ADVERTISEMENT

ಯರಗೋಳ | ಸೇತುವೆ ಮೇಲೆ ನೀರು: ಹಾನಿಯಾಗುವ ಆತಂಕ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 7:12 IST
Last Updated 13 ಡಿಸೆಂಬರ್ 2025, 7:12 IST
11yargole10.jpg
11yargole10.jpg   

ಹತ್ತಿಕುಣಿ(ಯರಗೋಳ): ಹತ್ತಿಕುಣಿ ಜಲಾಶಯದ ಕಾಲುವೆಗಳ ದುರಸ್ತಿ ಆಗದ ಪರಿಣಾಮ ಹತ್ತಿಕುಣಿ ಕ್ಯಾಂಪ್ ಹತ್ತಿರದ ರಸ್ತೆ ಮೇಲೆ ಅಪಾರ ಪ್ರಮಾಣದ ನೀರು ನಿರಂತರ ಹರಿಯುತ್ತಿದೆ. ಇದರಿಂದಾಗಿ ಯಾದಗಿರಿ-ಸೇಡಂ ಸಂಪರ್ಕ ಸೇತುವೆಗೆ ಹಾನಿಯಾಗುವ ಸಾಧ್ಯತೆಯಿದೆ.

ಕರ್ನಾಟಕ ನೀರಾವರಿ ನಿಗಮ ವ್ಯಾಪ್ತಿಯ ಹತ್ತಿಕುಣಿ ಜಲಾಶಯವು, ಉತ್ತಮ ಮಳೆಯಿಂದಾಗಿ ಭರ್ತಿಯಾಗಿದೆ. ಆದರೆ ಇಲಾಖೆ ಅಧಿಕಾರಿಗಳ, ಸರ್ಕಾರದ ನಿರ್ಲಕ್ಷದಿಂದ ರೈತರ ಸಾವಿರಾರು ಎಕರೆ ಜಮೀನಿನ ಬೆಳೆಗಳಿಗೆ ನೀರು ಹರಿಸುವ ಕಾಲುವೆಗಳು ಮಾತ್ರ ದುರಸ್ತಿಯಾಗಿಲ್ಲ. ಜಲಾಶಯದಿಂದ ಕಾಲುವೆಗೆ ಹರಿಸುವ ನೀರು ಹಲವು ಭಾಗಗಳಲ್ಲಿ ಒಡೆದು ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಹರಿಯುತ್ತಿದೆ.

2 ತಿಂಗಳಿನಿಂದ ಜಲಾಶಯ ಮುಂಭಾಗದ ಕಾಲುವೆ ಒಡೆದು ಅಪಾರ ಪ್ರಮಾಣದ ನೀರು ರಾಜ್ಯ ಹೆದ್ದಾರಿ ರಸ್ತೆ ಮೇಲೆ ಹರಿಯುತ್ತಿದೆ. ಸೇತುವೆ ಮೇಲೆ ನೀರು ಸಂಗ್ರಹವಾಗಿ ವಾಹನ ಸಂಚಾರರಿಗೆ ತೊಂದರೆಯಾಗಿದೆ. ರಸ್ತೆ ಸಂಪೂರ್ಣ ಕಿತ್ತು ಹೋಗಿ ಗುಂಡಿಗಳು ಬಿದ್ದಿವೆ. ಸೇತುವೆ ನಿರ್ವಹಣೆ ನೋಡಿಕೊಳ್ಳುವ ಲೋಕೋಪಯೋಗಿ ಇಲಾಖೆ ಸೇತುವೆ ಮೇಲೆ ನಿಲ್ಲುವ ನೀರು ಸರಳವಾಗಿ ಪಕ್ಕದ ಹಳ್ಳಕ್ಕೆ ಹರಿದು ಹೋಗುವಂತೆ ಕೂಡ ಕೆಲಸ ಮಾಡಿಲ್ಲ. ಇದರಿಂದ ಬೃಹತ್ ಸೇತುವೆ ಶಿಥಿಲಗೊಳ್ಳುವ ಆತಂಕ ಜನರಲ್ಲಿ ಕಾಡುತ್ತಿದೆ‌.

ADVERTISEMENT

ನೆರೆಯ ಕೋಡ್ಲಾ ಹಾಗೂ ಸೇಡಂನಲ್ಲಿ ಸಿಮೆಂಟ್ ಕಾರ್ಖಾನೆಗಳು ಇರುವುದರಿಂದ ರಸ್ತೆಯ ಮೇಲೆ ನಿತ್ಯ 200ಕ್ಕೂ ಹೆಚ್ಚು ಭಾರ ಹೊತ್ತು ಟ್ಯಾಂಕರ್‌ಗಳು ಹಗಲು-ರಾತ್ರಿ ಸಂಚರಿಸುತ್ತವೆ. ಇದರಿಂದ ಸೇತುವೆ ಶಿಥಿಲಗೊಳ್ಳುವ ಆತಂಕ ಎದುರಾಗಿದೆ. 

ನೀರಾವರಿ ಇಲಾಖೆ ಅಧಿಕಾರಿಗಳು ಅನುದಾನದ ಕೊರತೆ, ಸಿಬ್ಬಂದಿ ಕೊರತೆಯಿದೆ ಎಂದು ಹೇಳುತ್ತಾರೆ. ಹೆಚ್ಚಿನ ಪ್ರಮಾಣದಲ್ಲಿ ನೀರು ವ್ಯರ್ಥವಾಗುವುದನ್ನು ತಡೆಗಟ್ಟಲು ಕಾಲುವೆ ದುರಸ್ತಿಗೊಳಿಸಬೇಕು. ಅದು ಸಾಧ್ಯವಾಗದಿದ್ದರೆ ಕೂಡಲೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಾರ್ವಜನಿಕರ ಹಿತದೃಷ್ಟಿಯಿಂದ ಕಾಲುವೆಯಿಂದ ಪೋಲಾಗಿ ಹರಿಯುವ ನೀರು ಸರಳವಾಗಿ ಹಳ್ಳಕ್ಕೆ ಹರಿಯಲು ಚರಂಡಿ ವ್ಯವಸ್ಥೆ ಮಾಡಬೇಕು. ಆಗಷ್ಟೆ ಎಲ್ಲರಿಗೂ ಅನುಕೂಲವಾಗುತ್ತದೆ ಎಂದು ಹತ್ತಿಕುಣಿ ಗ್ರಾಮದ ಮುಖಂಡ ಶರಣಪ್ಪ ಸೋಮಣ್ಣೋರ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.