ಯಾದಗಿರಿ: ‘ಪ್ರಸ್ತುತ ದಿನಗಳಲ್ಲಿ ಸನಾತನ ಧರ್ಮವು ಸಂಕಷ್ಟವನ್ನು ಎದುರಿಸುತ್ತಿದೆ. ಇಂಥ ಕಾಲಘಟ್ಟದಲ್ಲಿ ನಮ್ಮ ಪರಂಪರೆ, ಸಂಸ್ಕೃತಿಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಇಡೀ ಹಿಂದೂ ಸಮಾಜ ಜಾತಿ ಮತವನ್ನೂ ಮೀರಿ ಒಗ್ಗೂಡುವ ಅಗತ್ಯವಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಹೈದರಾಬಾದ್‌ನ ಉತ್ತರಾದಿಮಠದಲ್ಲಿ ಶನಿವಾರ ಉತ್ತರಾದಿಮಠದ ಸತ್ಯಾತ್ಮತೀರ್ಥ ಶ್ರೀಪಾದರ 30ನೇ ಚಾತುರ್ಮಾಸದ ಕಾರ್ಯಕ್ರಮದಲ್ಲಿ ಸತ್ಯಪ್ರಮೋದ ತೀರ್ಥರ 108ನೇ ಜನ್ಮದಿನದ ಅಂಗವಾಗಿ ಕೇಂದ್ರ ಸರ್ಕಾರ ಹೊರತಂದಿರುವ ಸತ್ಯಪ್ರಮೋದ ತೀರ್ಥರ ಬೆಳ್ಳಿಯ ನಾಣ್ಯವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಕೆಲವರು ನಮ್ಮ ಸನಾತನ ಧರ್ಮವನ್ನು ಅಳಿಸಿ ಹಾಕುವ ಹಗಲುಗನಸು ಕಾಣುತ್ತಾ, ಅದರಲ್ಲಿಯೇ ಮುಳುಗಿದ್ದಾರೆ. ಆದರೆ, ನಾವು ಹಿಂದಿನಿಂದಲೂ ಸನಾತನ ಧರ್ಮ ಪದ್ಧತಿಯಿಂದಲೇ ಗುರುತಿಸಿಕೊಂಡು, ಅದರಲ್ಲಿಯೇ ಬದುಕು ಸಾಗುತ್ತಿದ್ದೇವೆ’ ಎಂದರು.
‘ಉತ್ತರಾದಿಮಠದ ಹಿಂದಿನ ಪೀಠಾಧಿಪತಿಗಳಾಗಿದ್ದ ಸತ್ಯಪ್ರಮೋದ ತೀರ್ಥರು ಅತ್ಯಂತ ಕಷ್ಟದ ಸಂದರ್ಭದಲ್ಲೇ ತಮ್ಮ ತಪಶಕ್ತಿಯಿಂದ ಧರ್ಮ ಹಾಗೂ ಜ್ಞಾನ, ಧ್ಯಾನಮಾರ್ಗವನ್ನು ತೋರುವ ಮೂಲಕ ಅಸಂಖ್ಯಾತ ಭಕ್ತರಿಗೆ ಗುರುಗಳಾಗಿದ್ದರು. ಇಂದು ಸತ್ಯಪ್ರಮೋದ ತೀರ್ಥರ ಬೆಳ್ಳಿಯ ನಾಣ್ಯವನ್ನು ಬಿಡುಗಡೆ ಮಾಡಿರುವುದು ನಮ್ಮ ಸುದೈವ’ ಎಂದು ಹೇಳಿದರು.
‘ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಇಂದು ಹಲವಾರು ಕ್ಷೇತ್ರಗಳಲ್ಲಿ ಉತ್ತುಂಗಕ್ಕೆ ಏರಿದೆ. ಭಾರತೀಯರು ದೊಡ್ಡಣ್ಣ ಆಗಲು ಬಯಸುವುದಿಲ್ಲ, ಹಿರಿಯಣ್ಣ ಆಗಲು ಬಯಸುತ್ತದೆ’ ಎಂದರು.
ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ದಿನೇಶ ಕುಮಾರ್ ಅವರು ಮಾತನಾಡಿ, ‘ಸತ್ಯಪ್ರಮೋದತೀರ್ಥರು ದೇಶ ಸ್ವಾತಂತ್ರ್ಯವೇಳೆ ಉತ್ತರಾದಿಮಠದ ಪೀಠಾರೋಹಣಗೈದಿದ್ದರು. ದೇಶದ ವಿಭಜನೆಯ ದಿನಗಳಲ್ಲಿ ಹಿಂದೂ ಧರ್ಮದ ಸನಾತನ ಸಂಸ್ಕೃತಿ ಮತ್ತು ವೇದ ಪರಂಪರೆಯನ್ನು ಉಳಿಸಿ ಬೆಳೆಸಿದ ಧೀಮಂತರು’ ಎಂದರು.
‘ಭಾರತೀಯ ತತ್ವಶಾಸ್ತ್ರವು ಎಲ್ಲ ವಿಭಾಗಗಳಲ್ಲೂ ಪಾಂಡಿತ್ಯದ ಉತ್ತುಂಗದಲ್ಲಿದೆ. ಅದರಲ್ಲಿ ವಿಶೇಷವಾಗಿ ದೈತ ದರ್ಶನವನ್ನು ವಾದ ಮಂಡನೆ, ಪಾಠ ಪ್ರವಚನ, ಗ್ರಂಥ ರಚನೆ, ಪ್ರಾಚೀನ ಹಸ್ತಪ್ರತಿಗಳ ಸಂಗ್ರಹ, ಸಂಶೋಧನೆ, ಅಪರೂಪದ ಪುಸ್ತಕಗಳ ಪ್ರಕಟಣೆಯನ್ನು ಶ್ರೀಮಂತಗೊಳಿಸಿದ್ದಾರೆ’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬ್ರಹ್ಮೋಸ್ ಸಿಇಒ ಜಯತೀರ್ಥ ಜೋಶಿ, ಬೆಂಗಳೂರಿನ ಶ್ರೀಜಯತೀರ್ಥ ವಿದ್ಯಾಪೀಠದ ಕುಲಪತಿ ರಂಗಾಚಾರ್ಯ ಗುತ್ತಲ್, ಪ್ರಾಂಶುಪಾಲರಾದ ಸತ್ಯಧ್ಯಾನಾಚಾರ್ಯ ಕಟ್ಟಿ, ಉತ್ತರಾದಿಮಠದ ಕಾರ್ಯನಿರ್ವಾಹಕ ಅಧಿಕಾರಿ ವಿದ್ಯಾಧೀಶಾಚಾರ್ಯ ಗುತ್ತಲ್, ಮಠದ ದಿವಾನರಾದ ಶಶಿ ಆಚಾರ್ಯ, ಹೈದರಾಬಾದ್ ಉತ್ತರಾದಿ ಮಠದ ಮಠಾಧಿಕಾರಿ ಜಯತೀರ್ಥಾಚಾರ್ಯ ಪಗಡಾಲ, ಪ್ರಮುಖರಾದ ಮುಕ್ಕುಂದಿ ಶ್ರೀಕಾಂತಾಚಾರ್ಯ, ರವೀಂದ್ರನ್, ಶ್ರೀಧರಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Cut-off box - ‘ಭಕ್ತರ ಸುದೈವ’ ‘ಗುರುಗಳಾಗಿದ್ದ ಸತ್ಯಪ್ರಮೋದ ತೀರ್ಥರು ಹಲವು ಧಾರ್ಮಿಕ ಮತ್ತು ಆಧ್ಯಾತ್ಮಿಕ ಸಾಧನೆಗಳ ಮೂಲಕ ಹೆಸರುವಾಸಿಯಾಗಿದ್ದರು’ ಎಂದು ಉತ್ತರಾದಿಮಠದ ಸತ್ಯಾತ್ಮತೀರ್ಥ ಶ್ರೀಪಾದರು ಅನುಗ್ರಹ ಸಂದೇಶದಲ್ಲಿ ಹೇಳಿದರು. ‘ಸತ್ಯಪ್ರಮೋದ ತೀರ್ಥರಂತಹ ಮಹಾನ್ ಗುರುಗಳ ಹೆಸರಿನಲ್ಲಿ ನಾಣ್ಯ ಬಿಡುಗಡೆ ಆಗುತ್ತಿರುವುದು ಭಾಗ್ಯನಗರದ ಭಕ್ತರ ಸುದೈವ’ ಎಂದು ಬಣ್ಣಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.