ಕೆಂಭಾವಿ: ‘ಅತಿವೃಷ್ಠಿಯಿಂದ ರಾಜ್ಯದ ರೈತರು ಬೆಳೆಹಾನಿಯಾಗಿ ಸಂಕಷ್ಠದಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ರೈತರ ನೆರವಿಗೆ ಧಾವಿಸದೆ ಧರ್ಮಗಳ ಹೆಸರಲ್ಲಿ ಜಗಳ ಹಚ್ಚುವಲ್ಲಿ ತೊಡಗಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹರಿಹಾಯ್ದರು.
ಸಮೀಪದ ಹೆಗ್ಗಣದೊಡ್ಡಿ-ಗೊಡ್ರಿಹಾಳ ಅವಳಿ ಗ್ರಾಮದಲ್ಲಿ ಸೋಮವಾರ ನೂತನ ಗ್ರಾಮ ಪಂಚಾಯಿತಿ ಕಟ್ಟಡ, ಧರ್ಮರ ಮಠದ ನೂತನ ಕಟ್ಟಡ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಭೂಮಿ ಪೂಜಾ ನೆರವೇರಿಸಿ ಮಾತನಾಡಿದರು.
‘ಬೆಳೆಹಾನಿಯಾದ ಬಗ್ಗೆ ಅಧಿಕಾರಿಗಳು ಸಮೀಕ್ಷೆ ನಡೆಸುತ್ತಿದ್ದು, ಸರ್ಕಾರಕ್ಕೆ ವರದಿ ಸಲ್ಲಿಸಿ ಸೂಕ್ತ ಪರಿಹಾರ ನೀಡಲಾಗುವುದು’ ಎಂದರು.
‘ಸುರಪುರ ಹಾಗೂ ಶಹಾಪುರ ಭಾಗದ ಹಲವು ಗ್ರಾಮಗಳು ಮೊದಲು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದವು, ದಿನಗಳು ಕಳೆದಂತೆ ಅಭಿವೃದ್ಧಿ ಪರ್ವ ಪ್ರಾರಂಭವಾಗಿದೆ. ನನ್ನ ಅವಧಿಯಲ್ಲಿ ರಸ್ತೆ, ಕುಡಿಯುವ ನೀರು, ವಿದ್ಯುತ್ ಸಮ್ಯಸ್ಯೆ, ಶಿಕ್ಷಣ ಹಾಗೂ ಆರೋಗ್ಯ ಹಲವು ಸೌಕರ್ಯಗಳನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ’ ಎಂದು ಹೇಳಿದರು.
‘ಜಿಲ್ಲೆಯಲ್ಲಿ ಹೊಸತಾಗಿ ಮಂಜೂರಾದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆಗ್ಗಣದೊಡ್ಡಿ ಗ್ರಾಮವು ಒಂದಾಗಿದೆ. ಕೆಕೆಆರ್ಡಿಬಿ ಹಾಗೂ ಇನ್ನಿತರೆ ಅನುದಾನದಲ್ಲಿ ಸದ್ಯದಲ್ಲೆ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣವಾಗಲಿದೆ’ ಎಂದರು.
ಇದಕ್ಕೂ ಮೊದಲು ಸುಮಾರು ₹20 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ನೂತನ ಗ್ರಾಮ ಪಂಚಾಯಿತಿ ಕಟ್ಟಡ ಹಾಗೂ ₹ 50 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಧರ್ಮರ ಮಠದ ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸಿದರು.
ಮಾನಪ್ಪ ಸೂಗೂರ ಪ್ರಾಸ್ತಾವಿಕ ಮಾತನಾಡಿದರು. ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ ಓರ್ಡಿಯಾ, ಡಿಎಚ್‍ಒ ಡಾ.ಮಹೇಶ ಬಿರಾದಾರ, ಗ್ರಾ.ಪಂ ಅಧ್ಯಕ್ಷ ಸಿದ್ಧನಗೌಡ ಗುತ್ತೇದಾರ, ಇಒ ಬಸವರಾಜ ಸಜ್ಜನ, ಟಿಎಚ್‍ಒ ಡಾ.ಆರ್. ವಿ. ನಾಯಕ, ಡಾ.ಸಂಜಯ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಾಪುಗೌಡ ಪಾಟೀಲ, ಶರಣಪ್ಪ ಸಲಾದಪೂರ, ಶಿವಮಹಾಂತ ಚಂದಾಪೂರ, ಶರಣಬಸ್ಸು ಡಿಗ್ಗಾವಿ, ಮಹಿಪಾಲರೆಡ್ಡಿ ಡಿಗ್ಗಾವಿ, ಗ್ರಾಪಂ ಮಾಜಿ ಅದ್ಯಕ್ಷ ಲಾಳೆ ಪಟೇಲ, ಪಿಟಿಒ ರಾಜಕುಮಾರ ಇದ್ದರು.
ಮಡಿವಾಳಪ್ಪ ಹೆಗ್ಗಣದೊಡ್ಡಿ ನಿರೂಪಿಸಿದರು, ನಾಗಣ್ಣ ಪೂಜಾರಿ ಸ್ವಾಗತಿಸಿದರು, ಸೋಮು ಭಿಂಗೇರಿ ವಂದಿಸಿದರು.
ಧರ್ಮದ ಹೆಸರಲ್ಲಿ ಜಗಳ ಹಚ್ಚುತ್ತಿರುವ ಬಿಜೆಪಿ ಬೆಳೆಹಾನಿ ಸೂಕ್ತ ಪರಿಹಾರ ನೀಡಲಾಗುವುದು ₹20 ಲಕ್ಷ ವೆಚ್ಚದ ನೂತನ ಗ್ರಾ.ಪಂ ಕಟ್ಟಡ ಲೋಕಾರ್ಪಣೆ
ಜೆಸಿಬಿ ಮೂಲಕ ಹೂಮಳೆ ಸಮೀಪದ ಹೆಗ್ಗಣದೊಡ್ಡಿ-ಗೊಡ್ರಿಹಾಳ ಅವಳಿ ಗ್ರಾಮದಲ್ಲಿ ವಿವಿಧ ಕಾರ್ಯಕ್ರಮ ಉದ್ಘಾಟನೆಗೆ ಆಗಮಿಸಿದ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಅವರನ್ನು ಅವಳಿ ಗ್ರಾಮಸ್ಥರು ಅದ್ದೂರಿಯಾಗಿ ಬರಮಾಡಿಕೊಂಡರು. ಸಿಡಿಮದ್ದುಗಳ ನಿರಂತರ ಸಪ್ಪಳ ಬಾಜಾಭಜಂತ್ರಿ ಮೆರವಣಿಗೆಯ ಮೂಲಕ ವೇದಿಕೆಗೆ ಕರೆ ತಂದು ಸುಮಾರು 200 ಕೆಜಿ ಭಾರದ ಬೃಹತ್ ಸೇಬು ಹಣ್ಣಿನ ಹಾರ ಹಾಕಿದರು. ಜೆಸಿಬಿ ಮೂಲಕ ಹೂಮಳೆ ಗರೆದು ತಮ್ಮ ಅಭಿಮಾನವನ್ನು ತೋರ್ಪಡಿಸಿದರು. ನಂತರ ಅವಳಿ ಗ್ರಾಮದ ನೂರಕ್ಕೆ ಹೆಚ್ಚು ಯುವಕರು ಅಭಿಮಾನಿಗಳು ಸಚಿವರನ್ನು ಸತ್ಕರಿಸಿ ಗೌರವಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.