ADVERTISEMENT

ಗೌಡೂರ: ಕೃಷ್ಣಾ ನದಿಯ ಒರತೆಯ ನೀರು ಗತಿ, ಕಲುಷಿತ ನೀರು ಸೇವನೆ ಆತಂಕ

ಟಿ.ನಾಗೇಂದ್ರ
Published 21 ಜೂನ್ 2021, 1:28 IST
Last Updated 21 ಜೂನ್ 2021, 1:28 IST
ಶಹಾಪುರ ತಾಲ್ಲೂಕಿನ ಗೌಡೂರ ಗ್ರಾಮದ ಜನತೆ ಕುಡಿಯುವ ನೀರನ್ನು ಕೃಷ್ಣಾ ನದಿಯಿಂದ ಒರತೆ ತೆಗೆದುಕೊಂಡು ಬರುತ್ತಿದ್ದಾರೆ
ಶಹಾಪುರ ತಾಲ್ಲೂಕಿನ ಗೌಡೂರ ಗ್ರಾಮದ ಜನತೆ ಕುಡಿಯುವ ನೀರನ್ನು ಕೃಷ್ಣಾ ನದಿಯಿಂದ ಒರತೆ ತೆಗೆದುಕೊಂಡು ಬರುತ್ತಿದ್ದಾರೆ   

ಗೌಡೂರ (ಶಹಾಪುರ): ತಾಲ್ಲೂಕಿನ ಗೌಡೂರ ಗ್ರಾಮದಲ್ಲಿ ಸ್ಥಾಪಿಸಿದ್ದ ಶುದ್ದ ಕುಡಿಯುವ ನೀರಿನ ಘಟಕ ಮೂರು ತಿಂಗಳ ಹಿಂದೆ ಕೆಟ್ಟು ನಿಂತಿದೆ. ಇಂದಿಗೂ ದುರಸ್ತಿಗೊಳಿಸಿಲ್ಲ. ಇದರಿಂದ ಗ್ರಾಮಸ್ಥರು ಕೃಷ್ಣಾ ನದಿಯಲ್ಲಿ ಒರತೆ ತೆಗೆದು ಕುಡಿಯುವ ನೀರು ಹೊತ್ತುಕೊಂಡು ಬರುವ ದುಸ್ಥಿತಿ ಎದುರಾಗಿದೆ.

ತಾಲ್ಲೂಕಿನ ಕೊಳ್ಳೂರ (ಎಂ) ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗ್ರಾಮ ಇದಾಗಿದೆ. 370 ಮನೆಗಳಿವೆ. ಸುಮಾರು 2000 ಜನಸಂಖ್ಯೆಯನ್ನು ಹೊಂದಿದೆ. ಇಬ್ಬರು ಗ್ರಾಮ ಪಂಚಾಯಿತಿ ಸದಸ್ಯರು ಇದ್ದಾರೆ. ಕೃಷ್ಣಾ ನದಿಗೆ ಹೊಂದಿಕೊಂಡಿರುವ ಗ್ರಾಮ ಇದಾಗಿದ್ದು, ಪ್ರವಾಹ ಬಂದಾಗ ಸಂಕಷ್ಟವನ್ನು ಇಲ್ಲಿನ ನಿವಾಸಿಗರು ಸದಾ ಎದುರಿಸುವುದು ಸಾಮಾನ್ಯವಾಗಿದೆ. ನದಿಯಿಂದ ಕುಡಿಯುವ ನೀರಿನ ಸರಬರಾಜು ಮಾಡುವ ವ್ಯವಸ್ಥೆ ಇಂದಿಗೂ ಆಗಿಲ್ಲ ಎಂದು ಗ್ರಾಮದ ನಿವಾಸಿ ಬಸವರಾಜ ಬೆಳ್ಳಿಕಟ್ಟಿ ಆರೋಪಿಸಿದರು.

ಗ್ರಾಮದ ಸುತ್ತಮುತ್ತಲು ಉಪ್ಪಿನಾಂಶ ಇರುವ ನೀರು ಇರುವುದರಿಂದ ಕುಡಿಯಲು ಯೋಗ್ಯವಿಲ್ಲ. ಗ್ರಾಮದಲ್ಲಿ ಇರುವ ಏಕೈಕ ಕೊಳವೆ ಬಾವಿ ಇದೆ. ಇದರ ನೀರು ಉಪಯೋಗಿಸಿ ಬಟ್ಟೆ ತೊಳೆದುಕೊಳ್ಳುತ್ತೇವೆ. ಶುದ್ಧ ನೀರಿನ ಘಟಕ ಸ್ಥಾಪಿಸಿ ಅನುಕೂಲ ಮಾಡಿದ್ದರು. ಆದರೆ ಸರಿಯಾದ ನಿರ್ವಹಣೆ ಇಲ್ಲದೆ ಕೆಟ್ಟುನಿಂತಿದೆ.

ADVERTISEMENT

ಬೇಸಿಗೆ ಕಾಲದಿಂದಲೂ ನಾವು ಗ್ರಾಮದಿಂದ 1 ಕಿ.ಮೀ ದೂರದ ಕೃಷ್ಣಾ ನದಿಗೆ ಬೆಳಿಗ್ಗೆ ತೆರಳಿ ಅಲ್ಲಿ ಒರತೆ ತೆಗೆದು ಬಸಿ ನೀರನ್ನು ಬಟ್ಟಲದ ಮೂಲಕ ಕೊಡದಲ್ಲಿ ತುಂಬಿಕೊಂಡು ಬಂದು ಕೆಲ ಬಂದು ಕೆಲ ಸಮಯ ಬಿಟ್ಟು ಕುಡಿಯಲು ಉಪಯೋಗಿಸುತ್ತಿದ್ದೇವೆ. ಇದು ಮಹಿಳೆಯರಿಗೆ ಮೂರು ತಿಂಗಳಿಂದ ಬೆಳಿಗ್ಗೆ ಮತ್ತು ಸಾಯಂಕಾಲ ನೀರು ಹೊತ್ತುಕೊಂಡು ತರುವ ಕಾಯಕವಾಗಿದೆ. ಜಿಲ್ಲಾ ಪಂಚಾಯಿತಿ ಕಚೇರಿಗೆ ತೆರಳಿ ಧರಣಿ ನಡೆಸಿದರು ಸಹ ಘಟಕವನ್ನು ದುರಸ್ತಿಗೊಳಿಸಿಲ್ಲ ಎಂದು ಗೌಡೂರ ಗ್ರಾಮ ಪಂಚಾಯಿತಿ ಸದಸ್ಯೆ ಪವಿತ್ರ ದೇವಿಂದ್ರ ಚಲವಾದಿ ಆರೋಪಿಸಿದರು.

ಈಗ ಮಳೆಗಾಲ ಆರಂಭವಾಗಿದೆ. ನದಿಯಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಲಿದೆ. ಮೊಸಳೆಯ ಕಾಟವು ಜಾಸ್ತಿ ಇದೆ. ನದಿಯಲ್ಲಿ ಪ್ರವಾಹ ಯಾವ ದಿನದಲ್ಲಿ ಏರುಮುಖವಾಗುತ್ತದೆ ಎಂಬುದು ಗೊತ್ತಾಗುವುದಿಲ್ಲ. ನದಿಯ ಒರತೆಯ ಕಲುಷಿತ ನೀರು ಸೇವನೆಯಿಂದ ಸಾಂಕ್ರಾಮಿಕ ರೋಗದ ಭೀತಿ ಆವರಿಸಿದೆ. ಗ್ರಾಮೀಣ ಜನತೆಯ ಆರೋಗ್ಯದ ಹಿತದೃಷ್ಟಿಯಿಂದ ತಕ್ಷಣ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಗೊಳಿಸಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ಮಲ್ಲಪ್ಪ ದೊರೆ ಹಾಗೂ ಮಂಜುನಾಥ ಕೊಡಚಿ,ದೇವಿಂದ್ರ ಚಲವಾದಿ ಮನವಿ ಮಾಡಿದ್ದಾರೆ.

***

ಮೂರು ಗ್ರಾಮದಲ್ಲಿ ಘಟಕ ಬಂದ್

ಶಹಾಪುರ: ತಾಲ್ಲೂಕಿನ ಕೊಳ್ಳೂರ(ಎಂ), ಮರಕಲ್, ಟೊಣ್ಣುರ ಗ್ರಾಮದಲ್ಲಿ ಸ್ಥಾಪಿಸಿದ ಶುದ್ದ ಕುಡಿಯುವ ನೀರಿನ ಘಟಕ ಬಂದ್ ಹಲವು ತಿಂಗಳು ಆಗಿದೆ. ಗ್ರಾಪಂ ವಿಚಾರಿಸಿದರೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳುತ್ತಾರೆ. ಗ್ರಾಮೀಣಾಭಿವೃದ್ಧಿ ಪಂಚಾಯಿತ್ ರಾಜ್ ಇಲಾಖೆಗೆ ವಿಚಾರಿಸಿದರೆ ನಾಳೆ ಬಾ ಎನ್ನುತ್ತಾರೆ. ಕೃಷ್ಣಾ ನದಿ ದಂಡೆಯ ಜನತೆಯು ಶುದ್ಧ ಕುಡಿಯುವ ನೀರಿನಿಂದ ವಂಚಿತರಾಗಿದ್ದೇವೆ ಎಂದು ಕೊಳ್ಳೂರ(ಎಂ) ಗ್ರಾಮದ ಮುಖಂಡ ಹೊನ್ನಯ್ಯ ಗಟ್ಟಿ ಆರೋಪಿಸಿದ್ದಾರೆ.

***

ನೀರಿನ ಘಟಕ ಸ್ಥಾಪಿಸಿದವರು ಗ್ರಾಪಂಕ್ಕೆ ಹಸ್ತಾಂತರಿಸಿಲ್ಲ. ಎರಡು ದಿನದಲ್ಲಿ ಘಟಕವನ್ನು ದುರಸ್ತಿಗೊಳಿಸುವಂತೆ ಸೂಚಿಸಿದೆ

- ಶಾರದ, ಪಿಡಿಒ ಕೊಳ್ಳೂರ(ಎಂ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.