ADVERTISEMENT

ಗುರುಮಠಕಲ್: ಚಂಡ್ರಿಕಿ ಗ್ರಾಮದಿಂದ ಅತಿ ಹೆಚ್ಚು ಕರ ವಸೂಲಿ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 5:16 IST
Last Updated 22 ಆಗಸ್ಟ್ 2025, 5:16 IST
ಗುರುಮಠಕಲ್ ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿ ಕಟ್ಟಡ.
ಗುರುಮಠಕಲ್ ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿ ಕಟ್ಟಡ.   

ಗುರುಮಠಕಲ್: ತಾಲ್ಲೂಕಿನಲ್ಲಿ ಆ.12ರಂದು ಜರುಗಿದ ವಿಶೇಷ ಕರ ವಸೂಲಿ ಅಭಿಯಾನದಲ್ಲಿ ತಾಲ್ಲೂಕಿನ ಎಲ್ಲ 18 ಗ್ರಾ.ಪಂಗಳಿಂದ ಒಟ್ಟು ₹15,55,750 ಕರ ಸಂಗ್ರಹ ಮಾಡಲಾಗಿದೆ.

ಚಂಡ್ರಿಕಿ ಗ್ರಾ.ಪಂನಿಂದ ಅತಿ ಹೆಚ್ಚು(₹1,73,920) ಕರ ಸಂಗ್ರಹವಾಗಿದ್ದರೆ, ಮೀನಾಸಾಪುರದಿಂದ ಅತೀ ಕಡಿಮೆ(₹4 ಸಾವಿರ) ಸಂಗ್ರಹ ಮಾಡಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಮಾಹಿತಿ ನೀಡಿದೆ.

ಮೀನಾಸಪುರ ಗ್ರಾಮ ಪಂಚಾಯಿತಿಯ ಪಂಪ್ ಆಪರೇಟರ್ ಆಗಿದ್ದ ಚನ್ನಪ್ಪ ನಜರಾಪುರ ಅವರು ಅಭಿಯಾನ ನಡೆದ ದಿನವೇ ಮೃತಪಟ್ಟಿದ್ದ ಕಾರಣ ಕರ ವಸೂಲಿ ಮಾಡಲು ಸಾಧ್ಯವಾಗಿಲ್ಲ ಎಂದು ಪಂಚಾಯಿತಿ ತಿಳಿಸಿದೆ.

ADVERTISEMENT

ಪ್ರತಿ ವರ್ಷವೂ ಕರ ಸಂಗ್ರಹಣೆಗೆ ಸಂಬಂಧಿಸಿದಂತೆ ಅಭಿಯಾನ ಜರುಗುತ್ತವೆ. ಆದರೆ, ಪ್ರಸಕ್ತ ಸಾಲಿನಲ್ಲಿ ಪ್ರತಿ ಗ್ರಾಮ ಪಂಚಾಯಿತಿಯಿಂದ ಕನಿಷ್ಠ ₹1 ಲಕ್ಷ ಕರ ವಸೂಲಿ ಮಾಡುವ ಗುರಿ ನೀಡಲಾಗಿತ್ತು. ಅದಕ್ಕೆ ಪೂರಕವಾಗಿ ತಾಲ್ಲೂಕಿನ 9 ಪಂಚಾಯಿತಿಗಳು ಗುರಿ ಸಾಧಿಸಿವೆ. ನಾಲ್ಕು ಪಂಚಾಯಿತಿಗಳು ಗುರಿಗೆ ಬಹುತೇಕ ಹತ್ತಿರ ಇವೆ ಎಂದು ತಾ.ಪಂ ಇಒ ಅಂಬ್ರೇಷ ವಿವರಿಸಿದರು.

ಕಾಕಲವಾರ ₹1.71ಲಕ್ಷ, ಚಪೆಟ್ಲಾ ₹1.18 ಲಕ್ಷ, ಮಾಧ್ವಾರ ₹1.16 ಲಕ್ಷ, ಗಾಜರಕೋಟ ₹1.07 ಲಕ್ಷ, ಕೊಂಕಲ್ ₹1.06ಲಕ್ಷ, ಕಾಳಬೆಳಗುಂದಿ ₹1.02 ಲಕ್ಷ, ಚಿನ್ನಾಕಾರ ₹1.0 ಲಕ್ಷ, ಪಸಪುಲ್ ₹98 ಸಾವಿರ, ಪುಟಪಾಕ ₹84 ಸಾವಿರ, ಅನಪುರ ₹74 ಸಾವಿರ, ಯಂಪಾಡ ₹71ಸಾವಿರ, ಕಂದಕೂರ₹57 ಸಾವಿರ, ಯಲ್ಲೇರಿ ₹50 ಸಾವಿರ, ಯಲಸತ್ತಿ ₹50 ಸಾವಿರ, ಅಜಾಲಾಪುರ ₹36 ಸಾವಿರ, ಜೈಗ್ರಾಮ ₹ 30 ಸಾವಿರ ಸೇರಿದಂತೆ ಒಟ್ಟು ₹15.55 ಲಕ್ಷ ಕರ ವಸೂಲು ಮಾಡಲಾಗಿದೆ ಎಂದು ತಾ.ಪಂ ಎಡಿ ಶರಣಪ್ಪ ಮೈಲಾರಿ ಹೇಳಿದ್ದಾರೆ.

ಗ್ರಾಮಗಳಲ್ಲಿ ಮೂಲಸೌಲಭ್ಕ ಅಭಿವೃದ್ಧಿ ಪಡಿಸಲು ಕರ ವಸೂಲಿ ಅತ್ಯವಶ್ಯವಾಗಿದೆ. ಸಾರ್ವಜನಿಕರು ಸಮಯಕ್ಕೆ ಕರ ಪಾವತಿಸಬೇಕು
ಅಂಬ್ರೇಷ ಪಾಟೀಲ ತಾ.ಪಂ. ಇಒ
ಕಳೆದ ವರ್ಷ ಮೂರು ತಿಂಗಳಲ್ಲಿ ಸಂಗ್ರಹವಾದ ಕರ ₹17.55 ಲಕ್ಷ. ಈ ವರ್ಷ ಅಭಿಯಾನ ನಡೆಸಿದ ಒಂದೇ ದಿನಕ್ಕೆ ₹15.55 ಲಕ್ಷ ಸಂಗ್ರಹಿಸಲಾಗಿದೆ
ಶರಣಪ್ಪ ಮೈಲಾರಿ ತಾ.ಪಂ ಎಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.