ADVERTISEMENT

ಕೆಂಭಾವಿ: ₹23.15 ಲಕ್ಷ ಮೌಲ್ಯದ ಗಾಂಜಾ ಜಪ್ತಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 7:08 IST
Last Updated 16 ಅಕ್ಟೋಬರ್ 2025, 7:08 IST
<div class="paragraphs"><p>ಕೆಂಭಾವಿ ತಾಲ್ಲೂಕಿನ ವಂದಗನೂರ ಗ್ರಾಮದ ಜಮೀನೊಂದರಲ್ಲಿ ಬೆಳೆದಿದ್ದ ಗಾಂಜಾ ಗಿಡಗಳನ್ನು ಪರಿಶೀಲಿಸಿದ ಪೊಲೀಸರು&nbsp;</p></div>

ಕೆಂಭಾವಿ ತಾಲ್ಲೂಕಿನ ವಂದಗನೂರ ಗ್ರಾಮದ ಜಮೀನೊಂದರಲ್ಲಿ ಬೆಳೆದಿದ್ದ ಗಾಂಜಾ ಗಿಡಗಳನ್ನು ಪರಿಶೀಲಿಸಿದ ಪೊಲೀಸರು 

   

ಯಾದಗಿರಿ: ಕೆಂಭಾವಿ ತಾಲ್ಲೂಕಿನ ವಂದಗನೂರ ಗ್ರಾಮದ ಮನೆಯಲ್ಲಿ ಇರಿಸಿದ್ದ ಒಣ ಹಾಗೂ ಹೊಲದಲ್ಲಿ ಬೆಳೆದ ಹಸಿ ಗಾಂಜಾ ಸೇರಿ ಒಟ್ಟು ₹ 23.15 ಲಕ್ಷ ಮೌಲ್ಯದ ಗಾಂಜಾವನ್ನು ಸೈಬರ್ ಕ್ರೈಮ್‌ ಹಾಗೂ ಕೆಂಭಾವಿ ಠಾಣೆಯ ಪೊಲೀಸರು ಜಪ್ತಿ ಮಾಡಿದ್ದಾರೆ.

ಮನೆಯಲ್ಲಿ ಅಕ್ರಮವಾಗಿ ಗಾಂಜಾ ಇರಿಸಿಕೊಂಡು ಹಾಗೂ ಜಮೀನಿನಲ್ಲಿಯೂ ಬೆಳೆದ ಆರೋಪದಡಿ ವಂದಗನೂರಿನ ಚನ್ನಾರೆಡ್ಡಿ ಬಾಪುಗೌಡ ‍ಪಾಟೀಲ ವಿರುದ್ಧ ಎನ್‌ಡಿಪಿಎಸ್‌ ಕಾಯ್ದೆ 1985 ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ದಾಳಿಯ ವೇಳೆ ಆರೋಪಿಯ ಮನೆಯಲ್ಲಿ ₹ 4.49 ಲಕ್ಷ ಮೌಲ್ಯದ 4.490 ಕೆ.ಜಿ ಒಣ ಗಾಂಜಾ ಹಾಗೂ ಹೊಲದಲ್ಲಿ ₹ 18.66 ಲಕ್ಷ ಮೌಲ್ಯದ 37.320 ಕೆ.ಜಿ ಹಸಿ ಗಾಂಜಾ ಗಿಡಗಳು ಪತ್ತೆಯಾಗಿವೆ. ಅವುಗಳ ಒಟ್ಟಾರೆ ಮೌಲ್ಯ ₹ 23.15 ಲಕ್ಷದಷ್ಟಿದೆ. ಆರೋಪಿಯು ಕಾಳಸಂತೆಯಲ್ಲಿ ಗಾಂಜಾ ಮಾರಾಟ ಮಾಡಿ ಹಣ ಸಂಪಾದಿಸಲು ತನ್ನ ಜಮೀನಿನಲ್ಲಿ ಕಾನೂನು ಬಾಹಿರವಾಗಿ ಗಾಂಜಾ ಬೆಳೆದಿದ್ದಾರೆ. ಮನೆಯಲ್ಲಿಯೂ ಅಕ್ರಮವಾಗಿ ದಾಸ್ತಾನು ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಂಭಾವಿ ಠಾಣೆಯ ಪಿಎಸ್‌ಐ ಅಮೋಜ್ ಕಾಂಬಳೆ, ಎಎಸ್‌ಐ ಬಸನಗೌಡ, ಹೆಡ್‌ಕಾನ್‌ಸ್ಟೆಬಲ್‌ಗಳಾದ ಬಸವರಾಜ, ಬಾಬು, ಕಾನ್‌ಸ್ಟೆಬಲ್‌ಗಳಾದ ಲಿಂಗನಗೌಡ, ಬಸೆಟೆಪ್ಪ, ಮಾಳಪ್ಪ, ಬಸವರಾಜ, ವಿಎ ಬ್ರಹ್ಮದೇವ ಅವರು ದಾಳಿ ಮಾಡಿದ್ದಾರೆ.

ಬಾಲಕಿ ಮೇಲೆ ಅತ್ಯಾಚಾರ

ಪಿಯು ದ್ವಿತೀಯ ವರ್ಷದ ಬಾಲಕಿಯೊಬ್ಬಳನ್ನು ಪ್ರೀತಿಸುವುದಾಗಿ ಬಲವಂತ ಮಾಡಿ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪದಡಿ ಯುವಕನೊಬ್ಬನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ.

ಹುಣಸಗಿ ತಾಲ್ಲೂಕಿನ ಗ್ರಾಮವೊಂದರ 17 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪದಡಿ ರಾಘಪ್ಪ ಹಣಮಪ್ಪ ವಿರುದ್ಧ ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಆರೋಪಿಯು ಬಾಲಕಿಯ ಸಂಬಂಧಿಕ ಆಗಿದ್ದು, ಒಂದೆರಡು ಬಾರಿ ಆಕೆಯ ಮನೆಗೆ ಬಂದು ಹೋಗಿದ್ದರು. ಪ್ರೀತಿಸುವುದಾಗಿ ಹಿಂದೆ ಬಿದಿದ್ದು, ಬಾಲಕಿ ಇಷ್ಟ ಇಲ್ಲ ಎಂದರೂ ಕೇಳಲಿಲ್ಲ. ಮದುವೆ ಆಗುವುದಾಗಿ ಪುಸಲಾಯಿಸಿ ವಿಜಯಪುರಕ್ಕೆ ಬಲವಂತ ಮಾಡಿ ಕರೆದುಕೊಂಡು ಹೋಗಿ ಆಕೆಯನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟರು. ಬಳಿಕ ಲಾಡ್ಜ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ದುಪ್ಪಟ್ಟು ಹಣದ ಆಮಿಷ: ₹ 21. 59 ಲಕ್ಷ ವಂಚನೆ ಆರೋಪ

ಐದು ವರ್ಷಗಳಲ್ಲಿ ಹಣ ದುಪ್ಪಟು ಮಾಡಿಕೊಡುವ ಆಮಿಷವೊಡ್ಡಿ ರೈತರು ಸೇರಿದಂತೆ ಹಲವರಿಂದ ₹ 21.59 ಲಕ್ಷ ಪಡೆದು ವಾಪಸ್ ಕೊಡದೆ ವಂಚಿಸಿ ಆರೋಪದಡಿ ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಣ್ಣಿವಡಗೇರಾ ಗ್ರಾಮದ ರೈತ ನಿಂಗಪ್ಪ ಪೂಜಾರಿ ಅವರು ನೀಡಿದ ದೂರಿನ ಅನ್ವಯ ಅದೇ ಗ್ರಾಮದ ಬಸವರಾಜ ಯಮನಪ್ಪ ಆಶ್ಯಾಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಸವರಾಜ ಅವರು 2013ರ ಸೆಪ್ಟೆಂಬರ್‌ನಲ್ಲಿ ನಿಂಗಪ್ಪ ಅವರ ಮನೆಗೆ ಬಂದಿದ್ದರು. ವಿಮಾ ಕಂಪನಿ ಒಂದರ ಹೆಸರು ಹೇಳಿ ಹಣ ಹೂಡಿಕೆ ಮಾಡಿದರೆ ಐದು ವರ್ಷಗಳಲ್ಲಿ ದುಪ್ಪಟ್ಟು ಮಾಡಿ ಕೊಡುವುದಾಗಿ ಆಮಿಷವೊಡ್ಡಿದ್ದರು. ಹಣಕ್ಕೆ ತಾನು ಶ್ಯೂರಿಟಿ ಕೊಡುವುದಾಗಿ ನಂಬಿಸಿದರು. ಆತನ ಮಾತು ನಂಬಿದ ನಿಂಗಪ್ಪ ಸೇರಿ ಸುಮಾರು 50 ಜನರು ₹ 21.59 ಲಕ್ಷ ಹಣವನ್ನು ಕೊಟ್ಟಿದ್ದರು ಎಂದು ಹೇಳಿದ್ದಾರೆ. ಐದು ವರ್ಷಗಳ ಬಳಿಕ ಲಾಭದ ಹಣ ಮೂಲ ಹಣವೂ ಕೊಡಲಿಲ್ಲ. ಗ್ರಾಮದಲ್ಲಿ ನ್ಯಾಯ ಪಂಚಾಯಿತಿ ಮಾಡಿದಾಗ ಐದು ವರ್ಷಗಳಲ್ಲಿ ವಾಪಸ್ ಕೊಡುವುದಾಗಿ ಭರವಸೆಯೂ ಕೊಟ್ಟಿದ್ದರು. ಕೊಟ್ಟ ಗಡುವು ಮುಗಿದ ಬಳಿಕ ಹಣ ಕೇಳಲು ಹೋದವರಿಗೆ ಬೈದು ಜೀವಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ನಿಂಗಪ್ಪ ಪ್ರಕರಣ ದಾಖಲಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.