ಶಹಾಪುರ: ತಾಲ್ಲೂಕಿನಲ್ಲಿ ಎರಡು ದಿನದಿಂದ ಸುರಿದ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದೆ.
ನಗರದ ಹಳಿಸಗರ ಬಡಾವಣೆಯ ಗಾಂಜಾರ ಓಣಿಯಲ್ಲಿ ಆರು ಮನೆಗಳಿಗೆ ಮಳೆ ನೀರು ಹಾಗೂ ಚರಂಡಿ ನೀರು ನುಗ್ಗಿದೆ.
‘ನೀರು ನುಗ್ಗಿದ್ದ ಮನೆಗಳಿಗೆ ತೆರಳಿ, ನೀರು ಸರಾಗ ಹರಿಯುವಂತೆ ಮಾಡಲು ಕ್ರಮವಹಿಸಲಾಗಿದೆ’ ಎಂದು ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ ತಿಳಿಸಿದ್ದಾರೆ. ಅಲ್ಲದೇ, ಮಳೆಯಿಂದ ಹಾನಿಯಾದ ಪ್ರದೇಶದ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಂಗಳವಾರ ದಿನವಿಡೀ ಜಿಟಿ ಜಿಟಿ ಮಳೆಯಿಂದ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ. ಕೃಷಿ ಕೆಲಸಗಳಿಗೆ ತೆರಳಿದ ಕಾರ್ಮಿಕರು ಮಳೆಯಲ್ಲಿಯೇ ನೆನೆಯುತ್ತಾ ಮರಳಿ ಗೂಡು ಸೇರಿದರು.ಜಿಟಿ ಜಿಟಿ ಮಳೆಯಿಂದ ಜಮೀನುಗಳ ತಗ್ಗು ಪ್ರದೇಶದಲ್ಲಿ ನೀರು ಸಂಗ್ರಹವಾಗಿವೆ. ಹತ್ತಿ ಬೆಳೆಗೆ ಹಾನಿಯಾಗುವ ಆತಂಕ ರೈತರದ್ದು.
ರಸ್ತೆ ಹೊಂಡದಲ್ಲಿ ನೀರು:
ತಾಲ್ಲೂಕಿನ ಶಿರವಾಳ ರಸ್ತೆಯು ಹದಗೆಟ್ಟು ಹೋಗಿದ್ದು, ರಸ್ತೆಯ ನಡುವೆ ದೊಡ್ಡ ಕಂದಕ ಬಿದ್ದಿವೆ. ಮಳೆ ನೀರು ಹೊಂಡಗಳಲ್ಲಿ ತುಂಬಿ, ವಾಹನಗಳ ಸಂಚಾರಕ್ಕೆ ತೊಂದರೆಯಾಯಿತು. ಭಾರತ್ ಮಾಲಾ ರಸ್ತೆ ಹಾಗೂ ರೈಲ್ವೆ ಕಾಮಗಾರಿಗಾಗಿ ಇದೇ ರಸ್ತೆ ಮೇಲೆ ಕೆಲಸಕ್ಕಾಗಿ ಟಿಪ್ಪರ್‌ಗಳು ಸಂಚರಿಸಿದ್ದರಿಂದ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ. ಕೂಡಲೇ ರಸ್ತೆ ದುರಸ್ತಿ ಮಾಡಬೇಕು. ಕನಿಷ್ಠ ಮಣ್ಣು ಹಾಕಿ ತಗ್ಗು ಮುಚ್ಚಬೇಕು’ ಎಂದು ಶಿರವಾಳ ಗ್ರಾಮದ ಮುಖಂಡ ಮರೆಪ್ಪ ಪ್ಯಾಟಿ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.