
ವಡಗೇರಾ: ತಾಲ್ಲೂಕಿನ ವ್ಯಾಪ್ತಿಯಲ್ಲಿ ಅಧಿಕ ಭಾರದ ವಾಹನಗಳು ಸಂಚರಿಸುವದರಿಂದ ಗ್ರಾಮೀಣ ರಸ್ತೆಗಳು, ಜಿಲ್ಲಾ ಮುಖ್ಯ ರಸ್ತೆಗಳು ಸಂಪೂರ್ಣವಾಗಿ ಹಾಳಾಗುತ್ತಿರುವದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ.
ವಡಗೇರಾ ತಾಲ್ಲೂಕಿನ ವ್ಯಾಪ್ತಿಯಲ್ಲಿ ಕೃಷ್ಣಾ ಹಾಗೂ ಭೀಮಾ ನದಿಯಿಂದ ಅಕ್ರಮ ಮರಳು ಸಾಗಾಟ ರಾಜಾರೋಷವಾಗಿ ನಡೆಯುತ್ತದೆ. ಮೀತಿ ಮೀರಿದ ಭಾರವನ್ನು ತುಂಬಿಕೊಂಡು ಟಿಪ್ಪರ್‌ಗಳು ಸಂಚರಿಸುತ್ತವೆ. ಇದರ ಜತೆಗೆ ಟಿಪ್ಪರಗಳಲ್ಲಿ ಒಣ ಮಣ್ಣು (ಮರಂ) ತುಂಬಿಕೊಂಡು ಟಿಪ್ಪರಗಳು ಸಂಚರಿಸುತ್ತಿರುವದರಿಂದ ಗ್ರಾಮೀಣ ಭಾಗದ ಟಾರ ರಸ್ತೆಗಳಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿವೆ. ಅಲ್ಲದೆ ಟಾರ್ ರಸ್ತೆಗೆ ಹಾಕಿರುವ ಜಲ್ಲಿಕಲ್ಲುಗಳು ಚಲ್ಲಾ ಪಿಲ್ಲಿಯಾಗಿ ರಸ್ತೆ ತುಂಬೆಲ್ಲಾ ಹರಡಿವೆ. ಹೀಗಾಗಿ ಟಾರ್ ರಸ್ತೆಗಳು ಮಣ್ಣಿನ ರಸ್ತೆಗಳಾಗಿ ಪರಿವರ್ತನೆಗೊಂಡಿವೆ.
ಸರ್ಕಾರದ ನಿಯಮದ ಪ್ರಕಾರ ಗ್ರಾಮೀಣ ಪ್ರದೇಶದ ರಸ್ತೆಗಳಲ್ಲಿ ಸುಮಾರು 18 ರಿಂದ 20 ಟನ್, ಜಿಲ್ಲಾ ಮುಖ್ಯ ರಸ್ತೆಗಳಲ್ಲಿ 30 ಟನ್, ರಾಜ್ಯ ಹೆದ್ದಾರಿಗಳಲ್ಲಿ 40 ಟನ್ ಭಾರದ ವಾಹನಗಳು ಸಂಚರಿಸಬೇಕು. ಆದರೆ ತಾಲ್ಲೂಕಿನಲ್ಲಿ ನಿಯಮ ಬಾಹಿರವಾಗಿ ಗ್ರಾಮೀಣ ರಸ್ತೆಗಳಲ್ಲಿ ಸುಮಾರು 25 ರಿಂದ 30 ಟನ್ ಅಧಿಕ ಭಾರದ ಟಿಪ್ಪರ್‌ಗಳು ಸಂಚರಿಸುತ್ತಿರುವುದರಿಂದ ರಸ್ತೆಗಳು ಹದಗೆಟ್ಟಿವೆ.
ವಡಗೇರಾ ತಾಲ್ಲೂಕಿನ ವ್ಯಾಪ್ತಿಯಲ್ಲಿ ಸಂಚರಿಸುವ ಟಿಪ್ಪರಗಳು 10 ಬ್ರಾಸ್, 6 ಬ್ರಾಸ್ ವ್ಯಾಪ್ತಿಯನ್ನು ಹೊಂದಿವೆ. ಇದರ ಜತೆಗೆ ಟಿಪ್ಪರ ಮಾಲೀಕರು ಟಿಪ್ಪರಿನ ಮೇಲೆ ಮತ್ತೇ 2 ಅಡಿಗಳಷ್ಟು ಎತ್ತರವನ್ನು ಹೆಚ್ಚಿಸುವದರಿಂದ ರಸ್ತೆಗಳು ಹಾಳಾಗುತ್ತಿವೆ.
ಕೋಟ್ಯಾಂತರ ರೂಪಾಯಿ ಖರ್ಚು: ಪ್ರತಿ ವರ್ಷ ಸರ್ಕಾರ ಜಿಲ್ಲಾ ಮುಖ್ಯ ರಸ್ತೆಗಳ ಹಾಗೂ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗಾಗಿ ಹಾಗೂ ದುರಸ್ತಿಗಾಗಿ ಖರ್ಚು ಮಾಡುತ್ತದೆ ಆದರೆ ಅಧಿಕ ಭಾರದ ವಾಹನಗಳ ಸಂಚಾರದಿಂದ ರಸ್ತೆಗಳು ಹಾಳಾಗುತ್ತಿವೆ.
‘ಜಿಲ್ಲೆಯಲ್ಲಿ ಗಣಿ–ಭೂವಿಜ್ಞಾನ ಮತ್ತು ಆರ್‌ಟಿಒ ಕಚೇರಿಗಳು ಇವೆ. ಇವುಗಳ ಎದುರುಗಡೆಯೆ ಅಧಿಕ ಭಾರದ ವಾಹನಗಳು ಹಗಲು ಹೊತ್ತಿನಲ್ಲೇ ಮರಳು ಸಾಗುತ್ತಿವೆ. ಕೆಲವು ಟಿಪ್ಪರಗಳಿಗೆ ವಾಹನ ಸಂಖ್ಯೆಯೆ ಇರುವದಿಲ್ಲ. ಇಂತಹ ಟಿಪ್ಪರಗಳು ಸಂಚರಿಸಿದರು ಸಹ ಅಧಿಕಾರಿಗಳು ಮಾತ್ರ ಮೌನವಾಗಿದ್ದಾರೆ’ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
‘ಅಧಿಕ ಭಾರವನ್ನು ಹೊತ್ತುಕೊಂಡು ಸಂಚರಿಸುವ ಟಿಪ್ಪರಗಳ ವೇಗಕ್ಕೆ ರಸ್ತೆಗಳಲ್ಲಿ ಧೂಳು ಆವರಿಸಿ ಅನೇಕ ವೇಳೆ ಅಪಘಾತಗಳು ಸಂಭವಿಸಿವೆ. ಆದಕಾರಣ ಸಂಬಂಧ ಪಟ್ಟ ಅಧಿಕಾರಿಗಳು ಗ್ರಾಮೀಣ ಹಾಗೂ ಜಿಲ್ಲಾ ಮುಖ್ಯ ರಸ್ತೆಯ ಮೇಲೆ ಅಧಿಕ ಭಾರದ ವಾಹನಗಳ ಸಂಚಾರವನ್ನು ನಿಷೇಧಿಸಬೇಕು’ ಎಂಬುವದು ಪ್ರಜ್ಞಾವಂತ ನಾಗರೀಕರ ಅನಿಸಿಕೆಯಾಗಿದೆ.
ಗ್ರಾಮೀಣ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ಸಾಮರ್ಥ್ಯಕ್ಕಿಂತ ಅಧಿಕ ಭಾರದ ವಾಹನಗಳು ಸಂಚರಿಸುವದರಿಂದ ರಸ್ತೆಗಳು ಹಾಳಾಗುತ್ತಿವೆ. ಇದಕ್ಕೆ ಕಡಿವಾಣ ಹಾಕಿದಾಗ ಮಾತ್ರ ಗ್ರಾಮೀಣ ರಸ್ತೆಗಳು ಬಹಳ ವರ್ಷದವರೆಗೆ ಸುರಕ್ಷಿತವಾಗಿರುತ್ತವೆ ಹಾಗೆಯೆ ರಸ್ತೆಗಳು ಹಾಳಾಗುವುದಿಲ್ಲಮಂಜುನಾಥ ಸಂಗಾಯಿ ಜಿಪಂ ಪ್ರಭಾರಿ ಕಾರ್ಯನಿರ್ವಾಹಕ ಎಂಜಿನಿಯರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.