ADVERTISEMENT

ಗುರುಮಠಕಲ್‌: ಹಾಸ್ಟೆಲ್‌ನ ಸಮಸ್ಯೆ ಬಗೆಹರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 6:18 IST
Last Updated 11 ನವೆಂಬರ್ 2025, 6:18 IST
<div class="paragraphs"><p>ಗುರುಮಠಕಲ್‌ ಪಟ್ಟಣದಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್‌ ನಂತರದ ಬಾಲಕರ ವಸತಿ ನಿಲಯ(ಎಸ್‌ಸಿ ಹಾಸ್ಟೆಲ್‌) ಕಟ್ಟಡ</p></div>

ಗುರುಮಠಕಲ್‌ ಪಟ್ಟಣದಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್‌ ನಂತರದ ಬಾಲಕರ ವಸತಿ ನಿಲಯ(ಎಸ್‌ಸಿ ಹಾಸ್ಟೆಲ್‌) ಕಟ್ಟಡ

   

ಗುರುಮಠಕಲ್‌: ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್‌ ನಂತರದ ಬಾಲಕರ ವಸತಿ ನಿಲಯದ (ಎಸ್‌ಸಿ ಹಾಸ್ಟೆಲ್‌) ಸಮಸ್ಯೆಗಳನ್ನು ಪರಿಹರಿಸುವಂತೆ ವಸತಿ ನಿಲಯದ ವಿದ್ಯಾರ್ಥಿಗಳು ಸೋಮವಾರ ಮೇಲ್ವಿಚಾರಕರನ್ನು ಆಗ್ರಹಿಸಿದರು.

‘ಮಧ್ಯಾಹ್ನದ ಊಟದ ವೇಳೆ ಅಡುಗೆ ಸಾಲುತ್ತಿಲ್ಲ, ಅಡುಗೆ ಮಾಡುವಾಗ ಸ್ವಚ್ಛತೆ ಕಾಯ್ದುಕೊಳ್ಳಬೇಕು. ಬಿಸಿ ನೀರಿನ ವ್ಯವಸ್ಥೆ ಮಾಡಬೇಕು, ಅಡುಗೆ ಕೋಣೆಯಲ್ಲಿ ರೊಟ್ಟಿ ಮಾಡುವ ಪ್ರದೇಶದ ಸ್ವಚ್ಛತೆಗೆ ಕ್ರಮವಹಿಸಬೇಕು’ ವಿದ್ಯಾರ್ಥಿಗಳು ಕೋರಿದರು.

ADVERTISEMENT

ಹಾಸ್ಟೆಲ್‌ನಲ್ಲಿ ಕೆಲ ವಿದ್ಯಾರ್ಥಿಗಳು ತಂಬಾಕು ಉತ್ಪನ್ನಗಳ ಬಳಕೆ ಮಾಡುತ್ತಿರುವ ಕುರಿತು ದೂರುಗಳು ಕೇಳಿಬಂದವು.

‘ಕೆಲವೊಮ್ಮೆ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಏರುಪೇರಾದ ವೇಳೆ ಅಡುಗೆ ಸಾಲದಂತಾಗುತ್ತಿದೆ. ಆದರೆ, ಮತ್ತೆ ಅಡುಗೆ ಮಾಡಿ ಕೊಡುತ್ತೇವೆ’ ಎಂದು ಅಡುಗೆ ಸಿಬ್ಬಂದಿ ತಿಳಿಸಿದರು.

‘ಅಡುಗೆಯ ವೇಳೆ ಕಡ್ಡಾಯವಾಗಿ ಅಡುಗೆ ಮನೆಯ ವಸ್ತ್ರಗಳನ್ನು ಧರಿಸಿ, ರೊಟ್ಟಿ ಮಾಡುವ ಸ್ಥಳ ಸೇರಿದಂತೆ ಅಡುಗೆಯ ಶುಚಿತ್ವದತ್ತ ಮುತುವರ್ಜಿ ವಹಿಸಬೇಕು. ಜತೆಗೆ ಯಾವುದೇ ಕಾರಣಕ್ಕೂ ಅಡುಗೆ ಕಡಿಮೆಯಾಗದಂತೆ ಕಾಳಜಿವಹಿಸಬೇಕು’ ಎಂದು ಅಡುಗೆ ಸಿಬ್ಬಂದಿಗೆ ವಸತಿ ನಿಲಯದ ಮೇಲ್ವಿಚಾರಕ ವೇಣುಗೋಪಾಲ ಮನ್ನೆ ಸೂಚಿಸಿದರು.

‘ನಾನು ಈಚೆಗೆ ಇಲ್ಲಿಗೆ ನಿಯುಕ್ತನಾಗಿದ್ದು, ಬಂದಾಗಿನಿಂದ ಗುಣಮಟ್ಟದ ತರಕಾರಿ ಬಳಸಲು ಆಧ್ಯತೆ ನೀಡುತ್ತಿರುವೆ. ಈಗಿನಿಂದ ನಾನೇ ವೈಯಕ್ತಿಕ ಮುತುವರ್ಜಿ ಮಾಡುವೆ’ ಎಂದು ಭರವಸೆ ನೀಡಿದರು.

‘ಸೋಲಾರ್‌ ವ್ಯವಸ್ಥೆ ಕೆಟ್ಟಿದು, ಅದನ್ನು ಸರಿಪಡಿಸಲು ಬುಧವಾರ ಮೆಕ್ಯಾನಿಕ್‌ ತಂಡ ಬರಲಿದೆ. ಇದರಿಂದ ಬಿಸಿ ನೀರಿನ ಸಮಸ್ಯೆ ಬಗೆಹರಿಯಲಿದೆ’ ಎಂದು ಮಾಹಿತಿ ನೀಡಿದರು.

‘ಮುಂದಿನ ದಿನಗಳಲ್ಲಿ ತಂಬಾಕು ಸೇರಿದಂತೆ ಯಾವುದೇ ರೀತಿಯ ನಶಾಯುಕ್ತ ಪದಾರ್ಥಗಳು ಬಳಸುವುದು ಗೊತ್ತಾದರೆ, ಅಂತವರ ಕುರಿತು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುವೆ ಮತ್ತು ಕ್ರಮಕ್ಕೆ ಶಿಫಾರಸ್ಸು ಮಾಡುವೆ’ ಎಂದು ಎಚ್ಚರಿಸಿದರು.

ಸಾಮಾಜಿಕ ಕಾರ್ಯಕರ್ತರಾದ ನಾಗೇಶ, ರಾಮುಲು, ನರಸಿಂಹುಲು ಸೇರಿದಂತೆ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.