ADVERTISEMENT

ಸಮಸ್ಯೆಗಳ ಸುಳಿಯಲ್ಲಿ ಗುಗಲಗಟ್ಟಿ ಗ್ರಾಮ

ಸೌಕರ್ಯಗಳ ಕೊರತೆಯಿಂದ ಜನರು ಹೈರಾಣ, ಇನ್ನೂ ಪೂರೈಕಯಾಗದ ಕುಡಿಯುವ ನೀರು

​ಪ್ರಜಾವಾಣಿ ವಾರ್ತೆ
Published 2 ಜನವರಿ 2020, 11:06 IST
Last Updated 2 ಜನವರಿ 2020, 11:06 IST
ಕಕ್ಕೇರಾ ಪಟ್ಟಣದ ಸಮೀಪದ ಗುಗಲಗಟ್ಟಿ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ಕಾಮಗಾರಿ ಅಪೂರ್ಣವಾಗಿರುವುದು (ಎಡಚಿತ್ರ) ಗುಗಲಗಟ್ಟಿಯಿಂದ ಕಕ್ಕೇರಾ ಪಟ್ಟಣಕ್ಕೆ ಶುದ್ದಕುಡಿಯುವ ನೀರಿನ ಘಟಕ
ಕಕ್ಕೇರಾ ಪಟ್ಟಣದ ಸಮೀಪದ ಗುಗಲಗಟ್ಟಿ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ಕಾಮಗಾರಿ ಅಪೂರ್ಣವಾಗಿರುವುದು (ಎಡಚಿತ್ರ) ಗುಗಲಗಟ್ಟಿಯಿಂದ ಕಕ್ಕೇರಾ ಪಟ್ಟಣಕ್ಕೆ ಶುದ್ದಕುಡಿಯುವ ನೀರಿನ ಘಟಕ   

ಕಕ್ಕೇರಾ: ಪಟ್ಟಣ ಸಮೀಪದ ಗುಗಲಗಟ್ಟಿ ಗ್ರಾಮವು ಮೂಲ ಸೌಕರ್ಯಗಳ ಕೊರತೆಯಿಂದ ನಲುಗಿ ಹೋಗಿದೆ.ಸರಿಯಾದ ರಸ್ತೆ, ಸಾರ್ವಜನಿಕ ಶೌಚಾಲಯ, ಕುಡಿಯಲು ಶುದ್ಧ ನೀರು ಇತ್ಯಾದಿ ಅಗತ್ಯ ಸೌಲಭ್ಯಗಳಿಲ್ಲದೆ ಜನರು ಬಸವಳಿದು ಹೋಗಿದ್ದಾರೆ.

ಗ್ರಾಮದ ಅಂಗನವಾಡಿ ಕಟ್ಟಡವು ಗ್ರಾಮದ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿ ಎಂಬಂತಿದೆ. ಅಂಗನವಾಡಿ ಕಟ್ಟಡ ಕಾಮಗಾರಿ ಪ್ರಾರಂಭವಾಗಿ 5 ವರ್ಷ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. 80 ಮಕ್ಕಳು ಇದ್ದು, ಈ ಕಟ್ಟಡವನ್ನು ಕೂಡಲೇ ಪೂರ್ಣಗೊಳಿಸಿಕೊಟ್ಟರೆ ಮಕ್ಕಳಿಗೆ ಅನುಕೂಲ ಆಗುತ್ತದೆ ಎನ್ನುತ್ತಾರೆ ಗ್ರಾಮಸ್ಥ ಬಸವರಾಜ.

ಗ್ರಾಮದಲ್ಲಿ ಶೌಚಕ್ಕೆ ರಸ್ತೆ ಬದಿ, ಗಿಡಗಂಟಿಗಳ ಮರೆಯೇ ಗತಿಯಾಗಿದೆ. ಸಾರ್ವಜನಿಕ ಶೌಚಾಲಯ ನಿರ್ಮಿಸಿಕೊಡಬೇಕೆಂಬ ಗ್ರಾಮಸ್ಥರ ಮನವಿಗೆ ಇನ್ನೂ ಸ್ಪಂದನೆ ಸಿಕ್ಕಿಲ್ಲ.

ADVERTISEMENT

ಕಕ್ಕೇರಾ ಪಟ್ಟಣ ಸೇರಿದಂತೆ ಪ್ರಮುಖ ದೊಡ್ಡಿಗಳಿಗೆ ನೀರು ಪೂರೈಸಲು ಗುಗಲಗಟ್ಟಿಯ ಎತ್ತರದ ಪ್ರದೇಶದಲ್ಲಿ
ಶುದ್ಧ ಕುಡಿಯುವ ನೀರಿನ ಶುದ್ಧೀಕರಣ ಘಟಕ ಸ್ಥಾಪಿಸಲಾಗಿದೆ. ಆದರೆ ಕಕ್ಕೇರಾ ಸೇರಿದಂತೆ ಗುಗಲಗಟ್ಟಿ, ಗೊಜಗಾರದೊಡ್ಡಿ, ಗೊಲಪಲ್ಲೇರದೊಡ್ಡಿ, ಎಂ.ಎಂ ದೊಡ್ಡಿ, ಬನದೊಡ್ಡಿಗಳಿಗೆ ನೀರು ಪೂರೈಕೆ ಆಗುತ್ತಿಲ್ಲ. ಬೇಸಿಗೆಯಲ್ಲಿ ನೀರಿನ ಹಾಹಾಕಾರ ಉಂಟಾಗಿದೆ. ಕೂಡಲೇ ಪುರಸಭೆ ಆಡಳಿತ ಮಂಡಳಿ ಎಚ್ಚೆತ್ತು ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

ಉತ್ತಮ ಶಿಕ್ಷಕರು: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇದೆ. ಶಿಕ್ಷಕರು ಆಟ, ಪಾಠಗಳನ್ನು ಚೆನ್ನಾಗಿ ಕಲಿಸುತ್ತ ಉತ್ತಮವಾಗಿ ಕಾರ್ಯನಿರ್ವಸುತ್ತಿದ್ದಾರೆ. 97 ವಿದ್ಯಾರ್ಥಿಗಳಿದ್ದು,ಮೂವರು ಶಿಕ್ಷಕರಿದ್ದಾರೆ. ಮೊರಾರ್ಜಿ ವಸತಿ ಶಾಲೆ ಹಾಗೂ ನವೋದಯ ಶಾಲೆಗೆ ಇಲ್ಲಿನ ಮಕ್ಕಳುಆಯ್ಕೆ ಆಗಿದ್ದಾರೆಎಂದು ಮುಖ್ಯ ಶಿಕ್ಷಕ ಬಸವರಾಜ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.