ADVERTISEMENT

ಗುರುಮಠಕಲ್ | 'ಅಭಿವೃದ್ಧಿಗೆ ಪರಸ್ಪರ ಸಹಕಾರದ ಮಾತು'

ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರ ನಡುವೆ ನೂಕುನುಗ್ಗಲು

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 6:18 IST
Last Updated 8 ಸೆಪ್ಟೆಂಬರ್ 2025, 6:18 IST
ಗುರುಮಠಕಲ್ ಪಟ್ಟಣದಲ್ಲಿ ಭಾನುವಾರ ಪ್ರಜಾಸೌಧ ಕಟ್ಟಡದ ಅಡಿಗಲ್ಲು ಕಾರ್ಯಕ್ರಮದಲ್ಲಿ ಶಾಸಕ ಶರಣಗೌಡ ಕಂದಕೂರ ಭೂಮಿ ಪೂಜೆ ನೆರವೇರಿಸಿದರು.
ಗುರುಮಠಕಲ್ ಪಟ್ಟಣದಲ್ಲಿ ಭಾನುವಾರ ಪ್ರಜಾಸೌಧ ಕಟ್ಟಡದ ಅಡಿಗಲ್ಲು ಕಾರ್ಯಕ್ರಮದಲ್ಲಿ ಶಾಸಕ ಶರಣಗೌಡ ಕಂದಕೂರ ಭೂಮಿ ಪೂಜೆ ನೆರವೇರಿಸಿದರು.   

ಗುರುಮಠಕಲ್: ಪಟ್ಟಣದಲ್ಲಿ ಭಾನುವಾರ ನಡೆದ ಪ್ರಜಾಸೌಧದ ಅಡಿಗಲ್ಲು ಕಾರ್ಯಕ್ರಮದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಜಿದ್ದಾ–ಜಿದ್ದಿನ ಘೋಷಣೆಗಳ ನಡುವೆ ಹಾಲಿ ಮತ್ತು ಮಾಜಿ ಶಾಸಕರಿಂದ ಕ್ಷೇತ್ರದ ಅಭಿವೃದ್ಧಿಗೆ ‘ಪರಸ್ಪರ ಸಹಕಾರ’ದ ಮಾತುಗಳು ಕೇಳಿಬಂದವು.

ಶಾಸಕ ಶರಣಗೌಡ ಕಂದಕೂರ ಭೂಮಿಪೂಜೆ, ಅಡಿಗಲ್ಲು ನೆರವೇರಿಸಿ ವೇದಿಕೆ ಕಾರ್ಯಕ್ರಮಕ್ಕೆ ತೆರಳಿದ್ದರು. ನಂತರ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ ಅವರು ವೇದಿಕೆಯತ್ತ ಬರುವಾಗ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ತಮ್ಮ ನಾಯಕರ ಪರ ಘೋಷಣೆ ಕೂಗಲು ಪ್ರಾರಂಭಿಸಿದ್ದು, ಕೆಲಕಾಲ ನೂಕುನುಗ್ಗಲು ಸೃಷ್ಟಿಯಾಯಿತು.

ಸ್ವತಃ ಮಾಜಿ ಹಾಗೂ ಹಾಲಿ ಶಾಸಕರು ತಮ್ಮ ಕಾರ್ಯಕರ್ತರನ್ನು ಸಮಾಧಾನ ಪಡಿಸಿದ ನಂತರ ಕಾರ್ಯಕ್ರಮ ಮುಂದುವರೆಯಿತು.

ADVERTISEMENT

ತಹಶೀಲ್ದಾರ್ ಶಾಂತಗೌಡ ಬಿರಾದಾರ, ಪುರಸಭೆ ಅಧ್ಯಕ್ಷೆ ಜಯಶ್ರೀ ಆರ್. ಪಾಟೀಲ, ಕೆಎಚ್‌ಬಿ ಇಇ ವಿಜಯಕುಮಾರ ಬಂಡಾರಿ, ಗಿರೀಶ, ಭಾರತಿ ಸಿ.ದಂಡೋತಿ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಗುರುಮಠಕಲ್ ಪಟ್ಟಣದಲ್ಲಿ ಭಾನುವಾರ ಜರುಗಿದ ಅಡಿಗಲ್ಲು ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಘೋಷಣೆ ಕೂಗುವ ವೇಳೆ ನೂಕುನುಗ್ಗಲು ಉಂಟಾಯಿತು.
ಗುರುಮಠಕಲ್ ಪಟ್ಟಣದಲ್ಲಿ ಭಾನುವಾರ ಜರುಗಿದ ಅಡಿಗಲ್ಲು ಕಾರ್ಯಕ್ರಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ ಮಾತನಾಡಿದರು.
ಗುರುಮಠಕಲ್ ಪಟ್ಟಣದಲ್ಲಿ ಭಾನುವಾರ ಪ್ರಜಾಸೌಧ ಕಟ್ಟಡದ ಅಡಿಗಲ್ಲು ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಶರಣಗೌಡ ಕಂದಕೂರ.

ಮಾಜಿ, ಹಾಲಿ ಶಾಸಕರ ಕಾರ್ಯಕರ್ತರು ಘೋಷಗಳು ಕಾರ್ಯಕ್ರಮದಲ್ಲಿ ಕೆಲಕಾಲ ನೂಕುನುಗ್ಗಲು

ಕ್ಷೇತ್ರದ ಅಭಿವೃದ್ಧಿಯಲ್ಲಿ ರಾಜಕೀಯ ತೊರೆದು ಕೆಲಸ ಮಾಡೋಣ. ನಾನು ಶಾಸಕರು ಇಬ್ಬರೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇವೆ.
ಬಾಬುರಾವ ಚಿಂಚನಸೂರ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ
ಚುನಾವಣೆ ವೇಳೆ ಮಾತ್ರ ಪಕ್ಷ ರಾಜಕೀಯ ಮಾಡೋಣ. ಮಾಜಿ ಶಾಸಕರೂ ಆಗಿರುವ ನಿಗಮದ ಅಧ್ಯಕ್ಷರು ತಮ್ಮ ಪಕ್ಷದ ಸರ್ಕಾರದಿಂದ ಆಸ್ಪತ್ರೆ ಕಾಲೇಜು ರಸ್ತೆಗಳಿಗೆ ಅನುದಾನ ಕೊಡಿಸಿ
ಶರಣಗೌಡ ಕಂದಕೂರ ಗುರುಮಠಕಲ್ ಶಾಸಕ

ಕ್ಷೇತ್ರದ ಜನತೆಯ ತಲೆತಗ್ಗಿಸವ ಕೆಲಸ ಮಾಡಲ್ಲ: ಕಂದಕೂರ

‘ನನ್ನನ್ನು ಆಯ್ಕೆಮಾಡಿದ ಜನತೆ ತಲೆತಗ್ಗಿಸುವ ಕೆಲಸ ಮಾಡಲ್ಲ. ನಿಮ್ಮ ನಂಬಿಕೆ ಉಳಿಸಿಕೊಂಡು ಅವಧಿ ಮುಗಿಸುವೆ’ ಎಂದು ಶಾಸಕ ಶರಣಗೌಡ ಕಂದಕೂರ ಭರವಸೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಪುರ ಅವರು ಈ ಹಿಂದೆಯೇ ಪ್ರಜಾಸೌಧಕ್ಕೆ ಗುರುಮಠಕಲ್ ಹೆಸರು ಸೂಚಿಸಿದ್ದರು. ಆದರೆ ಕೆಲ ರಾಜಕೀಯದಿಂದ ಸುರಪುರಕ್ಕೆ ಅನುಮೋದನೆ ದೊರಕಿತು. ಈಗ ಗುರುಮಠಕಲ್‌ನಲ್ಲಿ ಪ್ರಜಾಸೌಧ ನಿರ್ಮಾಣವಾಗಲಿದೆ ಎಂದರು. ‘ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿದ್ದೀರಿ ನಿಮ್ಮ ಆಪ್ತರು ಸಚಿವರಲ್ಲಿ ಕ್ಷೇತ್ರಕ್ಕೆ ಅಗತ್ಯ ಅನುದಾನ ಕೊಡಿಸಿ. ನಿಮ್ಮ ಅನುಭವ ಪ್ರಭಾವ ನಮಗೆ ಅವಶ್ಯ. ಪಟ್ಟಣ ಸಿಎಚ್‌ಸಿ ಆಸ್ಪತ್ರೆಯನ್ನು 100 ಹಾಸಿಗೆಯ ಆಸ್ಪತ್ರೆಯಾಗಿ ಮೇಲ್ದರ್ಜೆ ರಸ್ತೆಗಳ ದುರಸ್ತಿ ಬೈಪಾಸ್ ರಸ್ತೆ ಸೈದಾಪುರ ಮತ್ತು ಕಂದಕೂರ ಗ್ರಾಮದಲ್ಲಿ ತಲಾ ಒಂದು ಪಿಯು ಕಾಲೇಜು ಸ್ಥಾಪನೆಗೆ ನಿಮ್ಮ ಸರ್ಕಾರದಿಂದ ಅನುದಾನ ತನ್ನಿ’ ಎಂದು ಬಾಬುರಾವ ಚಿಂಚನಸೂರ ಅವರಿಗೆ ಕೋರಿದರು. ‘ಮುಂದಿನ ದಿನಗಳಲ್ಲಿ ಪೊಲೀಸ್ ಠಾಣೆ ಪೊಲೀಸ್ ಕ್ವಾಟರ್ಸ್ ನಿರ್ಮಿಸಲು ಆದ್ಯತೆ ನೀಡಲಾಗುವುದು. ಮೊದಲ ಹಂತದಲ್ಲಿ ಪ್ರಜಾಸೌಧಕ್ಕೆ ₹8.6 ಕೋಟಿ ಲಭಿಸಿದೆ. ಮೇಲ್ಮಹಡಿಗೆ ಮತ್ತೆ ₹8.6ಕೋಟಿ ಅನುದಾನ ನೀಡುವ ಭರವಸೆಯಿದೆ’ ಎಂದರು.

ಕ್ಷೇತ್ರದ ಅಭಿವೃದ್ಧಿಗೆ ಜೊತೆಗೂಡೋಣ: ಚಿಂಚನಸೂರ

‘ಯಾವುದೇ ಪಕ್ಷ ಬೇಧ ಮಾಡದೇ ಕ್ಷೇತ್ರದ ಅಭಿವೃದ್ಧಿಗೆ ದುಡಿಯೋಣ. ಸರ್ಕಾರದ ಹಂತದಲ್ಲಿ ನಾನು ಕ್ಷೇತ್ರಕ್ಕೆ ಬೇಕಾದ ಅಭಿವೃದ್ಧಿ ಕೆಲಸ ಮಾಡಿಸಲು ಸಿದ್ದ’ ಎಂದು ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ ಭರವಸೆ ನೀಡಿದರು. ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ.ಕೆ.ಶಿವಕುಮಾರ ಅವರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ನಿರ್ದೇಶನ ನೀಡಿದ್ದು ಕ್ಷೇತ್ರದ ಅಭಿವೃದ್ಧಿಗೆ ತ್ವರಿತ ಸ್ಪಂದನೆ ಹಾಗೂ ಅದ್ಯತೆ ನೀಡಲಾಗುತ್ತದೆ ಎಂದರು. ‘ಸದ್ಯ ಇದೇ ಕ್ಷೇತ್ರದಿಂದ ಬೆಳೆದ ಖರ್ಗೆಯವರು ಅತ್ಯುನ್ನತ ಸ್ಥಾನಕ್ಕೆರಿದ್ದಾರೆ. ಅವರ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರವೂ ಅದ್ಯತೆ ನೀಡಲಿದೆ. ಮುಂದಿನ ದಿನಗಳಲ್ಲಿ ನಾನು ಕ್ಷೇತ್ರದಲ್ಲಿ ನಿರಂತರ ಸಂಪರ್ಕದಲ್ಲಿದ್ದು ಜನತೆಯ ಸೇವೆ ಮಾಡುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.