ADVERTISEMENT

ಗುರುಮಠಕಲ್‌: ಪಾದಚಾರಿಗಳಿಗೆ ನೀಡಿ ‘ಭಯರಹಿತ ಸಂಚಾರ ಭಾಗ್ಯ’

ಪಟ್ಟಣದೊಳಗಿನ ಮುಖ್ಯರಸ್ತೆಗಳಲ್ಲೂ ಇಲ್ಲ ಫುಟ್‌ಪಾತ್: ಬಸ್ ಡಿಪೊ ಹತ್ತಿರ ಫುಟ್‌ಪಾತ್‌ನಲ್ಲಿ ಕೀಟಗಳ ಭಯ

ಎಂ.ಪಿ.ಚಪೆಟ್ಲಾ
Published 17 ಮಾರ್ಚ್ 2025, 5:55 IST
Last Updated 17 ಮಾರ್ಚ್ 2025, 5:55 IST
ಗುರುಮಠಕಲ್ ಪಟ್ಟಣದ ಬಸ್ ನಿಲ್ದಾಣದಿಂದ ಕಾಕಲವಾರ ಕ್ರಾಸ್‌ಗೆ ತೆರಳುವ ಮುಖ್ಯರಸ್ತೆಯ ಇಬ್ಬದಿಯಲ್ಲಿ ಪಾದಚಾರಿ ಮಾರ್ಗವಿಲ್ಲದೆ, ಪುರಸಭೆ ಮತ್ತು ಖಾಸಗಿ ವಾಣಿಜ್ಯ ಮಳಿಗೆಗಳ ಮೆಟ್ಟಿಲುಗಳಿರುವುದು
ಗುರುಮಠಕಲ್ ಪಟ್ಟಣದ ಬಸ್ ನಿಲ್ದಾಣದಿಂದ ಕಾಕಲವಾರ ಕ್ರಾಸ್‌ಗೆ ತೆರಳುವ ಮುಖ್ಯರಸ್ತೆಯ ಇಬ್ಬದಿಯಲ್ಲಿ ಪಾದಚಾರಿ ಮಾರ್ಗವಿಲ್ಲದೆ, ಪುರಸಭೆ ಮತ್ತು ಖಾಸಗಿ ವಾಣಿಜ್ಯ ಮಳಿಗೆಗಳ ಮೆಟ್ಟಿಲುಗಳಿರುವುದು   

ಗುರುಮಠಕಲ್‌: ತಾಲ್ಲೂಕು ಕೇಂದ್ರವಾದ ನಂತರ ಪಟ್ಟಣದಲ್ಲಿ ಜನ, ವಾಹನ ದಟ್ಟಣೆ ಹೆಚ್ಚುತ್ತಲೇ ಇದೆ. ಆದರೆ, ರಸ್ತೆಗಳ ಸುಧಾರಣೆ ಮಾತ್ರ ಸಾಧ್ಯವಾಗಿಲ್ಲ. ತಾಲ್ಲೂಕು ಕೇಂದ್ರಕ್ಕೆ ಬರುವ ಪಾದಚಾರಿಗಳಿಗೆ ಕನಿಷ್ಠ ‘ಭಯ ರಹಿತ ಸಂಚಾರದ ಭಾಗ್ಯ’ವನ್ನಾದರೂ ನೀಡಲಿ ಎಂದು ಪಟ್ಟಣಕ್ಕೆ ಬರುವ ಗ್ರಾಮೀಣ ಜನತೆ ಕೋರುತ್ತಾರೆ.

ಪಟ್ಟಣದಲ್ಲಿ ಹಾದು ಹೋಗುವ ಹೈದರಾಬಾದ್‌- ವಿಜಯಪುರ ಹೆದ್ದಾರಿಯಲ್ಲಿ ಪಟ್ಟಣದ ಬಸ್‌ ಘಟಕದಿಂದ ಎಚ್‌ಪಿ ಪೆಟ್ರೋಲ್‌ ಬಂಕ್‌ವರೆಗೆ ಮತ್ತು ಬಸವೇಶ್ವರ ವೃತ್ತ (ಹಳೆ ತಹಶೀಲ್ದಾರ್‌ ಕಚೇರಿ)ದಿಂದ ಎಪಿಎಂಸಿ ತಡೆಗೋಡೆವರೆಗಿನ ರಸ್ತೆಯ ಬದಿಗಳಲ್ಲಿ ಪಾದಚಾರಿ ಮಾರ್ಗವಿದೆ. ಆದರೆ, ಅವೆರಡೂ ಪಟ್ಟಣದ ಹೊರವಲಯದಲ್ಲಿ, ಪಟ್ಟಣದ ಒಳಭಾಗದಲ್ಲಿ ಪಾದಚಾರಿ ಮಾರ್ಗವಾಗಲಿ, ವಾಹನ ನಿಲುಗಡೆಗೆ ವ್ಯವಸ್ಥೆಯಾಗಲಿ ಇಲ್ಲ. ಇದರಿಂದ ಜನತೆ ರಸ್ತೆಯಲ್ಲೇ ನಡೆದಾಡುವ ಸ್ಥಿತಿಯಿದೆ.

ಪಟ್ಟಣದ ಬಸ್ ನಿಲ್ದಾಣದಿಂದ ಗಂಗಾ ಪರಮೇಶ್ವರಿ ವೃತ್ತ (ಮಿಟ್ಟಿಬೌಡಿ) ವರೆಗಿನದು ಮುಖ್ಯರಸ್ತೆಯೂ ಹೌದು, ಪಟ್ಟಣದ ಮಾರುಕಟ್ಟೆಯೂ ಹೌದು. ಈ ರಸ್ತೆಯಲ್ಲಿ ಕೆಲವೆಡೆ ರಸ್ತೆಯಲ್ಲೇ ವ್ಯಾಪಾರ ನಡೆಯುವಂತ ಸ್ಥಿತಿಯಿದೆ. ಜತೆಗೆ ನೆರೆಯ ನಾರಾಯಣಪೇಟ ಹೋಗುವ ಮುಖ್ಯರಸ್ತೆಯೂ ಹೌದು. ಮಿಟ್ಟಿಬೌಡಿಯಿಂದ ಪೊಲೀಸ್ ಠಾಣೆ ಮಾರ್ಗವಾಗಿ ಬೀಡ್ಕಿಕಟ್ಟವರೆಗೆ, ಶರಣು ಹೋಟೆಲ್‌ನಿಂದ ವೈದ್ಯ ಬುಜಂಗರಾವ್ ಆಸ್ಪತ್ರೆ, ಬಸ್ ನಿಲ್ದಾಣದಿಂದ ಹಳೆ ನಾಡ ಕಚೇರಿ, ಬಸ್ ನಿಲ್ದಾಣ ಎದುರಿನ ಹನುಮ ಮಂದಿರದಿಂದ ನಗರೇಶ್ವರ ದೇವಸ್ಥಾನದವರೆಗಿನ ಮಾರ್ಗಗಳಲ್ಲಾದರೂ ಪಾದಚಾರಿ ಮಾರ್ಗದ ವ್ಯವಸ್ಥೆಯಾದರೆ ಚೆನ್ನ.

ADVERTISEMENT

‘ಯಾರೂ ಬಳಸದಂತೆ ಪಟ್ಟಣದ ಹೊರವಲಯದಲ್ಲಿ ಹೆದ್ದಾರಿ ಪಕ್ಕದಲ್ಲಿ ಪಾದಚಾರಿ ಮಾರ್ಗವಿದ್ದದ್ದು, ಯಾರ ಅನುಕೂಲಕ್ಕೆನ್ನುವುದು ನಮಗೆ ಅರ್ಥವಾಗದು’ ಎಂದು ವ್ಯಂಗ್ಯವಾಡಿದ್ದು ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಯುವತಿ.

‘ಪಟ್ಟಣದಲ್ಲಿ ಬೆಳಿಗ್ಗೆ ಮತ್ತು ಸಂಜೆ ವೇಳೆ ಚಿಕ್ಕ ಮಕ್ಕಳು ಮತ್ತು ವೃದ್ಧರು ಹೊರ ಬರಲು ದುಗುಡದಿಂದಲೇ ರಸ್ತೆಯಲ್ಲಿ ತಿರುಗಬೇಕಿದೆ. ವಾಹನ ದಟ್ಟಣೆಯ ವೇಳೆ ಯಾವ ವಾಹನ ಹಾದು ಹೋಗುವುದೋ ಎನ್ನುವ ಭಯವಂತು ಇದ್ದೇ ಇದೆ’ ಎನ್ನುವುದು ಅವರ ಅಳಲು.

‘ಜತೆಗೆ ರಾತ್ರಿ ವೇಳೆ ಬೀದಿ ದೀಪಗಳ ಬೆಳಕೂ ನಿರಂತರ ಇರುತ್ತದೆಂಬ ನಂಬಿಕೆಯಲ್ಲ. ಮುಖ್ಯರಸ್ತೆಯ (ಹೆದ್ದಾರಿ) ಬೀದಿ ದೀಪಗಳು ಕೆಟ್ಟು ನಾಲ್ಕು ತಿಂಗಳಾಗುತ್ತಿದೆ. ಈವರೆಗೂ ದುರಸ್ತಿ ಮಾಡಿಲ್ಲ. ಇತ್ತ ಪಾದಚಾರಿ ಮಾರ್ಗವೂ ಇಲ್ಲ. ಅದರೊಂದಿಗೆ ಬೀದಿ ದೀಪಗಳೂ ಇಲ್ಲ’ ಎನ್ನುತ್ತಾರೆ ಡಿಎಸ್‌ಎಸ್‌ ತಾಲ್ಲೂಕು ಅಧ್ಯಕ್ಷ ಲಾಲಪ್ಪ ತಲಾರಿ.

ಇದ್ದೂ ಇಲ್ಲದಂತಾದ ಪಾದಚಾರಿ ಮಾರ್ಗ

ಪಟ್ಟಣದ ಹೊರವಲಯದ ಬಸ್ ಡಿಪೊ ಹತ್ತಿರದಿಂದ ಎಚ್.ಪಿ.ಪೆಟ್ರೋಲ್ ಪಂಪ್‌ವರೆಗೆ ಪಾದಚಾರಿ ಮಾರ್ಗವಿದೆ. ಅದೂ ವಿಜಯಪುರ- ಹೈದರಾಬಾದ್ ಹೆದ್ದಾರಿಯಾದ ಕಾರಣ ಕಾಟಾಚಾರಕ್ಕೆ ನಿರ್ಮಿಸಿದ್ದಾರೇನೋ ಎನ್ನುವ ಅನುಮಾವಿದೆ. ಪಾದಚಾರಿ ಮಾರ್ಗ ನಿರ್ಮಿಸಿದ್ದಾರೆ ಎನ್ನುವುದು ಎಷ್ಟು ಸತ್ಯವೋ ಈಗ ಅದು ಬಳಸಲಾಗದಂತಿದೆ ಎನ್ನುವುದೂ ಅಷ್ಟೇ ಸತ್ಯ ಎನ್ನುತ್ತಾರೆ ಸಾರ್ವಜನಿಕರು. ಇಲ್ಲಿನ ಪಾದಚಾರಿ ಮಾರ್ಗವು ಮಳೆಗಾಲದಲ್ಲಿ ಹುಲ್ಲು ಪೊದೆಗಳಿಂದಾಗಿ ಹುಳು-ಹುಪ್ಪಡಿಯ ಭಯದಿಂದಾಗಿ ಬಳಸಲಾಗಲ್ಲ. ನಿತ್ಯ ಸಂಜೆ ಅಥವಾ ಬೆಳಗಿನ ವೇಳೆ ವಾಯುವಿಹಾರಕ್ಕಾದರೂ ಬಳಸಲಾಗದ ಸ್ಥಿತಿಯಿದೆ. ‘ಪ್ರತಿ ವರ್ಷವೂ ಬಜೆಟ್ ವೇಳೆ ‘ಪಟ್ಟಣದ ಸೌಂದರ್ಯೀಕರಣ ಸಾರ್ವಜನಿಕರ ಅನುಕೂಲಕ್ಕೆ’ ಎನ್ನುವ ಮಾತುಗಳು ಕೇಳಿಬರುತ್ತವೆ. ಆದರೆ ಕನಿಷ್ಠ ಪಾದಚಾರಿ ಮಾರ್ಗದ ವ್ಯವಸ್ಥೆ ಮತ್ತು ಜನನಿಬಿಡ ಪ್ರದೇಶಗಳಾದ ಬಸವೇಶ್ವರ ವೃತ್ತ ಕಾಕಲವಾರ ಕ್ರಾಸ್‌ಗಳಲ್ಲಿ ಮೂತ್ರಾಲಯ ವ್ಯವಸ್ಥೆ ಮಾಡುವತ್ತಲೂ ಸಂಬಂಧಿಸಿದ ಸ್ಥಳೀಯ ಆಡಳಿತ ಗಮನಿಸದಂತೆ ಕಾಣದು’ ಎಂದು ಆಕ್ರೋಶ ವ್ಯಕ್ತಪಡಿಸಿದ್ದು ನಿರಾಶ್ರಿತ ಫಲಾನುಭವಿಗಳ ನಿವೇಶನ ಹಂಚಿಕೆಗೆ ಹೋರಾಟ ಸಮಿತಿಯ ಮುಖಂಡ ರವೀಂದ್ರರೆಡ್ಡಿ ಪೋತುಲ್.

‘ಅನುದಾನ ಲಭ್ಯವಾದಲ್ಲಿ ವ್ಯವಸ್ಥೆ ಕಲ್ಪಿಸಲು ಯತ್ನಿಸುವೆ’

‘ಸದ್ಯ ನಮ್ಮಲ್ಲಿರುವ ನಗರೋತ್ಥಾನದ ನಾಲ್ಕನೇ ಹಂತದ ಅನುದಾನದಲ್ಲಿ ಪಟ್ಟಣದ ಹೊರವಲಯದಲ್ಲಿರುವ ಪ್ರವಾಸಿ ಮಂದಿರ (ಐಬಿ)ದಿಂದ ಪೊಲೀಸ್ ಬಡಾವಣೆಯ ಮುಂದಿನಿಂದ ಬಸವೇಶ್ವರ ವೃತ್ತದ (ಹಳೆ ತಹಶೀಲ್ದಾರ್ ಕಚೇರಿ) ವರೆಗಿನ ಪಾದಚಾರಿ ಮಾರ್ಗವನ್ನು ಈಗ ಇರುವುದಕ್ಕಿಂತಲೂ ಅಗಲವಾಗಿ ಅಭಿವೃದ್ಧಿಗೊಳಿಸುವುದು ಮತ್ತು ವಾಯುವಿಹಾರಕ್ಕೆ ಬಂದವರು ಪಾದಾಚಾರಿಗಳು ಕೂಡಲು ಆಸನಗಳ ವ್ಯವಸ್ಥೆ ಕಲ್ಪಿಸಲು ಅನುಮೋದನೆ ಸಿಕ್ಕಿದೆ. ಶೀಘ್ರವೇ ಕಾಮಗಾರಿ ಪ್ರಾರಂಭವಾಗಲಿದೆ’ ಎಂದು ಪುರಸಭೆಯ ಮುಖ್ಯಾಧಿಕಾರಿ ಭಾರತಿ ಸಿ.ದಂಡೋತಿ ಹೇಳುತ್ತಾರೆ. ‘ಸರ್ಕಾರದಿಂದ ಅನುದಾನ ಲಭ್ಯವಾದರೆ ಪುರಸಭೆಯ ಸದಸ್ಯರ ಮತ್ತು ಜನಪ್ರತಿನಿಧಿಗಳ ಸಭೆ ನಡೆಸಿ ಸಭೆಯ ವಿಶ್ವಾಸ ಮತ್ತು ತೀರ್ಮಾನದಂತೆ ಪಟ್ಟಣದಲ್ಲಿನ ಮುಖ್ಯರಸ್ತೆಗಳು ಜನನಿಬಿಡ ಪ್ರದೇಶಗಳಲ್ಲಿ ಪಾದಚಾರಿ ಮಾರ್ಗದ ವ್ಯವಸ್ಥೆ ಅಥವಾ ರಸ್ತೆಯನ್ನು ವಿಸ್ತರಿಸುವುದು ಸೇರಿದಂತೆ ಇರುವ ಬೇಡಿಕೆಗಳನ್ನು ಪೂರೈಸಲು ಯತ್ನಿಸುವೆ’ ಎನ್ನುವುದು ಅವರ ಭರವಸೆ.

ಮುಖ್ಯರಸ್ತೆಯಲ್ಲಿರುವ ದೊಡ್ಡ ಅಂಗಡಿಗಳಿಗೆ ಬರುವ ದಾಸ್ತಾನಿನ ದೊಡ್ಡ ವಾಹನಗಳು ರಾತ್ರಿ ವೇಳೆ ಮಾತ್ರ ಬರಲಿ. ಹಗಲಲ್ಲಿ ಬಸ್ ನಿಲ್ದಾಣದ ಮಾರ್ಗದಲ್ಲಿ ಲಾರಿಗಳು ನಿಂತು ವಾಹನ ದಟ್ಟಣೆಯಾಗುತ್ತದೆ. ಜತೆಗೆ ಪಾದಚಾರಿ ಮಾರ್ಗವಿಲ್ಲದ್ದರಿಂದ ಜನರು ಯಾತನೆ ಪಡುವಂತಾಗಿದೆ.
ಸಂಜು ಅಳೆಗಾರ , ಸಾಮಾಜಿಕ ಕಾರ್ಯಕರ್ತ
ತಾಲ್ಲೂಕು ಕೇಂದ್ರ ಎನ್ನುವುದು ಕೇವಲ ಘೋಷಣೆಗೆ ಸೀಮಿತವಾಗಿದೆ. ಸರ್ಕಾರಿ ಇಲಾಖೆಗಳ ಕಚೇರಿಗಳೂ ಇಲ್ಲ. ಕನಿಷ್ಠ ತಾಲ್ಲೂಕು ಕೇಂದ್ರದಲ್ಲಿ ದಿನೇ ದಿನೆ ಹೆಚ್ಚುತ್ತಿರುವ ಜನದಟ್ಟಣೆಗೆ ಅನುಕೂಲ ಕಲ್ಪಿಸಲು ಪಾದಚಾರಿ ಮಾರ್ಗದ ವ್ಯವಸ್ಥೆಯೂ ಮಾಡದಿರುವುದು ನಾಚಿಕೆಗೇಡು .
ನಾಗೇಶ ಗದ್ದಗಿ, ಜಯಕರ್ನಾಟಕ ಸಂಘಟನೆ ಅಧ್ಯಕ್ಷ
ವಾಹನ ದಟ್ಟಣೆ ವೇಗವಾಗಿ ಹೋಗುವ ವಾಹನಗಳಿಂದ ರಸ್ತೆಯಲ್ಲಿ ನಡೆದಾಡುವ ಜನರಿಗೆ ರಕ್ಷಣೆ ಮತ್ತು ಅನುಕೂಲಕ್ಕೆ ಸಂಬಂಧಿತರು ಶೀಘ್ರವೇ ಪಾದಚಾರಿ ಮಾರ್ಗದ ವ್ಯಸವ್ಥೆ ಮಾಡಬೇಕು.
ಶರಣಬಸಪ್ಪ ಎಲ್ಲೇರಿ, ಕರವೇ ತಾಲ್ಲೂಕು ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.