ಗುರುಮಠಕಲ್: ತಾಲ್ಲೂಕು ವ್ಯಾಪ್ತಿಯ ಎರಡು ಹೆದ್ದಾರಿಗಳೂ ಸೇರಿದಂತೆ ಗ್ರಾಮೀಣ ರಸ್ತೆಗಳು ಹಲವು ವರ್ಷಗಳಿಂದ ದುರಸ್ತಿಗಾಗಿ ‘ಚಾತಕ ಪಕ್ಷಿ’ಯಂತೆ ಕಾದಿವೆ. ಸರ್ಕಾರ ಗಡಿ ತಾಲ್ಲೂಕಿನ ರಸ್ತೆಗಳಿಗೆ ‘ದುರಸ್ತಿ ಭಾಗ್ಯ’ ನೀಡಲಿ ಎನ್ನುವುದು ತಾಲ್ಲೂಕಿನ ಜನತೆಯ ಒತ್ತಾಯ.
ವಿಜಯಪುರ-ಹೈದ್ರಾಬಾದ್ ಹೆದ್ದಾರಿ, ಚಿತ್ತಾಪುರ-ಪುಟಪಾಕ ಹೆದ್ದಾರಿಯಲ್ಲಿನ ಗಾಜರಕೋಟ-ಗುರುಮಠಕಲ್, ಕಾಕಲವಾರ-ಗುರುಮಠಕಲ್-ಎಂ.ಟಿ.ಪಲ್ಲಿ ರಸ್ತೆ, ಗಾಜರಕೋಟ-ಚಪೆಟ್ಲಾ, ಕಾಕಲವಾರ-ಚಪೆಟ್ಲಾ, ಎಂಟಿ.ಪಲ್ಲಿ-ಗಾಜರಕೋಟ, ಚಿನ್ನಾಕಾರ, ಗಣಪುರ-ನವಬುರಜ, ಕೊಂಕಲ್, ಗೋಪಾಳಪುರ, ಅನಪುರ, ಬೂದೂರು ಗ್ರಾಮದ ರಸ್ತೆ ಸೇರಿದಂತೆ ತಾಲ್ಲೂಕಿನ ರಸ್ತೆಗಳು ಗುಂಡಿಗಳಿಂದ ಆವೃತ್ತವಾಗಿದೆ. ಕೆಲವೆಡೆ ಕಲ್ವರ್ಟ್‌ಗಳ ಹತ್ತಿರ ಸಂಪೂರ್ಣ ಹದಗೆಟ್ಟಿವೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದಿಂದ ತಾಲ್ಲೂಕು ವ್ಯಾಪ್ತಿಯ ತೆಲಂಗಾಣ ಗಡಿಯ ಪುಟಪಾಕ ಗ್ರಾಮದವರೆಗಿನ ರಸ್ತೆಯನ್ನು ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಆದರೆ, ‘ರಸ್ತೆ ಮೇಲ್ದರ್ಜೆಗೇರಿಸುವುದು ಎಂದರೆ ರಸ್ತೆಯನ್ನು ಗುಂಡಿಗಳಿಂದ ಕೆಸರುಗದ್ದೆಯಾಗಿ ಮಾರ್ಪಡಿಸುವುದು ಎಂದು ನಮಗೆ ಈಗ ತಿಳಿಯುತ್ತಿದೆ’ ಎಂದು ಗಾಜರಕೋಟ, ಯದ್ಲಾಪುರ, ಇಮ್ಲಾಪುರ ಮತ್ತು ಚಪೆಟ್ಲಾ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
2019ರಲ್ಲಿ ಈ ರಸ್ತೆ ನಿರ್ಮಾಣ ಪೂರ್ಣಗೊಂಡಿತ್ತು. ‘ಆರೇ ತಿಂಗಳಿಗೆ ರಸ್ತೆಯ ಟಾರು ಕಿತ್ತಿಹೋಗಿದೆ. ಅಲ್ಲಿಂದ ಈವರೆಗೆ ನಾವು ರಸ್ತೆ ದುರಸ್ಥಿಗಾಗಿ ಪದೇ ಪದೇ ಸಂಬಂಧಿತರೆಲ್ಲರಿಗೂ ಮನವಿ ಮಾಡುತ್ತಲೇ ಇದ್ದೇವೆ. ಕಳೆದ ವರ್ಷ ಕಾಟಾಚಾರಕ್ಕೆ ದುರಸ್ತಿ (ಪ್ಯಾಚ್ ವರ್ಕ್) ಮಾಡಿದ್ದರಾದರೂ, ಮಾಡಿದ ಎರಡು ವಾರಗಳಲ್ಲೇ ಮತ್ತೆ ಗುಂಡಿಗಳು ಪುನಃ ಪ್ರತ್ಯಕ್ಷವಾದವು.
‘ಪ್ಯಾಚ್ ವರ್ಕ್ ಮಾಡಿದ್ದಲ್ಲೇ ಮತ್ತೆ ಎರಡು ವಾರದಲ್ಲೇ ಗುಂಡಿ ನಿರ್ಮಾಣವಾಗಿದೆ. ಸಾರ್ವಜನಿಕರ ಹಣ ಕಾಲಿಯಾದರೂ ಜನರಿಗೆ ಮಾತ್ರ ನೆಮ್ಮದಿ ಸಿಗಲಿಲ್ಲ. ಅಧಿಕಾರಿಗಳು ಕಣ್ಣು ತೆರದು ನೋಡಲಿ’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ತಿಪ್ಪಣ್ಣ ಗುಟ್ಟಲ್ ಆರೋಪಿಸಿದರು.
ಕೆಲವೆಡೆ ರಸ್ತೆಯ ಟಾರೆಲ್ಲಾ ಮಾಯವಾಗಿದೆ, ಜಲಿಕಲ್ಲು ಮಾತ್ರ ಉಳಿದಿದೆ. ರಸ್ತೆಗಳ ಸಮಸ್ಯೆಯಿಂದ ಬಾಣಂತಿಯರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಪರದಾಡುವಂತಾಯ್ತು. ಜತೆಗೆ ಬೈಕ್ ನಡೆಸಲು ಭಯವಾಗುತ್ತಿದೆ. ರಸ್ತೆಗಳ ಕಾರಣ ಬೈಕ್ ಸ್ಟಂಟ್ ಮಾಡುವುದು ಕಲಿಯಬೇಕಿದೆ ಪದವಿ ವಿದ್ಯಾರ್ಥಿಗಳು ವ್ಯಂಗ್ಯವಾಡಿದರು.
ತಾಲ್ಲೂಕಿನ ಹಲವೆಡೆ ರಸ್ತೆಗಳು ಹಾಳಾಗಿವೆ. ಶೀಘ್ರ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಬೇಕು. ನಮ್ಮ ತಾಲ್ಲೂಕಿನ ಕುರಿತು ಮಲತಾಯಿ ಧೋರಣೆ ಏಕೆ ?ಭೀಮರಾಯ ಯೆಲ್ಹೇರಿ ಸಾಮಾಜಿಕ ಕಾರ್ಯಕರ್ತ
ಚಿತ್ತಾಪುರ-ಪುಟಪಾಕ ರಸ್ತೆಯಲ್ಲಿ ಪ್ಯಾಚ್‌ವರ್ಕ್ ಮಾಡಿದ್ದು ವಾರದಲ್ಲೇ ಗುಂಡಿಗಳು ಬಿದ್ದಿವೆ. ಸಂಚಾರ ನಿಯಮಗಳು ತಪ್ಪಿದರೆ ದಂಡ ಹಾಕುತ್ತಾರೆ. ಗುಂಡಿಗಳಿಂದ ಅಪಘಾತವಾದರೆ ಆಸ್ಪತ್ರೆ ಬಿಲ್ ಕಟ್ಟುವರೇ?ಪಿ.ಬಸವಂತರೆಡ್ಡಿ ಚಪೆಟ್ಲಾ ಗ್ರಾಮಸ್ಥ
ತಾಲ್ಲೂಕು ವ್ಯಾಪ್ತಿಯ ಲೋಕೋಪಯೋಗಿ ಇಲಾಖೆಯ ರಸ್ತೆಗಳ ದುರಸ್ತಿಗೆ ಟೆಂಡರ್ ಪ್ರಕ್ರಿಯೆ ಜರುಗುತ್ತಿದೆ. ಇನ್ನೂ ಒಂದು ವಾರದಲ್ಲಿ ದುರಸ್ತಿ ಕಾರ್ಯ ಆರಂಭಗೊಳ್ಳಲಿದೆಪರಶುರಾಮ ಲೋಕೋಪಯೋಗಿ ಇಲಾಖೆ ಎಇಇ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.