ADVERTISEMENT

ಯಾದಗಿರಿ: ಕ್ಷೇತ್ರದ ಅಭಿವೃದ್ಧಿಗೆ ಬೇಕಿದೆ 'ಅನುದಾನ ಭಾಗ್ಯ'

ಗುರುಮಠಕಲ್ ಕೃಷಿಗೆ ಪೂರಕ, ವಲಸೆ ತಪ್ಪಿಸುವ ಕೈಗಾರಿಕೆಗಳ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 7:17 IST
Last Updated 27 ಫೆಬ್ರುವರಿ 2026, 7:17 IST
ಗುರುಠಮಕಲ್ ಪಟ್ಟಣದ ಬಸ್ ನಿಲ್ದಾಣ
ಗುರುಠಮಕಲ್ ಪಟ್ಟಣದ ಬಸ್ ನಿಲ್ದಾಣ   

ಗುರುಮಠಕಲ್‌: ಮತ ಕ್ಷೇತ್ರದಲ್ಲಿ ಮೂಲ ಸೌಕರ್ಯಗಳ ಸಮಸ್ಯೆಗಳು ಜನರನ್ನು ಕಾಡುತ್ತಿದ್ದು, ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ‘ಅನುದಾನ ಭಾಗ್ಯ’ದ ಅವಶ್ಯಕತೆಯಿದೆ.

‘ಮತಕ್ಷೇತ್ರದ ಗುರುಮಠಕಲ್‌ ತಾಲ್ಲೂಕು ವ್ಯಾಪ್ತಿಯ ಯಂಪಾಡ, ಚಪೆಟ್ಲಾ, ಪುಟಪಾಕ, ಗಾಜರಕೋಟ ಸೇರಿದಂತೆ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಪರದಾಡಬೇಕಿದೆ. ಅವಶ್ಯಕ ವೈದ್ಯಕೀಯ ಸೇವೆಗಳ ಕೊರತೆಯಿಂದ ಜನ ನಲುಗುತ್ತಿದ್ದಾರೆ. ದೂರದ ನಗರಗಳಿಗೆ ತೆರಳುವ ವೇಳೆಗೆ ಪ್ರಾಣ ಹೋಗುತ್ತಿದೆ. ರಸ್ತೆಗಳ ಸ್ಥಿತಿ ದೇವರೇ ಬಲ್ಲ, ಸರ್ಕಾರ ನಮ್ಮತ್ತ ಜವಾಬ್ದಾರಿಯ ದೃಷ್ಟಿಹಾಯಿಸಲಿ’ ಎನ್ನುವುದು ಯುವಕರಾದ ಲಕ್ಷ್ಮಣ, ಮಹೇಶ ಹೇಳಿಕೆ.

‘ಮತಕ್ಷೇತ್ರದ ಯಾದಗಿರಿ ತಾಲ್ಲೂಕು ವ್ಯಾಪ್ತಿಯ ಹತ್ತಿಕುಣಿ ಮತ್ತು ಸೌದಗಾರ ಜಲಾಶಯಗಳ ಪ್ರದೇಶ ವ್ಯಾಪ್ತಿಯ ಕಾಲುವೆಗಳ ದುರಸ್ತಿ ಕಾರ್ಯವನ್ನು ಆದ್ಯತೆಯಲ್ಲಿ ಮಾಡುವ ಅವಶ್ಯಕತೆಯಿದೆ. ರೈತರ ಪರದಾಟ ಮತ್ತು ಸಂಕಷ್ಟಕ್ಕೆ ಆಳರಸರು ಸ್ಪಂದಿಸದಿರುವುದು ದುರದೃಷ್ಟಕರ. ಸರ್ಕಾರ ಮಲತಾಯಿಯಾಗದೆ ಹೆತ್ತಮ್ಮಳಂತೆ ಸಹಾಯ ಹಸ್ತ ಚಾಚಬೇಕು’ ಎನ್ನುತ್ತಾರೆ ರೈತ ಸಂಘದ ಭೀಮರಾಯ.

ADVERTISEMENT

ಕಡೇಚೂರು-ಬಾಡಿಯಾಳ ಪ್ರದೇಶದಲ್ಲಿ ವಿಷಕಾರಿ ಕೈಗಾರಿಕೆಗಳನ್ನು ಸ್ಥಾಪಿಸಲಾಗಿದೆ. ರೈತರಿಂದ ಸ್ವಾಧೀನ ಮಾಡಿಕೊಂಡ ಭೂ ಪ್ರದೇಶದಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳ ಸ್ಥಾಪಿಸಿದರೆ ಉತ್ತಮ. ಈ ಬಾರಿಯ ಬಜೆಟ್‌ ನಮ್ಮ ಕ್ಷೇತ್ರದ ಜನತೆ ಮತ್ತು ರೈತರಿಗೆ ಸ್ಪಂಧಿಸುವ ಸೌಜನ್ಯದ ಕರ್ತವ್ಯ ಪೂರೈಸಲಿ ಎನ್ನುವುದು ಕ್ಷೇತ್ರದ ಜನರ ಅಂಬೋಣವಾಗಿದೆ.

‘ದೂರದ ನಗರಗಳಿಗೆ ವಲಸೆ ಹೋಗುವವರ ಕುರಿತು ಸಮೀಕ್ಷೆ ನಡೆಸಿದರೆ ನಮ್ಮ ಮತಕ್ಷೇತ್ರವೇ ಮೊದಲ ಸ್ಥಾನ ಪಡೆಯಲಿದೆ. ಬದುಕು ಕಟ್ಟಿಕೊಳ್ಳಲು ದೂರದಲ್ಲಿ ನೆಲೆ ಕಂಡುಕೊಳ್ಳುವ ಅಸಹನೀಯ ಸ್ಥಿತಿ ಯಾರಿಗೆ ಇಷ್ಟ? ನಮ್ಮಲ್ಲೇ ಕೃಷಿಯಾದಾರಿತ ಕೈಗಾರಿಕೆಗಳ ಅಭಿವೃದ್ಧಿಗೆ ಸರ್ಕಾರ ಮನಸ್ಸು ಮಾಡಲಿ’ ಎನ್ನುತ್ತಾರೆ ಕ್ಷೇತ್ರದ ಜನ.

ನಮ್ಮಲ್ಲಿ ತೊಗರಿ, ಜೋಳ, ಈರುಳ್ಳಿ, ಭತ್ತ, ಕುಸುಬೆ ಮತ್ತು ಸಜ್ಜೆ ಕಾಳೆ ಬೆಳೆಗಳು ಬೆಳೆಯುವ ಮತ್ತು ಅದಕ್ಕೆ ಪೂರಕವಾದ ‘ಕೃಷಿ ಹಬ್‌’ನಂತೆ ಅಭಿವೃದ್ಧಿ ಮಾಡಿದರೆ ರೈತರಿಗೂ ಉತ್ತಮ ಅವಕಾಶ, ಯುವಜರ ಕೈಗೆ ಉದ್ಯೋಗ ಕಲ್ಪಿಸುವ ಜತೆಗೆ ವಲಸೆ ತಪ್ಪಿಸಲು ಸಾಧ್ಯವಾಗಲಿದೆ ಎನ್ನುವ ಅಭಿಪ್ರಾಯ ಗ್ರಾಮೀಣ ಜನರಲ್ಲಿದೆ.

ಈಗಿನ ಗ್ಯಾರಂಟಿಗಳ ಸರ್ಕಾರವು ನಮ್ಮ ಮತಕ್ಷೇತ್ರಕ್ಕೆ ಸಂಪೂರ್ಣ ‘ಅಭಿವೃದ್ಧಿಯ ಗ್ಯಾರಂಟಿ’ ನೀಡಲಿ. ಬಜೆಟ್‌ನಲ್ಲಿ ನಮ್ಮ ಕ್ಷೇತ್ರದ ರಸ್ತೆಗಳು ನೀರು ಸೇರಿದಂತೆ ಮೂಲ ಸೌಕರ್ಯಗಳಿಗೆ ವಿಶೇಷ ಅನುದಾನ ನೀಡಲಿ ‌
– ರವೀಂದ್ರರೆಡ್ಡಿ ಜಿ.ಕಾಕಲವಾರ, ಯುವ ಕೃಷಿಕ
ಕೆಮಿಕಲ್ ಫಾರ್ಮಾ ಕಂಪೆನಿಗಳಿಂದ ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದ ಸುತ್ತಲಿನ ಗ್ರಾಮಗಳ ಜನ ನಲುಗುವಂತಾಗಿದೆ. ಅಪಾಯಕಾರಿ ಕಂಪೆನಿಗಳ ಬದಲಿಗೆ ಸಾರ್ವಜನಿಕ ಸ್ವಾಮ್ಯದ ಉದ್ದಿಮೆಗಳ ಸ್ಥಾಪಸಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಈ ಬಜೆಟ್ ಸಹಕಾರಿಯಾಗಲಿ
– ಭೀಮಣ್ಣ ಬಿ.ವಡವಟ್, ‘ರಾಸಾಯನಿಕ ಕಂಪನಿ ಹಟವೋ ಸೈದಾಪುರ ಬಚಾವೋ’ ಹೋರಾಟ ಸಮಿತಿ ಮುಖಂಡ
ಮತಕ್ಷೇತ್ರದ ಕೃಷಿಯು ಮಳೆಯಾದಾರಿತವಾಗಿದೆ. ಹತ್ತಿರದಲ್ಲೇ ಭೀಮೆ ಹರಿಯುತ್ತಿದ್ದು ನಿರಾವರಿ ಕೃಷಿಗೆ ಪೂರಕವಾಗಿ ಬಜೆಟ್ ನಲ್ಲಿ ಅವಕಾಶ ಕಲ್ಪಿಸಿದರೆ ರೈತರ ಬಾಳು ಬೆಳಗಲಿದೆ
– ನಾಗರಾಜ ಸೈದಾಪುರ, ಸ್ಪಾಪ್ಟವೇರ್ ಉದ್ಯೋಗಿ

‘ಬೈಪಾಸ್ ರಸ್ತೆ ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವನೆ’

‘ಗುರುಮಠಕಲ್ ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿಯ ಹಿತದೃಷ್ಟಿಯನ್ನು ಇರಿಸಿಕೊಂಡು ಅಮೃತ್ –2 ಯೋಜನೆಗೆ ಹೆಚ್ಚುವರಿಯಾಗಿ ₹ 18 ಕೋಟಿ ಶುದ್ಧಕುಡಿಯುವ ನೀರಿನ ಘಟಕಗಳ ದುರಸ್ತಿ ಸೇರಿ ಇತರೆ ಯೋಜನೆಗಳಿಗೆ ಹೆಚ್ಚಿನ ಅನುದಾನ ಕೊಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಸ್ತಾವನೆಗಳ ಪಟ್ಟಿಯನ್ನು ಸಲ್ಲಿಕೆ ಮಾಡಿದ್ದೇನೆ’ ಎಂದು ಶಾಸಕ ಶರಣಗೌಡ ಕಂದಕೂರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಗುರುಮಠಕಲ್ ಪಟ್ಟಣ ವೇಗವಾಗಿ ಬೆಳೆಯುತ್ತಿದ್ದು ಸಂಚಾರದ ಅನುಕೂಲಕ್ಕಾಗಿ ಬೈಪಾಸ್‌ ರಸ್ತೆಗೆ ಬೇಡಿಕೆ ಇರಿಸಿದ್ದೇನೆ. ಹಿರೇನೂರು– ಕಂದಳ್ಳಿ ನಡುವೆ ಬ್ರಿಡ್ಜ್ ಕಂ ಬ್ಯಾರೇಜ್ ಮಾಡಿ ಸ್ವಯಂ ಚಾಲಿತ ಹೊಸ ಗೇಟ್‌ಗಳನ್ನು ಅಳವಡಿಸಿ ನೀರಾವರಿಗೆ ನೆರವಾಗಬೇಕು. ಹತ್ತಿಕುಣಿ ಜಲಾಶಯ ಕೇಂದ್ರದ ಯೋಜನೆಯಡಿ ಆಯ್ಕೆಯಾಗಿದ್ದು ಸೌದಗಾರ ಜಲಶಾಯ ಸೇರಿ ಎರಡೂ ಜಲಾಶಗಳ ವ್ಯಾಪ್ತಿಯ ಕಾಲುವೆಗಳ ದುರಸ್ತಿ ಮಾಡುವಂತೆ ಮನವಿ ಮಾಡಿದ್ದೇನೆ’ ಎಂದರು.

‘ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಾರ್ಮಿಕರ ಮಕ್ಕಳ ವಸತಿ ಶಾಲೆ 100 ಬೆಡ್‌ಗಳ ಆಸ್ಪತ್ರೆ ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಎರಡೇ ಹಂತದಲ್ಲಿನ 3 ಸಾವಿರ ಎಕರೆ ಭೂಸ್ವಾಧೀನ ಕೈಬಿಟ್ಟು ರಾಸಾಯನಿಕ ಕಾರ್ಖಾನೆಗಳ ಬದಲಾಗಿ ಪರಿಸರ ಸ್ನೇಹಿಯಾದ ಸ್ಥಳೀಯರಿಗೆ ಉದ್ಯೋಗ ಕೊಡುವಂತಹ ಕಾರ್ಖಾನೆಗಳನ್ನು ಸ್ಥಾಪಿಸಬೇಕು. ಯಾದಗಿರಿ ನಗರದಲ್ಲಿ ತಜ್ಞ ವೈದ್ಯರು ಸಹಿತ ಸೂಪರ್ ಸ್ಪೆಷಾಲಿಟಿ ಹಾಗೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣ ಮಾಡುವಂತೆ ಕೇಳಿದ್ದೇನೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.