ್ತಿಗಳು ಗೌಪ್ಯವಾಗಿ ಹತ್ತಿ ಬೆಳೆಯಲ್ಲಿ ಗಾಂಜಾ ಬೆಳೆಯನ್ನು ಹಾಕುತ್ತಾರೆ. ಹತ್ತಿ ಮತ್ತು ಗಾಂಜಾ ಗಿಡ ಒಂದೇ ತರನಾಗಿ ಕಾಣಿಸುತ್ತವೆ. ಹತ್ತಿ ಬೆಳೆ ಜಮೀನಿನ ಮಧ್ಯದಲ್ಲಿ ಗಾಂಜಾ ಬೀಜ ಬಿತ್ತನೆ ಮಾಡಿದಾಗ ಅದು ಕಾಣಿಸುವುದಿಲ್ಲ. ಅದರ ವಾಸನೆ ಹಾಗೂ ಬೇರೆ ವ್ಯಕ್ತಿಗಳು ಮಾಹಿತಿ ನೀಡಿದಾಗ ಮಾತ್ರ ಅದು ಬೆಳಕಿಗೆ ಬರುತ್ತದೆ ಎನ್ನುತ್ತಾರೆ ಮುಡಬೂಳ ಗ್ರಾಮದ ರೈತರೊಬ್ಬರು.

ಗ್ರಾಮದಿಂದ ದೂರ ಇರುವ ಜಮೀನಿನಲ್ಲಿ ಮತ್ತು ಸುತ್ತಲು ಹತ್ತಿ ಬೆಳೆಯ ಮಧ್ಯೆ ಗಾಂಜಾದ ಬೀಜವನ್ನು ಗೌಪ್ಯವಾಗಿ ಖರೀದಿಸಿ ಬಿತ್ತನೆ ಮಾಡುತ್ತಾರೆ. 3 ವರ್ಷದ ಹಿಂದೆ ತಾಲ್ಲೂಕಿನ ಮುಡಬೂಳ ಗ್ರಾಮದಲ್ಲಿ ಗಾಂಜಾ ಬೆಳೆ ಬೆಳೆದಿರುವುದನ್ನು ಅಬಕಾರಿ ಇಲಾಖೆಯ ಸಿಬ್ಬಂದಿ ದಾಳಿ ಮಾಡಿ ವಶಪಡಿಸಿಕೊಂಡಾಗ ಎಚ್ಚೆತ್ತುಕೊಂಡ ಗಾಂಜಾ ಬೆಳೆಗಾರರು ರಾತ್ರೋರಾತ್ರಿ ಗಾಂಜಾದ ಗಿಡಗಳನ್ನು ಕಿತ್ತುಹಾಕಿ ಕಾಲುವೆ ಎಡ ಮತ್ತು ಬಲಭಾಗದಲ್ಲಿ ಬೀಸಾಗಿರುವುದು ಕಾಣಿಸಿತು. ಆಗ ಅಬಕಾರಿ ಸಿಬ್ಬಂದಿ ದಂಗಾಗಿ ಹೋಗಿದ್ದರು.

ADVERTISEMENT

ಗ್ರಾಮೀಣ ಪ್ರದೇಶದಲ್ಲಿ ಗಾಂಜಾ ಬೆಳೆಯುವುದು ಅಪರಾಧ ಎನ್ನುವ ಬಗ್ಗೆ ಪೊಲೀಸರು ಧ್ವನಿವರ್ಧಕದ ಮೂಲಕ ಪ್ರಚಾರ ಮತ್ತು ಜಾಗೃತಿಯ ಅರಿವು ಮೂಡಿಸಬೇಕು ಎಂದು ಗ್ರಾಮೀಣ ಪ್ರದೇಶದ ಜನತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಿದ್ದಾರೆ.

***

ಗಾಂಜಾ ಬೆಳೆಯುತ್ತಿರುವ ಬಗ್ಗೆ ತೀವ್ರ ಶೋಧ ನಡೆಸಲಾಗುತ್ತಿದೆ. ಸಾರ್ವಜನಿಕರಿಗೆ ಮಾಹಿತಿ ಇದ್ದರೆ ಠಾಣೆಗೆ ಬಂದು ತಿಳಿಸಬಹುದು. ಅವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು
ಚೆನ್ನಯ್ಯ ಹಿರೇಮಠ, ಪಿ.ಐ, ಶಹಾಪುರ ಠಾಣೆ

***

ರೈತರ ಹೆಸರಿನಲ್ಲಿ ಕೆಲ ಜನರು ಮೋಸ ಮಾಡಿ ಗಾಂಜಾ ಬೆಳೆದು ಸಂಕಷ್ಟಕ್ಕೆ ಸಿಲುಕಿಸುತ್ತಾರೆ. ರೈತರು ಜಾಗೃತರಾಗಿರಬೇಕು
– ಯಲ್ಲಯ್ಯ ನಾಯಕ ವನದುರ್ಗ, ರೈತ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.