ADVERTISEMENT

ಗುರುಮಠಕಲ್‌: ಎಪಿಎಂಸಿಯಲ್ಲಿನ ಅನ್ಯಾಯ ಸರಿಪಡಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2021, 16:28 IST
Last Updated 1 ಫೆಬ್ರುವರಿ 2021, 16:28 IST
ಗುರುಮಠಕಲ್ ಪಟ್ಟಣದಲ್ಲಿ ಸೋಮವಾರ ರೈತರು ತಹಶೀಲ್ದಾರ್ ಸಂಗಮೇಶ ಜಿಡಗೆ ಅವರಿಗೆ ಮನವಿ ಪತ್ರ ನೀಡಿದರು
ಗುರುಮಠಕಲ್ ಪಟ್ಟಣದಲ್ಲಿ ಸೋಮವಾರ ರೈತರು ತಹಶೀಲ್ದಾರ್ ಸಂಗಮೇಶ ಜಿಡಗೆ ಅವರಿಗೆ ಮನವಿ ಪತ್ರ ನೀಡಿದರು   

ಗುರುಮಠಕಲ್: ‘ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿನ ಕಮಿಷನ್ ಏಜೆಂಟ್ ವರ್ತಕರು ರೈತರ ಉತ್ಪನ್ನಗಳನ್ನು ಖರೀದಿಸುವಾಗ ಮಾಡುತ್ತಿರುವ ಅನ್ಯಾಯ ಸರಿಪಡಿಸಬೇಕು’ ಎಂದು ಆಗ್ರಹಿಸಿ ಮಾರುಕಟ್ಟೆ ವ್ಯಾಪ್ತಿಯ ಗ್ರಾಮಗಳ ರೈತರು ಸೋಮವಾರ ಬಸ್ ನಿಲ್ದಾಣದ ಹತ್ತಿರದ ಹನುಮ ಮಂದಿರದಿಂದ ಪ್ರತಿಭಟನಾ ಮೆರವಣಿಗೆಯ ಮೂಲಕ ಆಗಮಿಸಿ ತಹಶೀಲ್ದಾರ್ ಸಂಗಮೇಶ ಜಿಡಗೆ ಅವರಿಗೆ ಮನವಿ ಪತ್ರ ನೀಡಿದರು.

ಕೆಲ ದಿನಗಳ ಹಿಂದೆ ಗುರುಮಠಕಲ್ ಎಪಿಎಂಸಿಯಲ್ಲಿ ರೈತರ ಉತ್ಪನ್ನಗಳ ಖರೀದಿಯ ಸಮಯದಲ್ಲಿ ಶೇ 3 ಕಮಿಷನ್ ಪಡೆಯುತ್ತಿರುವ, ಅಧಿಕೃತ ಬಿಲ್ ನೀಡದೆ, ಬಿಳಿ ಕಾಗದದ ಮೇಲೆ ಪಟ್ಟಿ (ಬಿಲ್) ಬರೆದು ಕೊಡುತ್ತಿರುವುದು ಹಾಗೂ ಹಮಾಲಿ, ಸೂಟ್ ಹೆಸರಲ್ಲಿ ರೈತರಿಂದ ದೋಚುತ್ತಿದ್ದಾರೆ ಎಂದು ಮಾರುಕಟ್ಟೆ ಸಮಿತಿಯ ಅಧಿಕಾರಿಗಳಿಗೆ ದೂರು ನೀಡಿದರೂ ಉಪಯೋಗವಾಗಿಲ್ಲ ಎಂದು ರೈತ ಮುಖಂಡ ರವೀಂದ್ರರೆಡ್ಡಿ ಪೋತುಲ್ ದೂರಿದರು.

ಮಾರುಕಟ್ಟೆಯಲ್ಲಿನ ಅನ್ಯಾಯದ ಕುರಿತು ದೂರು ನೀಡಿದಾಗ ಕಾಟಾಚಾರಕ್ಕೆ ಎನ್ನುವಂತೆ ಅಂಗಡಿಗಳ ಪರಿಶೀಲನೆ ಮಾಡಿರುವುದು ಖಂಡನೀಯ. ಭೇಟಿ ನೀಡಿದ ಮಾರುಕಟ್ಟೆ ಸಮಿತಿ ಅಧಿಕಾರಿ ಕೆಲವೊಂದು ಅಂಗಡಿಗಳನ್ನು ಪರಿಶೀಲಿಸಿದ್ದಾರೆ. ಆದರೆ, ವರ್ತಕರು ಹೇಳಿದ್ದನ್ನು ಮಾತ್ರ ಕೇಳಿಸಿಕೊಂಡು ಅವರು ವರದಿ ನೀಡಿದ್ದಾರೆ. ದೂರು ನೀಡಿದವರನ್ನಾಗಲಿ, ರೈತರನ್ನಾಗಲಿ ವಿಶ್ವಾಸಕ್ಕೆ ಪಡೆಯದೆ ಏಕಪಕ್ಷೀಯವಾಗಿ ವರದಿ ನೀಡಿದ್ದಾರೆ ಎಂದು ಆರೋಪಿಸಿದರು.

ADVERTISEMENT

ನಾರಾಯಣ ಮಜ್ಜಿಗೆ, ಕತಲಪ್ಪ ಬೇಡರ್, ಶರಣು ಮೇಧಾ, ಶ್ರೀನಿವಾಸರೆಡ್ಡಿ ಕೊರಡೆ, ಮಹಾಂತೇಶ ಶಕಲಾಸಪಲ್ಲಿ, ನರಸಪ್ಪ ಬೇಡರ್, ಗೋಪಾಲಕೃಷ್ಣಾ ಮೇಧಾ, ಲಾಲಪ್ಪ ತಲಾರಿ, ಸಾಯಿರೆಡ್ಡಿ ಬೂದೂರು, ಶಂಕ್ರಪ್ಪ ಬೂದೂರು, ವೆಂಕಟಪ್ಪ ಯಾದವ್, ಬಲವಂತರೆಡ್ಡಿ ಪೋತುಲ್, ಜಗದೀಶ ಬೆಸ್ತ, ಭೀಮಪ್ಪ ಮಂಗಮ್ಮೋಳ, ಲಕ್ಷ್ಮಪ್ಪ ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.