
ಶಹಾಪುರ ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಕಟ್ಟಡ
ಶಹಾಪುರ (ಯಾದಗಿರಿ ಜಿಲ್ಲೆ): ನಗರದ ಸಾರ್ವಜನಿಕ ಆಸ್ಪತ್ರೆಗೆ ತಡೆರಹಿತ ವಿದ್ಯುತ್ ಪೂರೈಕೆಯ ಬ್ಯಾಕ್‌ಅಪ್ ಜನರೇಟರ್ ಬಳಕೆಯಲ್ಲಿ ನೈಜ ವಿದ್ಯುತ್ ಅವಧಿ ಕಡಿತಕ್ಕಿಂತ 340 ಗಂಟೆ ಹೆಚ್ಚುವರಿಯಾಗಿ ನಮೂದಿಸಿ ಹಣ ದುರ್ಬಳಕೆ ಮಾಡಿಕೊಂಡಿದ್ದು ಆರ್‌ಟಿಐ ಮಾಹಿತಿಯಿಂದ ಗೊತ್ತಾಗಿದೆ.
ಮಾಹಿತಿ ಹಕ್ಕು (ಆರ್‌ಟಿಐ) ಕಾರ್ಯಕರ್ತ ನಬಿ ಪಟೇಲ್ ಅವರು ಆಸ್ಪತ್ರೆಗೆ ವಿದ್ಯುತ್ ಕಡಿತ ಮಾಡಿದ್ದ ಅವಧಿಯ ಮಾಹಿತಿ ಕೋರಿ ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿಗೆ (ಜೆಸ್ಕಾಂ) ಅರ್ಜಿ ಸಲ್ಲಿಸಿದ್ದರು.
ಆಸ್ಪತ್ರೆಗೆ 2025ರ ಫೆಬ್ರುವರಿ 1ರಿಂದ ಅಕ್ಟೋಬರ್ 31ರ ನಡುವೆ (9 ತಿಂಗಳು) 182 ಗಂಟೆ ವಿದ್ಯುತ್ ಸ್ಥಗಿತಗೊಂಡಿದ್ದಾಗಿ ಜೆಸ್ಕಾಂ ಮಾಹಿತಿ ನೀಡಿದೆ. ಆದರೆ, ಸರ್ಕಾರಿ ಅಸ್ಪತ್ರೆಯಲ್ಲಿನ ಲಾಗ್ ಬುಕ್‌ನಲ್ಲಿ ಅದೇ ಅವಧಿಯಲ್ಲಿ 522 ಗಂಟೆ ವಿದ್ಯುತ್ ಸ್ಥಗಿತಗೊಂಡಿದ್ದಾಗಿ ನಮೂದಿಸಲಾಗಿದೆ.
‘ವಿದ್ಯುತ್ ಪೂರೈಕೆಯಲ್ಲಿ ಜೆಸ್ಕಾಂ 182 ಗಂಟೆ ವ್ಯತ್ಯಯ ಮಾಡಿದ್ದರೆ, ಆಸ್ಪತ್ರೆಯ ಕೆಲ ಅಧಿಕಾರಿಗಳು 340 ಗಂಟೆಗಳನ್ನು ಸೇರ್ಪಡೆ ಮಾಡಿ 522 ಗಂಟೆಗಳ ತಪ್ಪು ದಾಖಲೆ ನಮೂದಿಸಿದ್ದಾರೆ. ಹೆಚ್ಚುವರಿ ಅವಧಿಯ ಜನರೇಟರ್ ಚಾಲನೆಗಾಗಿ 4,420 ಲೀಟರ್ ಡಿಸೇಲ್ ಬಳಸಿದ್ದಾಗಿ ನಮೂದಿಸಿ ₹4.4 ಲಕ್ಷ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದು ಅರ್ಜಿದಾರ ನಬಿ ಪಟೇಲ್ ದೂರಿದ್ದಾರೆ.
‘ಖಾಸಗಿ ಪೆಟ್ರೋಲ್ ಬಂಕ್‌ನಿಂದ ಡೀಸೆಲ್ ಖರೀದಿಸಿದ ಬಗ್ಗೆ ಕೈ ಬರಹದಿಂದ ಪಡೆದ ರಸೀದಿಯನ್ನು ಕಡತದಲ್ಲಿ ಸೇರ್ಪಡೆ ಮಾಡಿರುವುದು ಸಹ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ’ ಎನ್ನುತ್ತಾರೆ ನಬಿ.
‘ಈ ಹಿಂದೆ ಆಸ್ಪತ್ರೆಯ ತಾಲ್ಲೂಕು ಆಡಳಿತಾಧಿಕಾರಿಯಾಗಿದ್ದ ಡಾ.ಪದ್ಮಾನಂದ ಗಾಯಕವಾಡ ಹಾಗೂ ಡಾ.ಪ್ರಭುಲಿಂಗ ಮಾನಕರ್ (ನಾಲ್ಕು ದಿನ ಸೇವೆ) ಅವರ ಅವಧಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಸಾರ್ವಜನಿಕರ ಹಣ ದುರ್ಬಳಕೆಯಾಗಿದ್ದು, ಈ ಬಗ್ಗೆ ಲೋಕಾಯುಕ್ತರು ಸಮಗ್ರ ತನಿಖೆ ನಡೆಸಬೇಕು’ ಎನ್ನುತ್ತಾರೆ ನಗರದ ನಿವಾಸಿ ಮಾನಪ್ಪ ಹಡಪದ.
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತಾಲ್ಲೂಕು ಆಸ್ಪತ್ರೆಯ ಈ ಹಿಂದಿನ ಆಡಳಿತಾಧಿಕಾರಿ ಡಾ.ಪದ್ಮಾನಂದ ಗಾಯಕವಾಡ, ‘ಆಸ್ಪತ್ರೆಯಲ್ಲಿ ಎರಡು ಜನರೇಟರ್‌ಗಳಿದ್ದು, ದಾಖಲೆಯಲ್ಲಿ ಒಂದು ಜನರೇಟರ್ ಮಾತ್ರ ನಮೂದಿಸಲಾಗಿದೆ. ಮೂರು ದಿನ ವಿದ್ಯುತ್ ಸಂಪರ್ಕ ಸ್ಥಗಿತವಾಗಿತ್ತು. ಈ ಬಗ್ಗೆ ಡಿಎಚ್‌ಒ ಅವರಿಗೆ ಮಾಹಿತಿ ನೀಡಿರುವೆ’ ಎಂದರು.
ಆರ್‌ಟಿಐನಡಿ ನೀಡಲಾದ ವಿದ್ಯುತ್ ಸಂಬಂಧಿ ಮಾಹಿತಿಯಲ್ಲಿನ ವ್ಯತ್ಯಾಸದ ಬಗ್ಗೆ ದೂರು ಬಂದಿದೆ. ಈ ಕುರಿತ ದಾಖಲೆಗಳನ್ನು ಪರಿಶೀಲನೆ ಮಾಡಲಾಗುವುದುಡಾ.ಯಲ್ಲಪ್ಪ ಹುಲಿಕಲ್, ಶಹಾಪುರ ತಾಲ್ಲೂಕು ಆಡಳಿತ ವೈದ್ಯಾಧಿಕಾರಿ
ಡಿಸೇಲ್ ಬಳಕೆಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸಾರ್ವಜನಿಕ ಹಣ ದುರ್ಬಳಕೆ ಮಾಡಿಕೊಂಡ ವೈದ್ಯರ ವಿರುದ್ಧ ಕಾನೂನು ಕ್ರಮ ಕೈಕೊಳ್ಳಬೇಕು.ನಬಿ ಪಟೇಲ್, ಆರ್‌ಟಿಐ ಅರ್ಜಿದಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.