ADVERTISEMENT

ಗುರುಮಠಕಲ್‌| ಜನವರಿ ನಂತರ ಅಭಿವೃದ್ಧಿಯ ಸಿನಿಮಾ ತೋರಿಸುವೆ: ಶಾಸಕ ಶರಣಗೌಡ ಕಂದಕೂರ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 6:15 IST
Last Updated 25 ನವೆಂಬರ್ 2025, 6:15 IST
<div class="paragraphs"><p>ಗುರುಮಠಕಲ್ ಪಟ್ಟಣದಲ್ಲಿ ಸೋಮವಾರ ವಿವಿಧ ಕಾಮಗಾರಿಗಳ ಅಡಿಗಲ್ಲು ಮತ್ತು ಉದ್ಘಾಟನಾ ಕಾರ್ಯಕ್ರಮಕ್ಕೆ ಶಾಸಕ ಶರಣಗೌಡ ಕಂದಕೂರ ಚಾಲನೆ ನೀಡಿದರು</p></div>

ಗುರುಮಠಕಲ್ ಪಟ್ಟಣದಲ್ಲಿ ಸೋಮವಾರ ವಿವಿಧ ಕಾಮಗಾರಿಗಳ ಅಡಿಗಲ್ಲು ಮತ್ತು ಉದ್ಘಾಟನಾ ಕಾರ್ಯಕ್ರಮಕ್ಕೆ ಶಾಸಕ ಶರಣಗೌಡ ಕಂದಕೂರ ಚಾಲನೆ ನೀಡಿದರು

   

ಗುರುಮಠಕಲ್‌: ‘ಸದ್ಯ ಈಗ ವಿವಿಧ ಕಾಮಗಾರಿಗಳಿಗೆ ಅಡಿಗಲ್ಲು, ಶಂಕುಸ್ಥಾಪನ ಮತ್ತು ಪೂರ್ಣಗೊಂಡ ಕಾಮಗಾರಿಗಳ ಉದ್ಘಾಟನೆಯು ಟ್ರೇಲರ್‌ನಂತೆ. ಜನೆವರಿ ನಂತರ ಮತಕ್ಷೇತ್ರದಲ್ಲಿ ಅಭಿವೃದ್ಧಿಯ ಸಿನೆಮಾ ತೋರಿಸುವೆ’ ಎಂದು ಶಾಸಕ ಶರಣಗೌಡ ಕಂದಕೂರ ಹೇಳಿದರು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಜರುಗಿದ ₹112.54 ಕೋಟಿ ಅನುದಾನದಲ್ಲಿ ವಿವಿಧ ಇಲಾಖೆಗಳ ಅಡಿಗಲ್ಲು ಮತ್ತು ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

‘ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ನನ್ನೊಡನೆ ಸಭೆಗಳು, ಪಕ್ಷದ ವಿಷಯದಲ್ಲಿ ಸ್ವಲ್ಪ ರಾಜಕೀಯ ಮಾಡಬಹುದು. ಆದರೆ, ಅಭಿವೃದ್ಧಿಗೆ ಸಂಬಂಧಿಸಿದಂತೆ ಸದಾ ಸಹಕಾರ ನೀಡುತ್ತಾರೆ. ಇನ್ನು ಕೆಲವರು ಸೋಲಾರ್ ಹೈಮಾಸ್ಟ್‌ ವಿಷಯದಲ್ಲಿ ಇಲ್ಲದ್ದೊಂದು ಹೇಳುವವರು ಸರ್ಕಾರಕ್ಕೆ ದೂರು ನೀಡಿ, ತನಿಖೆ ನಡೆಸಲಿ’ ಎಂದರು.

‘ಈಗಾಗಲೇ ನಮ್ಮ ತಂದೆ ದಿ.ನಾಗನಗೌಡ ಕಂದಕೂರ ಅವಧಿಯ ಕೊಳೆಗೇರಿ ಅಭಿವೃದ್ಧಿ ನಿಗಮದ 200 ಮನೆಗಳು, ಆರ್‌ಎಸ್‌ಕೆ ಕಟ್ಟಡ, ಹೈಮಾಸ್ಟ್‌ ಸೋಲಾರ ದೀಪಗಳು ಸೇರಿದಂತೆ ಪೂರ್ಣಗೊಂಡ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಲಾಗುತ್ತಿದೆ’ ಎಂದು ಹೇಳಿದರು.

‘ನಮ್ಮ ಪಟ್ಟಣದಲ್ಲೇ ಡಯಾಲೈಸಿಸ್‌ಗೆ ಎರಡು ಯುನಿಟ್‌ಗಳನ್ನು ಅಳವಡಿಸಲಾಗುವುದು. ಕಾಳಬೆಳಗುಂದಿಯಲ್ಲಿ 110 ಕೆವಿ ಉಪಕೇಂದ್ರ ಸ್ಥಾಪನೆ, ಸಣ್ಣ ನೀರಾವರಿಗೆ 9 ಬ್ರಿಡ್ಜ್‌ಗಳ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ನೆರವೇರಿದ್ದು, ಸಂಬಂಧಿತರು ಕಾಮಗಾರಿಗಳ ಗುಣಮಟ್ಟ ಕಾಯ್ದುಕೊಂಡು ನಿಗಧಿತ ಕಾಲಮಿತಿಯಲ್ಲಿ ಪೂರ್ಣಗೊಳಿಸಲು’ ಸೂಚಿಸಿದರು.

‘ಬಸವೇಶ್ವರ ಮತ್ತು ಅಂಬಿಗರ ಚೌಡಯ್ಯರ ಪುತ್ಥಳಿ ಸ್ಥಾಪನೆಗೆ ಪ್ರಾಮಾಣಿಕ ಕೆಲಸ ಮಾಡುವೆ’ ಎಂದರು.

‘ನಾನು ಕಟುವಾಗಿದ್ದ ಕಾರಣ ಕ್ಷೇತ್ರಕ್ಕೆ ಸಮಸ್ಯೆಯಾಗುತ್ತಿದೆ. ನಾನು ಕ್ಷೇತ್ರಕ್ಕೆ ದ್ರೋಹ ಮಾಡುವುದಿಲ್ಲ. ನನ್ನ ನಂಬಿದ ಜನತೆ ತಲೆ ತಗ್ಗಿಸುವ ಕೆಲಸ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ. ನಮ್ಮ ಕುಟುಂಬಕ್ಕೆ ಪಕ್ಷದ ಕಾರ್ಯಕರ್ತರು, ಮುಖಂಡರ ಮಾರ್ಗದರ್ಶನ ಮತ್ತು ಕ್ಷೇತ್ರದ ಜನತೆಯೇ ಆಸ್ತಿಯಾಗಿದೆ. ಜಾತಿವಾದ ಮತ್ತು ಭ್ರಷ್ಟಾಚಾರದಿಂದ ನಮ್ಮ ಕುಟುಂಬ ಅಂತರ ಕಾಯ್ದುಕೊಂಡಿದೆ’ ಎಂದರು.

ತಹಶೀಲ್ದಾರ್ ಶಾಂತಗೌಡ ಬಿರಾದರ, ಮೂಲ ಸೌಕರ್ಯಗಳ ಅಭಿವೃದ್ಧಿಯ ಅನುಷ್ಠಾನಾಧಿಕಾರಿ ಶಿವರಾಜ ಒಡೆಯರ, ಇಒ ಅಂಬ್ರೇಶ ಪಾಟೀಲ, ಟಿಎಚ್‌ಒ ಡಾ.ಹಣಮಂತರೆಡ್ಡಿ, ಸಿಡಿಪಿಒ ಶರಣಬಸವ, ಲೋಕೋಪಯೋಗಿ ಇಲಾಖೆಯ ಪರಶುರಾಮ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ರಾಮಣ್ಣ ಕೋಟಗಿರಿ, ಕೈಗಾರಿಕಾ, ಸಣ್ಣ ನೀರಾವರಿ, ಭೂಸೇನಾ ನಿಗಮ, ನಿರ್ಮಿತಿ ಕೇಂದ್ರ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪುರಸಭೆ ಅಧಿಕಾರಿಗಳು ಉಪಸ್ಥಿತರಿದ್ದರು.

ಶಾಸಕನ ಸ್ಥಾನವು ನನ್ನ ಪಾಲಿಗೆ ಮುಳ್ಳಿನ ಹಾಸಿಗೆಯಂತಿದೆ. ಅಪ್ಪ-ದೊಡ್ಡಪ್ಪ ಹಣಮಾಡಲಿಲ್ಲ. ಕೆಲ ಸಚಿವರು ರಾಜಕೀಯ ಮಾಡದೆ ಅನುದಾನ ನೀಡಿದ್ದು ಅವರಿಗೆ ಕೃತಜ್ಞತೆ ಸಲ್ಲಿಸುವೆ
ಶರಣಗೌಡ ಕಂದಕೂರ ಶಾಸಕ

‘ಈಗಿನ ಸರ್ಕಾರವೇ ಮುಂದುವರೆಯಲಿ’

‘ನವೆಂಬರ್ ಕ್ರಾಂತಿ ನಡೆಯಲಿಲ್ಲ. ಸರ್ಕಾರದ ಕುರಿತು ಡಿಸೆಂಬರ್‌ನಲ್ಲಿ ಕುರಿತು ಏನೇನೋ ಹೇಳಲಾಗುತ್ತಿದೆ. ಆದರೆ ಈಗಿನ ಸರ್ಕಾರವೇ ಮುಂದುವರೆದು ಅವಧಿ ಮುಗಿಸಲಿ. ಮುಂದೆ ಬಿಜೆಪಿ ಜೆಡಿಎಸ್‌ ಬಹುಮತದ ಸರ್ಕಾರ ಬರಲಿ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ’ ಎಂದು ಶಾಸಕ ಶರಣಗೌಡ ಕಂದಕೂರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.